ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಆಧಾರಸ್ತಂಭ ವಿರಾಟ್ ಕೊಹ್ಲಿ, ಕ್ರಿಕೆಟ್ ಕಾಶಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ(IPL) ಪಂದ್ಯದಲ್ಲಿ ಎರಡು ಐತಿಹಾಸಿಕ ಮೈಲಿಗಲ್ಲುಗಳನ್ನು ಸ್ಥಾಪಿಸಿದ್ದಾರೆ. 37ರ ಹರೆಯದಲ್ಲೂ ಯುವಕರನ್ನು ನಾಚಿಸುವಂತೆ ಬ್ಯಾಟ್ ಬೀಸಿದ 'ಕಿಂಗ್' ಕೊಹ್ಲಿ, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬೌಂಡರಿ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
800 ಬೌಂಡರಿಗಳ ಸರದಾರ
ಪಂದ್ಯದ ಆರಂಭದಲ್ಲಿ ಕಗಿಸೊ ರಬಾಡ ಎಸೆತವನ್ನು ಮನಮೋಹಕವಾಗಿ ಬೌಂಡರಿಗಟ್ಟುವ ಮೂಲಕ ವಿರಾಟ್ ಕೊಹ್ಲಿ ತಮ್ಮ ಐಪಿಎಲ್ ಜೀವನದ 800ನೇ ಬೌಂಡರಿ ಪೂರೈಸಿದರು. ಈ ಸಾಧನೆ ಮಾಡಿದ ಜಗತ್ತಿನ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಈಗ ಇವರದ್ದಾಗಿದೆ.
ಈ ಪಟ್ಟಿಯಲ್ಲಿ ಶಿಖರ್ ಧವನ್ (768 ಬೌಂಡರಿ) ಎರಡನೇ ಸ್ಥಾನದಲ್ಲಿದ್ದರೆ, ಡೇವಿಡ್ ವಾರ್ನರ್ (663) ಮತ್ತು ರೋಹಿತ್ ಶರ್ಮಾ (653) ನಂತರದ ಸ್ಥಾನಗಳಲ್ಲಿದ್ದಾರೆ. ಕೊಹ್ಲಿ ಅವರ ಈ ಸ್ಥಿರ ಪ್ರದರ್ಶನ ಅಭಿಮಾನಿಗಳಲ್ಲಿ ಹರ್ಷೋದ್ಗಾರ ಮೂಡಿಸಿದೆ.
ಒಂದೇ ತಂಡದ ಪರ 300 ಸಿಕ್ಸರ್!
ಬೌಂಡರಿಗಳ ಜೊತೆಗೆ ಸಿಕ್ಸರ್‌ಗಳಲ್ಲೂ ಹೊಸ ದಾಖಲೆ ಬರೆದಿರುವ ವಿರಾಟ್, ಐಪಿಎಲ್‌ನಲ್ಲಿ ಒಂದೇ ತಂಡದ ಪರ (ಆರ್‌ಸಿಬಿ) 300 ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಲೀಗ್ ಆರಂಭವಾದಾಗಿನಿಂದಲೂ ಒಂದೇ ಫ್ರಾಂಚೈಸಿಯೊಂದಿಗೆ ನಿಷ್ಠೆಯಿಂದ ಉಳಿದಿರುವ ಕೊಹ್ಲಿ, ಈ ಸಾಧನೆಯ ಮೂಲಕ ಬೆಂಗಳೂರು ಅಭಿಮಾನಿಗಳ ಮೆಚ್ಚಿನ 'ನಮ್ಮ ಕಿಂಗ್' ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಯೂನಿವರ್ಸ್ ಬಾಸ್ ದಾಖಲೆ ಉಡೀಸ್!
ಮತ್ತೊಂದೆಡೆ, ಗುಜರಾತ್ ಟೈಟಾನ್ಸ್ ತಂಡದ ಉದಯೋನ್ಮುಖ ತಾರೆ ಸಾಯಿ ಸುದರ್ಶನ್ ಶತಕದ ಮೂಲಕ ಮಿಂಚಿದರು. ಕೇವಲ 58 ಎಸೆತಗಳಲ್ಲಿ 100 ರನ್ ಸಿಡಿಸಿದ ಅವರು, ಗುಜರಾತ್ ತಂಡ 205 ರನ್‌ಗಳ ಬೃಹತ್ ಮೊತ್ತ ಪೇರಿಸಲು ಕಾರಣರಾದರು.
ಈ ಇನ್ನಿಂಗ್ಸ್ ನಡುವೆ ಸಾಯಿ ಸುದರ್ಶನ್ ಅವರು ಕ್ರಿಸ್ ಗೇಲ್ ಅವರ ದಶಕದ ಹಳೆಯ ದಾಖಲೆಯನ್ನು ಮುರಿದರು. ಐಪಿಎಲ್‌ನಲ್ಲಿ ಕೇವಲ 47 ಇನ್ನಿಂಗ್ಸ್‌ಗಳಲ್ಲಿ 2000 ರನ್ ಪೂರೈಸುವ ಮೂಲಕ ಅತಿ ವೇಗವಾಗಿ ಈ ಮೈಲಿಗಲ್ಲು ತಲುಪಿದ ಆಟಗಾರ ಎಂಬ ಹಣೆಪಟ್ಟಿ ಪಡೆದರು. ಈ ಹಿಂದೆ ಕ್ರಿಸ್ ಗೇಲ್ ಈ ಸಾಧನೆಗೆ 48 ಇನ್ನಿಂಗ್ಸ್ ತೆಗೆದುಕೊಂಡಿದ್ದರು.
"ನನ್ನ ಮೇಲೆ ನನಗೇ ಹೆಚ್ಚಿನ ನಿರೀಕ್ಷೆಗಳಿವೆ. ಕಳೆದ ಕೆಲವು ಪಂದ್ಯಗಳಲ್ಲಿ ನಾನು ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತವಾಗಿ ಪರಿವರ್ತಿಸಲು ಸಾಧ್ಯವಾಗಿರಲಿಲ್ಲ. ಇಂದು ಶತಕ ಸಿಡಿಸಿದ್ದು ತುಂಬಾ ತೃಪ್ತಿ ನೀಡಿದೆ," ಎಂದು ಸಾಯಿ ಸುದರ್ಶನ್ ಪಂದ್ಯದ ನಂತರ ಹೇಳಿದ್ದಾರೆ.
ಪಂದ್ಯದ ಹಾದಿ
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್‌ಗೆ ಆರಂಭದಲ್ಲಿ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಜಲ್‌ವುಡ್ ಕಠಿಣ ಸವಾಲು ನೀಡಿದ್ದರು. ಆದರೆ, ಕ್ರೀಸ್‌ನಲ್ಲಿ ಭದ್ರವಾಗಿ ನೆಲೆನಿಂತ ಸುದರ್ಶನ್, ರೋಮಾರಿಯೋ ಶೆಫರ್ಡ್ ಮತ್ತು ಕೃನಾಲ್ ಪಾಂಡ್ಯ ಅವರ ಓವರ್‌ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಅವರ ಈ ಶತಕದ ಹೋರಾಟಕ್ಕೆ ಆರ್‌ಸಿಬಿಯ ವಿರಾಟ್ ಕೊಹ್ಲಿ ಅವರ ಅನುಭವದ ಆಟವು ತಕ್ಕ ಉತ್ತರ ನೀಡಿತು,(ಏಜೆನ್ಸೀಸ್).