ಕೆ.ಎಲ್​. ರಾಹುಲ್  
ಕ್ರಿಕೆಟ್

ಕೊಹ್ಲಿ ಅಲ್ಲ! ಒತ್ತಡ ಇಳಿಸಿದ್ದೇ ಈತ... ಮೊದಲ ಏಕದಿನ ಪಂದ್ಯ ಗೆದ್ದ ಬೆನ್ನಲ್ಲೇ ಕೆ.ಎಲ್​. ರಾಹುಲ್​ ಹೇಳಿಕೆ ವೈರಲ್​

ಪ್ರಮುಖ ಮುಖ್ಯಾಂಶಗಳು

  • ಕಿವೀಸ್​ ವಿರುದ್ಧ ಮೊದಲ ಏಕದಿನ ಪಂದ್ಯ ಗೆದ್ದ ಭಾರತ
  • ಶತಕ ಮಿಸ್​ ಮಾಡಿಕೊಂಡ ವಿರಾಟ್​ ಕೊಹ್ಲಿ
  • ಪಂದ್ಯದ ಫಿನೀಶರ್​ ಆದ ಕನ್ನಡಿಗ ಕೆ.ಎಲ್. ರಾಹುಲ್
ಗುಜರಾತ್​: ನಿನ್ನೆ (ಜ.11) ಗುಜರಾತಿನ ವಡೋದರಾದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಜಯಗಳಿಸಿತು. ತಂಡದ ಪರ 'ರನ್​ ಮಷಿನ್', ಕ್ರಿಕೆಟ್​ ಲೋಕದ 'ಕಿಂಗ್'​​​ ವಿರಾಟ್ ಕೊಹ್ಲಿ (93 ರನ್​, 91 ಎಸೆತ, 8 ಬೌಂಡರಿ, 1 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಕಿವೀಸ್​ ಪಡೆ ನೀಡಿದ್ದ ಬೃಹತ್​ ಗುರಿಯನ್ನು ನೀರು ಕುಡಿದಷ್ಟು ಸುಲಭವಾಗಿಸಿದರು. ಶತಕದಿಂದ ವಂಚಿತರಾದ ಕೊಹ್ಲಿ ಬಳಿಕ ಆರನೇ ಕ್ರಮಾಂಕದಲ್ಲಿ ಕ್ರೀಸ್​ಗಿಳಿದ ಕೆ.ಎಲ್​. ರಾಹುಲ್​, ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಪಂದ್ಯ ಮುಗಿದ ಬಳಿಕ ಮಾತನಾಡಿದ ಕೆ.ಎಲ್​. ರಾಹುಲ್​​, ನನಗೆ ವಾಷಿಂಗ್ಟನ್​ ಸುಂದರ್​ ಓಡಲು ಸಾಧ್ಯವಿಲ್ಲ ಎಂಬ ವಿಷಯ ಗೊತ್ತಿರಲಿಲ್ಲ. ನನ್ನ ಮೇಲಿದ್ದ ಒತ್ತಡ ಕಡಿಮೆಯಾಗಿದ್ದು, ಆಲ್​ರೌಂಡರ್ ಆಟಗಾರ ಹರ್ಷಿತ್ ರಾಣಾ ಬ್ಯಾಟಿಂಗ್​ನಿಂದ. ಕ್ರೀಸ್​ಗೆ ಬರುತ್ತಿದ್ದಂತೆ ಬಿರುಸಿನ ಬ್ಯಾಟಿಂಗ್ ಮಾಡಿದ್ದೇ ಗುರಿ ತಲುಪಲು ಸಾಧ್ಯವಾಯಿತು. ಆತನ ಸ್ಟ್ರೈಕಿಂಗ್​ನಿಂದಲೇ ಟಾರ್ಗೆಟ್​ ಇನ್ನಷ್ಟು ಸುಲಭ ಎನಿಸಿತು ಎಂದರು.
ಕೊನೆಯ ಓವರ್​ವರೆಗೂ ತಲುಪಿದ ಈ ರೋಚಕ ಪಂದ್ಯದಲ್ಲಿ, ಕೆ.ಎಲ್. ರಾಹುಲ್ 29 ರನ್​ ಬಾರಿಸಿದರೆ ( 21 ಎಸೆತ, 2 ಬೌಂಡರಿ, 1 ಸಿಕ್ಸರ್), ಹರ್ಷಿತ್ ರಾಣಾ ಕೂಡ ಅಜೇಯ 29 ರನ್ ಗಳಿಸಿ (23 ಎಸೆತ, 2 ಬೌಂಡರಿ, 1 ಸಿಕ್ಸರ್) ಭಾರತದ ಗೆಲುವಿಗೆ ಕಾರಣರಾದರು. ಇನ್ನು ಕೊಹ್ಲಿ ಶತಕ ದಾಖಲಿಸಿದರು ಎಂದು ಮೈದಾನದಲ್ಲಿ ಕುಣಿದು, ಸಂಭ್ರಮಿಸಲು ತುದಿಗಾಲಿನಲ್ಲಿ ಕುಳಿತಿದ್ದ ಅಭಿಮಾನಿಗಳ ಆಸೆ ಕಡೆಗೂ ಈಡೇರಲಿಲ್ಲ. ಆದರೆ, ಪ್ಲೇಯರ್​ ಆಫ್​ ದಿ ಮ್ಯಾಚ್​ ಪ್ರಶಸ್ತಿಗೆ ಕೊಹ್ಲಿ ಪಾತ್ರರಾಗಿದ್ದು, ಕೊಹ್ಲಿ ಅಭಿಮಾನಿ ಬಳಗಕ್ಕೆ ಸಂತಸ ನೀಡಿತು.

ಪಂದ್ಯದ ಪೂರ್ಣ ವಿವರ

ಪಂದ್ಯದ ವಿಚಾರಕ್ಕೆ ಬಂದರೆ, ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ತಂಡವು ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 300 ರನ್ ಗಳಿಸಿತು. ಕಿವೀಸ್ ತಂಡದ ಬ್ಯಾಟ್ಸ್‌ಮನ್‌ಗಳಲ್ಲಿ ಡ್ಯಾರೆಲ್ ಮಿಚೆಲ್ (84 ರನ್​, 71 ಎಸೆತ, 5 ಬೌಂಡರಿ, 3 ಸಿಕ್ಸರ್‌), ಹೆನ್ರಿ ನಿಕೋಲ್ಸ್ (62 ರನ್​, 69 ಎಸೆತ, 8 ಬೌಂಡರಿ) ಮತ್ತು ಡೆವೊನ್ ಕಾನ್ವೇ (56 ರನ್​, 67 ಎಸೆತ, 6 ಬೌಂಡರಿ, 1 ಸಿಕ್ಸರ್) ಅರ್ಧಶತಕಗಳನ್ನು ಗಳಿಸಿದರು. ಟೀಮ್ ಇಂಡಿಯಾ ಬೌಲರ್‌ಗಳಲ್ಲಿ ಸಿರಾಜ್, ಹರ್ಷಿತ್ ರಾಣಾ ಮತ್ತು ಪ್ರಸಿದ್ಧ ಕೃಷ್ಣ ತಲಾ ಎರಡು ವಿಕೆಟ್ ಪಡೆದರು. ಕುಲದೀಪ್ ಯಾದವ್ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ್ದ ಭಾರತದ ಪರ ವಿರಾಟ್ ಕೊಹ್ಲಿ (93 ರನ್​, 8 ಬೌಂಡರಿ, 91 ಎಸೆತ, 1 ಸಿಕ್ಸರ್) ಅದ್ಭುತ ಇನ್ನಿಂಗ್ಸ್ ಆಡಿದರು. ಭಾರತ 49 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ ಗುರಿ ತಲುಪಿತು. ಉಳಿದ ಬ್ಯಾಟ್ಸ್‌ಮನ್‌ಗಳಲ್ಲಿ, ಶುಭಮಾನ್ ಗಿಲ್ (56 ರನ್​, 71 ಎಸೆತ 3 ಬೌಂಡರಿ, 2 ಸಿಕ್ಸರ್) ಮತ್ತು ಶ್ರೇಯಸ್ ಅಯ್ಯರ್ (49 ರನ್​, 47 ಎಸೆತ, 4 ಬೌಂಡರಿ, 1 ಸಿಕ್ಸರ್) ಉತ್ತಮ ಪ್ರದರ್ಶನ ನೀಡಿದರು. ಕಿವೀಸ್ ಬೌಲರ್‌ಗಳಲ್ಲಿ ಕೈಲ್ ಜೇಮಿಸನ್ ನಾಲ್ಕು ವಿಕೆಟ್ ಪಡೆದರು. ಆದಿತ್ಯ ಅಶೋಕ್ ಮತ್ತು ಕ್ರಿಶ್ಚಿಯನ್ ಕ್ಲಾರ್ಕ್ ತಲಾ ಒಂದು ವಿಕೆಟ್ ಪಡೆದರು(ಏಜೆನ್ಸೀಸ್​)