ಕ್ರಿಸ್ ಶ್ರೀಕಾಂತ್, ಗೌತಮ್ ಗಂಭೀರ್
- 30 ರನ್‌ಗಳಿಂದ ಟೀಮ್ ಇಂಡಿಯಾ ಹೀನಾಯ ಸೋಲು
- ಟೆಸ್ಟ್ ಕ್ರಿಕೆಟ್‌ಗೆ ಸೂಕ್ತವಾದ ಪಿಚ್ ಅಲ್ಲವೇ ಅಲ್ಲ
- ಗಂಭೀರ್ ಹೀಗೆ ಹೇಳಿದ್ದು ನಿಜಕ್ಕೂ ಸರಿಯಲ್ಲ
ಮುಂಬೈ: ಕೋಲ್ಕತದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 30 ರನ್‌ಗಳಿಂದ ಹೀನಾಯ ಸೋಲುಂಡಿದ್ದು ಸದ್ಯ ಹಲವರ ಟೀಕೆ, ವ್ಯಂಗಗಳಿಗೆ ಗುರಿಯಾಗಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ಹಿನ್ನಡೆಯಲ್ಲಿದೆ. ಪಿಚ್ ಕುರಿತು ಹೆಡ್ ಕೋಚ್ ಗೌತಮ್ ಗಂಭೀರ್ ಕೊಟ್ಟ ಹೇಳಿಕೆಗೆ ಇದೀಗ ಟೀಮ್ ಇಂಡಿಯಾದ ಮಾಜಿ ಹಿರಿಯ ಕ್ರಿಕೆಟಿಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಂದ್ಯ ಸೋತ ಬೆನ್ನಲ್ಲೇ ಟೀಮ್ ಇಂಡಿಯಾ ಬ್ಯಾಟರ್ಗಳ ವಿಫಲತೆಯನ್ನು ಎತ್ತಿಹಿಡಿದ ಗಂಭೀರ್, ಈಡನ್ ಗಾರ್ಡನ್ಸ್ ಪಿಚ್ನಲ್ಲಿ ಏನು ಸಮಸ್ಯೆ ಇರಲಿಲ್ಲ. ಇಲ್ಲಿ ಬ್ಯಾಟರ್ಗಳ ವೈಫಲ್ಯವೇ ಸೋಲಿಗೆ ಮುಖ್ಯ ಕಾರಣವಾಯಿತು ಎಂದರು. ಇದು ಕ್ರಿಕೆಟ್ ಪ್ರಿಯರ ಹಾಗೂ ಮಾಜಿ ಕ್ರಿಕೆಟಿಗರ ಕೆಂಗಣ್ಣಿಗೆ ಗುರಿಯಾಯಿತು. ಪಿಚ್ ಬೆಂಬಲಿಸಿ ಮಾತನಾಡಿದ ಗಂಭೀರ್ ವಿರುದ್ಧ ಕಿಡಿಕಾರಿರುವ ಕೃಷ್ಣಮಾಚಾರಿ ಶ್ರೀಕಾಂತ್, ಅಸಲಿಗೆ ಈ ಪಿಚ್ ಟೆಸ್ಟ್ ಕ್ರಿಕೆಟ್‌ಗೆ ಸೂಕ್ತವಲ್ಲ ಎಂದಿದ್ದಾರೆ.
"ನಮ್ಮ ಸ್ವಂತ ನೆಲದಲ್ಲಿ ನಾವು ಹೀನಾಯ ಸೋಲನ್ನು ಅನುಭವಿಸಿದ್ದೇವೆ. ಪೂರ್ಣ ತಂಡದೊಂದಿಗೆ ಆಡುತ್ತಿದ್ದರೂ, ಟೀಮ್ ಇಂಡಿಯಾ ಇಂತಹ ಅವಮಾನಕರ ಸೋಲನ್ನು ಅನುಭವಿಸಿದೆ ಎಂಬುದನ್ನು ನನ್ನಿಂದ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ವಿಕೆಟ್ ಹೋಗುತ್ತಿದ್ದ ರೀತಿ ನೋಡಿದ ಮೇಲೂ ಪಿಚ್ ಬೆಂಬಲಿಸಿಕೊಂಡು ಮಾತನಾಡಿದ್ದು ಸರಿಯಲ್ಲ. ಮೊದಲಿಗೆ ಇದು ಟೆಸ್ಟ್ ಕ್ರಿಕೆಟ್‌ಗೆ ಸೂಕ್ತವಾದ ಪಿಚ್ ಅಲ್ಲವೇ ಅಲ್ಲ. ಮೊದಲ ದಿನದಿಂದಲೇ ಪಿಚ್ ಸಾಕಷ್ಟು ತಿರುವು ಪಡೆದುಕೊಂಡಿತು. ನಾವು ಈ ತಪ್ಪನ್ನು ಹಲವು ವರ್ಷಗಳಿಂದ ಮಾಡುತ್ತಿದ್ದೇವೆ. ತಿರುಗುವ ಪಿಚ್‌ಗಳನ್ನು ಕೇಳುತ್ತಿದ್ದೇವೆ. ಆದರೆ, ನಾವು ನಮ್ಮ ಸೋಲುಗಳಿಂದ ಕಲಿಯುತ್ತಿಲ್ಲ" ಎಂದರು.
"ಇದು ಭಯಾನಕ ಪಿಚ್ ಎಂಬುದರಲ್ಲಿ ಅನುಮಾನವಿಲ್ಲ. ಅಂತಹ ಕಷ್ಟಕರವಾದ ಅಖಾಡದಲ್ಲಿ ಬ್ಯಾಟರ್ಗಳು ಟೆಕ್ನಿಕ್ನಿಂದ ಆಡಬೇಕು ಎಂದು ಗಂಭೀರ್ ಹೇಳಿರುವುದು ಒಪ್ಪುವಂತದ್ದಲ್ಲ. ಆ ಪಿಚ್ನಲ್ಲಿ ನಾನೂ ಬೌಲಿಂಗ್ ಮಾಡಿದ್ರೂ ವಿಕೆಟ್ ಸಿಗುತ್ತಿತ್ತು. ಎರಡೂ ತಂಡಗಳು ಹೆಣಗಾಡಿವೆ. ಗಂಭೀರ್ ಒತ್ತಡದಲ್ಲಿದ್ದಾರೋ ಅಥವಾ ಇಲ್ಲವೋ ಅನ್ನೋದು ನನಗೆ ತಿಳಿದಿಲ್ಲ. ಆದರೆ, ಟೀಮ್ ಇಂಡಿಯಾ ಮಾತ್ರ ಒತ್ತಡದಲ್ಲಿದೆ ಎಂಬುದು ಖಚಿತ" ಎಂದು ಶ್ರೀಕಾಂತ್ ಹೇಳಿದ್ದಾರೆ,(ಏಜೆನ್ಸೀಸ್).