ವಿರಾಟ್ ಕೊಹ್ಲಿ ಮತ್ತು ಆರ್‌ಸಿಬಿ ತಂಡದ ಆಟಗಾರರು
- ಮಾರ್ಚ್ 28ರಿಂದ ಐಪಿಎಲ್ 19ನೇ ಆವೃತ್ತಿ ಆರಂಭ
- ಈ ಸೀಸನ್ ಆರಂಭಕ್ಕೂ ಮುನ್ನ ಆರ್‌ಸಿಬಿ ಆಟಗಾರರಿಗೆ ಕೊಹ್ಲಿ ಮಹತ್ವದ ಸಲಹೆ
- ಕಳೆದ ವರ್ಷಕ್ಕಿಂತ ಪೈಪೋಟಿ ಇನ್ನೂ ಹೆಚ್ಚಿರಲಿದೆ ಎಂದ ದಾಖಲೆಗಳ ಸರದಾರ
ಬೆಂಗಳೂರು: ಟೀಮ್ ಇಂಡಿಯಾದ 'ರನ್ ಮೆಷಿನ್', ದಾಖಲೆಗಳ ಸರದಾರ, ಕ್ರಿಕೆಟ್ ಅಭಿಮಾನಿಗಳ ನೆಚ್ಚಿನ 'ಕಿಂಗ್' ವಿರಾಟ್ ಕೊಹ್ಲಿ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ ಬಿಡಿ. ದಿಗ್ಗಜ ಕ್ರಿಕೆಟಿಗರ ಸಾಲಿನಲ್ಲಿ ಈಗಾಗಲೇ ತಮ್ಮ ಹೆಸರನ್ನು ಮುದ್ರಿಸಿರುವ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್ನ ಮೂರು ಫಾರ್ಮೆಟ್ನಲ್ಲಿಯೂ ಹಲವು ದಾಖಲೆಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಪ್ರಸ್ತುತ, ಲಂಡನ್ನಲ್ಲಿ ನೆಲೆಸಿರುವ ವಿರಾಟ್, ಐಪಿಎಲ್ 19ನೇ ಆವೃತ್ತಿಗಾಗಿ ಭಾರತಕ್ಕೆ ಬಂದಿದ್ದಾರೆ. ಅದಾಗಲೇ, ಆರ್‌ಸಿಬಿ ತಂಡವನ್ನೂ ಸೇರಿ, ಮೈದಾನದಲ್ಲಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.
ಇದೇ ಮಾರ್ಚ್ 28ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕಿಕ್ಸ್ಟಾರ್ಟ್ ಪಂದ್ಯಕ್ಕೆ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ನದ್ಧವಾಗಿದೆ. ಸನ್ರೈಸರ್ಸ್ ಹೈದರಾಬಾದ್ ಎದುರು ಕಣಕ್ಕಿಳಿಯಲು ಸಜ್ಜಾಗಿರುವ ಆರ್‌ಸಿಬಿ, ಸತತ ಎರಡನೇ ಬಾರಿಗೆ ಟ್ರೋಫಿ ಎತ್ತಿ ಹಿಡಿಯಲು ಬಯಸಿದೆ. ಈ ಸಂದರ್ಭದಲ್ಲಿ, ವಿರಾಟ್ ಕೊಹ್ಲಿ ತಮ್ಮ ತಂಡದ ಆಟಗಾರರಿಗೆ ಮಹತ್ವದ ಸಲಹೆ ಮತ್ತು ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಬಾರಿ ಸ್ಪರ್ಧೆ ಇನ್ನಷ್ಟು ಕಠಿಣವಾಗಲಿದೆ. ಆದ್ದರಿಂದ, ಒಂದು ಕ್ಷಣವೂ ವ್ಯರ್ಥ ಮಾಡಬೇಡಿ. ಕಳೆದ ಎರಡ್ಮೂರು ಸೀಸನ್ಗಳಲ್ಲಿ ಎಲ್ಲಾ ಆಟಗಾರರು ತುಂಬಾ ಶ್ರಮಿಸಿದ್ದಾರೆ. 18ನೇ ಆವೃತ್ತಿಯಲ್ಲಿ ನಾವು ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆವು. ಆದರೀಗ, ಇತರ ತಂಡಗಳು ಸಹ ತುಂಬಾ ಬಲಿಷ್ಠವಾಗಿವೆ. ನಮಗಿರುವ ಕಡಿಮೆ ಸಮಯದಲ್ಲಿ ಹೆಚ್ಚು ಶ್ರಮಿಸಿ, ಕೆಲಸ ಮಾಡಬೇಕು ಎಂದರು.
ಎರಡೂವರೆ ತಿಂಗಳ ಕಾಲ ನಡೆಯಲಿರುವ ಐಪಿಎಲ್ನಲ್ಲಿ ನಾವು ಶೇ.120ರಷ್ಟು ಶ್ರಮ ಹಾಕಿ, ಗೆಲುವು ಸಾಧಿಸಬೇಕು. ನಿಮ್ಮೆಲ್ಲರನ್ನೂ ನೋಡಿದರೆ, ನೀವು ಸವಾಲುಗಳನ್ನು ಎದುರಿಸಲು ಸಿದ್ಧರಿರುವ ಚಾಲೆಂಜರ್ಸ್ ಅನ್ನೋದು ತಿಳಿಯುತ್ತೆ ಎಂದರು. ಇನ್ನು ಆ್ಯಂಡಿ ಫ್ಲವರ್ ಮಾತನಾಡಿ, "ಈ ವರ್ಷ ಆಸಕ್ತಿದಾಯಕ ಹರಾಜು ನಡೆಯಿತು. ಸ್ಪಷ್ಟವಾಗಿ ಹೇಳಬೇಕೆಂದರೆ, ನಮ್ಮ ತಂಡ ಈಗ ಇನ್ನಷ್ಟು ಸುಧಾರಣೆ ಕಂಡಿದೆ. ಒಂದಷ್ಟು ಉತ್ತಮ ಹೊಸ ಆಟಗಾರರು ತಂಡಕ್ಕೆ ಸೇರಿದ್ದಾರೆ. ಇವರನ್ನೆಲ್ಲ ಸೇರಿಸಿಕೊಂಡು ಒಂದು ಬಲಿಷ್ಠ ಟೀಮ್ ಕಟ್ಟುತ್ತೇವೆ" ಎಂದು ಹೇಳಿದರು,(ಏಜೆನ್ಸೀಸ್).