ಕೆ.ಎಲ್​. ರಾಹುಲ್​  
ಕ್ರಿಕೆಟ್

ಅಜೇಯ 152 ರನ್! ಪಂಜಾಬ್​ ಕಿಂಗ್ಸ್​ ಬೌಲರ್​ಗಳ ಬೆವರಿಳಿಸಿದ ಕನ್ನಡಿಗನ ಹೆಸರಿಗೆ ಮತ್ತೊಂದು ಐತಿಹಾಸಿಕ ದಾಖಲೆ ​

ಪ್ರಮುಖ ಮುಖ್ಯಾಂಶಗಳು

  • ಇಂದು ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಪಂದ್ಯ
  • ಮೊದಲು ಬ್ಯಾಟ್​ ಮಾಡಿದ ಡಿಸಿ ಪಡೆಗೆ ಕೆ.ಎಲ್​ ರಾಹುಲ್​ರಿಂದ ಸ್ಫೋಟಕ ಇನ್ನಿಂಗ್ಸ್
  • ಕೇವಲ 67 ಎಸೆತಗಳಲ್ಲಿ ಅಜೇಯ 152 ರನ್​
KL Rahul: ಇಂದು ದೆಹಲಿಯ ಅರುಣ್​ ಜೆಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಪಡೆಗೆ ಕನ್ನಡಿಗ ಕೆ.ಎಲ್​. ರಾಹುಲ್ ಅವರಿಂದ ದಾಖಲೆಯ ರನ್​ಗಳ ಹೊಳೆ ಹರಿದುಬಂದಿದೆ.
ಪಂಜಾಬ್ ಕಿಂಗ್ಸ್ ವಿರುದ್ಧ ಓಪನರ್ ಆಗಿ ಕಣಕ್ಕಿಳಿದ ಕೆ.ಎಲ್. ರಾಹುಲ್, ಕೇವಲ 67 ಎಸೆತಗಳಲ್ಲಿ ಅಜೇಯ 152 ರನ್ ಗಳಿಸಿ, ಶ್ರೇಯಸ್​ ಅಯ್ಯರ್​ ಪಡೆಯ ಬೌಲರ್​​ಗಳನ್ನು ಬೆಂಡೆತ್ತಿದ್ದರು. ಕೇವಲ 2 ವಿಕೆಟ್​ ನಷ್ಟಕ್ಕೆ 20 ಓವರ್​ನಲ್ಲಿ 264 ರನ್​ ಕಲೆಹಾಕಿರುವ ಡಿಸಿ ಪರ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ಇನ್ನಿಂಗ್ಸ್‌ ನೀಡಿದ ಆಟಗಾರರಾಗಿ ರಾಹುಲ್​ ಹೊರಹೊಮ್ಮಿದ್ದಾರೆ. ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ಪರ ಬ್ಯಾಟರ್​ ಗಳಿಸಿದ ಅತ್ಯಧಿಕ ವೈಯಕ್ತಿಕ ಸ್ಕೋರ್ ಎಂಬ ದಾಖಲೆಯೂ ಕನ್ನಡಿಗನ ಹೆಸರಿನಲ್ಲಿದೆ.

ಪಂತ್ ದಾಖಲೆ ಉಡೀಸ್​

ಈ ಹಿಂದೆ, ಡೆಲ್ಲಿ ಪರ ಅತ್ಯಧಿಕ ಸ್ಕೋರ್ ದಾಖಲೆ ರಿಷಭ್ ಪಂತ್ ಹೆಸರಿನಲ್ಲಿತ್ತು. 2018ರಲ್ಲಿ ಇದೇ ಮೈದಾನದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಪಂತ್ 128 ರನ್ ಸಿಡಿಸಿದ್ದರು. ಆದರೆ, ರಾಹುಲ್ ತಮ್ಮ ಇತ್ತೀಚಿನ ಇನ್ನಿಂಗ್ಸ್‌ನೊಂದಿಗೆ ಆ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ಇತಿಹಾಸದಲ್ಲಿ ನಂಬರ್ 1 ಸ್ಥಾನವನ್ನು ತಲುಪಿದ್ದಾರೆ. ಇದು ರಾಹುಲ್ ಅವರ ವೃತ್ತಿಜೀವನದಲ್ಲಿ ಆರನೇ ಐಪಿಎಲ್ ಶತಕ ಎಂಬುದು ಗಮನಾರ್ಹ.

ವೇಗದ ಶತಕ

ಈ ಪಂದ್ಯದಲ್ಲಿ ರಾಹುಲ್ ತಮ್ಮ ಐಪಿಎಲ್ ವೃತ್ತಿಜೀವನದ ವೇಗದ ಶತಕ ಗಳಿಸಿದ್ದು ವಿಶೇಷ. ಇದಕ್ಕೂ ಮೊದಲು, 2022ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 56 ಎಸೆತಗಳಲ್ಲಿ ಸೆಂಚುರಿ ದಾಖಲಿಸಿದ್ದರು. ಆದರೀಗ, 47 ಎಸೆತಗಳಲ್ಲಿ 100 ರನ್​ ಪೂರ್ಣಗೊಳಿಸುವ ಮೂಲಕ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್​ ಪ್ರದರ್ಶನವನ್ನು ತೋರಿದ್ದಾರೆ. 12 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಾಯದಿಂದ ಅಜೇಯ 152 ರನ್​ ಕಲೆಹಾಕಿದ್ದಾರೆ.

ಮೊದಲ ಭಾರತೀಯ ಕ್ರಿಕೆಟಿಗ​

ಈ ಇನ್ನಿಂಗ್ಸ್‌ನಲ್ಲಿ, ರಾಹುಲ್ ದೆಹಲಿಯ ದಾಖಲೆಗಳನ್ನು ಮಾತ್ರವಲ್ಲದೆ, ಐಪಿಎಲ್‌ನಲ್ಲಿ ಅಭಿಷೇಕ್ ಶರ್ಮಾ ಅವರ ಅತ್ಯಧಿಕ ವೈಯಕ್ತಿಕ ಸ್ಕೋರ್ 141 ರನ್​ಗಳ ರೆಕಾರ್ಡ್​ ಅನ್ನು ಮುರಿದಿದ್ದಾರೆ. ಇದು ಐಪಿಎಲ್ 2026ರ ಸೀಸನ್​ನಲ್ಲಿ ಇದುವರೆಗಿನ ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿದೆ ಎಂಬುದು ಗಮನಾರ್ಹ. ರಾಹುಲ್ 152 ರನ್‌ಗಳೊಂದಿಗೆ ಈ ದಾಖಲೆಯನ್ನು ಬ್ರೇಕ್​ ಮಾಡಿ, ಇದೀಗ ಐಪಿಎಲ್​ ಇತಿಹಾಸದಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಹೊಂದಿರುವ ಮೊದಲ ಭಾರತೀಯ ಕ್ರಿಕೆಟಿಗನಾಗಿದ್ದಾರೆ.