ಕೊರಿಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್: ತನ್ವಿ, ಶ್ರೀಕಾಂತ್ ಭರವಸೆ
ಅಸನ್ (ಕೊರಿಯಾ): ಇತ್ತೀಚೆಗೆ ತೈಪೆ ಓಪನ್ ಪ್ರಶಸ್ತಿ ಜಯಿಸಿರುವ ತನ್ವಿ ಶರ್ಮ ಹಾಗೂ ಅನುಭವಿ ಕಿಡಂಬಿ ಶ್ರೀಕಾಂತ್ ಮಂಗಳವಾರ ಆರಂಭವಾಗಲಿರುವ ಕೊರಿಯಾ ಮಾಸ್ಟರ್ಸ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸವಾಲು ಮುನ್ನಡೆಸಲಿದ್ದಾರೆ. ಆಗಸ್ಟ್ 17ಕ್ಕೆ ತವರಿನಲ್ಲಿ ಪ್ರಾರಂಭವಾಗಲಿರುವ ಬಿಡಬ್ಲುೃಎಫ್ ವಿಶ್ವ ಚಾಂಪಿಯನ್‌ಷಿಪ್‌ಗೆ ಮುನ್ನ ಈ ಟೂರ್ನಿ ಅಂತಿಮ ಹಂತದ ಸಿದ್ಧತೆ ಎನಿಸಿದೆ.
ಪಂಜಾಬ್‌ನ 17 ವರ್ಷದ ತನ್ವಿ ಶರ್ಮ ಮಹಿಳಾ ಸಿಂಗಲ್ಸ್‌ನ ಅರ್ಹತಾ ಸುತ್ತಿನ ಸ್ಪರ್ಧಿ ಎದುರು ಅಭಿಯಾನ ಆರಂಭಿಸಲಿದ್ದು, ತನ್ನ ಕನಸಿನ ಓಟ ಮುಂದುವರಿಸುವ ನಿರೀಕ್ಷೆ ಇದೆ. ಮಹಿಳಾ ಸಿಂಗಲ್ಸ್‌ನಲ್ಲಿ ಭಾರತ 10 ಆಟಗಾರ್ತಿಯರು ಕಣಕ್ಕಿಳಿಯಲಿದ್ದು, 7ನೇ ಶ್ರೇಯಾಂಕಿತೆ ಮಾಳವಿಕಾ ಬನ್ಸೋಡ್ ಕೂಡ ಅರ್ಹತಾ ಸುತ್ತಿನ ಆಟಗಾರ್ತಿಯ ವಿರುದ್ಧ ಸೆಣಸಲಿದ್ದಾರೆ.
ಮೈಸೂರಿನ ತಾನ್ಯಾ ಹೇಮಂತ್, ಅಗ್ರ ಶ್ರೇಯಾಂಕಿತೆ ಜಪಾನ್‌ನ ಹಿನಾ ಅಕೇಚಿ ವಿರುದ್ಧ ಕಠಿಣ ಸವಾಲು ಎದುರಿಸಲಿದ್ದಾರೆ. 8ನೇ ಶ್ರೇಯಾಂಕಿತೆ ಅನ್ಮೋಲ್ ಖರ್ಬ್, ಇಶಾರಾಣಿ ಬರುವಾ ಇತರ ಭಾರತೀಯರೆನಿಸಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಆರು ಆಟಗಾರರಿದ್ದು, 3ನೇ ಶ್ರೇಯಾಂಕಿತ ಶ್ರೀಕಾಂತ್, ಇಸ್ರೇಲ್‌ನ ಡೇನಿಯಲ್ ಡುಬೊವೆಂಕೊ ವಿರುದ್ಧ ಅಭಿಯಾನ ಪ್ರಾರಂಭಿಸಲಿದ್ದಾರೆ. ಸನೀತ್ ದಯಾನಂದ್, ಜಪಾನ್‌ನ ಯುಡೈ ಒಕಿಮೊಟೊರನ್ನು ಎದುರಿಸಿದರೆ, ಕನ್ನಡಿಗ ಮಿಥುನ್ ಮಂಜುನಾಥ್ ಚೀನಾದ ಝು ಕ್ಸುವಾನ್ ಚೆನ್ ಅವರನ್ನು ಎದುರಿಸಲಿದ್ದಾರೆ.