- 2026 ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟ
- ಬಿಸಿಸಿಐ ಆಯ್ಕೆ ಸಮಿತಿ ನಿರ್ಧಾರಕ್ಕೆ ಕ್ರಿಸ್ ಸಂತಸ
- ಎಲ್ಲ ಓಕೆ ಆದರೆ ಗಿಲ್ಗೆ ಸ್ಥಾನ ಕೊಡದಿದ್ದಕ್ಕೆ ಬೇಸರ
ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಈಗಾಗಲೇ ಬಿಸಿಸಿಐ ಭಾರತ ತಂಡವನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ನಡುವೆ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ಶುಭಮನ್ ಗಿಲ್ಗೆ ತಂಡದಲ್ಲಿ ಸ್ಥಾನ ನೀಡದಿರುವುದು ಸದ್ಯ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಟೀಮ್ ಇಂಡಿಯಾದ ಮಾಜಿ ಆಯ್ಕೆಗಾರ ಕ್ರಿಸ್ ಶ್ರೀಕಾಂತ್ ಪ್ರತಿಕ್ರಿಯಿಸಿದ್ದಾರೆ.
ಟಿ20 ವಿಶ್ವಕಪ್ ತಂಡದಿಂದ ಗಿಲ್ರನ್ನು ಕೈಬಿಟ್ಟಿರುವುದು ನನಗೆ ಅರ್ಥವೇ ಆಗುತ್ತಿಲ್ಲ. ಆಯ್ಕೆ ಸಮಿತಿಯು ಇಂತಹ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಖಂಡಿತ ನಾನು ನಿರೀಕ್ಷಿಸಿರಲಿಲ್ಲ. ಶುಭಮನ್, ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ಒಂದಷ್ಟು ಸಮಯದಿಂದ ಟಿ20 ಕ್ರಿಕೆಟ್ನಲ್ಲಿ ಲಯವನ್ನು ಕಳೆದುಕೊಂಡಿದ್ದಾರೆ. ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಅವರ ಸ್ಟ್ರೈಕ್ ರೇಟ್ಗೆ ಹೋಲಿಸಿದರೆ ಗಿಲ್ ಅವರ ಸ್ಟ್ರೈಕ್ ರೇಟ್ ತುಂಬಾ ಕಡಿಮೆಯಾಗಿದೆ ಎಂದರು.
ರಿಂಕು ಸಿಂಗ್ ಮತ್ತು ಇಶಾನ್ ಕಿಶನ್ ಅವರಿಗೆ ತಂಡದಲ್ಲಿ ಸ್ಥಾನ ನೀಡಿದ್ದು ಒಳ್ಳೆಯ ನಿರ್ಧಾರ. ಇದಕ್ಕೆ ನಾನು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯನ್ನು ಮೆಚ್ಚುತ್ತೇನೆ ಎಂದು ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ಹೇಳಿದ್ದಾರೆ. ಗಿಲ್ ಈ ವರ್ಷ ಏಷ್ಯಾ ಕಪ್ ಟೂರ್ನಿಯಿಂದ ಟಿ20ಗೆ ಕಮ್ಬ್ಯಾಕ್ ಮಾಡಿದರು. ಇದೇ ವೇಳೆ ಅವರಿಗೆ ಉಪನಾಯಕತ್ವದ ಜವಾಬ್ದಾರಿಗಳನ್ನೂ ಹಸ್ತಾಂತರಿಸಲಾಯಿತು. ಇದರೊಂದಿಗೆ, ಟೆಸ್ಟ್ ಮತ್ತು ಏಕದಿನ ಪಂದ್ಯಗಳಿಗೆ ಕ್ಯಾಪ್ಟನ್ ಆಗಿದ್ದ ಗಿಲ್, ಭವಿಷ್ಯದಲ್ಲಿ ಟಿ20 ನಾಯಕತ್ವದ ಜವಾಬ್ದಾರಿಗಳನ್ನೂ ವಹಿಸಿಕೊಳ್ಳುತ್ತಾರೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಗಿಲ್ ನಿರೀಕ್ಷೆಗಳಿಗೆ ತಕ್ಕಂತೆ ಆಡಲು ವಿಫಲರಾದ ಬೆನ್ನಲ್ಲೇ ಅವರನ್ನು ಟಿ20 ತಂಡದಿಂದ ಕೈಬಿಡಲಾಗಿದೆ.
2026 ಟಿ20 ವಿಶ್ವಕಪ್ಗೆ ಭಾರತ ತಂಡ
ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ (ಉಪನಾಯಕ), ರಿಂಕು ಸಿಂಗ್, ಜಸ್ಪ್ರೀತ್ ಬುಮ್ರಾ, ಅರ್ಶ್ದೀಪ್ ಸಿಂಗ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್, ಇಶಾನ್ ಕಿಶನ್.