ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್ ಕೆ.ಎಲ್ ರಾಹುಲ್
- ಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಪಂದ್ಯ
- ಮೊದಲು ಬ್ಯಾಟ್ ಮಾಡಿದ ಡಿಸಿ ಪಡೆಗೆ ಕೆ.ಎಲ್ ರಾಹುಲ್ರಿಂದ ಸ್ಫೋಟಕ ಇನ್ನಿಂಗ್ಸ್
- ಅತ್ಯಧಿಕ ವೈಯಕ್ತಿಕ ಸ್ಕೋರ್ ಗಳಿಸಿದ ಭಾರತೀಯ ಆಟಗಾರ ಕೆ.ಎಲ್. ರಾಹುಲ್
KL Rahul: ಇಂದು ದೆಹಲಿಯ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ 19ನೇ ಆವೃತ್ತಿಯ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ದಾಖಲೆಯ ಶತಕದಾಟ ತೋರಿದ್ದಾರೆ. ಅಜೇಯ 152 ರನ್ ಸಿಡಿಸುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಸ್ಕೋರ್ ಗಳಿಸಿದ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆ ರಾಹುಲ್ ಪಾತ್ರರಾಗಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಪಡೆಗೆ ಕನ್ನಡಿಗ ಕೆ.ಎಲ್. ರಾಹುಲ್ ಅವರಿಂದ ದಾಖಲೆಯ ರನ್ಗಳ ಹೊಳೆ ಹರಿದುಬಂದಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಓಪನರ್ ಆಗಿ ಕಣಕ್ಕಿಳಿದ ಕೆ.ಎಲ್. ರಾಹುಲ್, ಕೇವಲ 67 ಎಸೆತಗಳಲ್ಲಿ ಅಜೇಯ 152 ರನ್ ಗಳಿಸಿ, ಶ್ರೇಯಸ್ ಅಯ್ಯರ್ ಪಡೆಯ ಬೌಲರ್ಗಳನ್ನು ಬೆಂಡೆತ್ತಿದ್ದರು. ಕೇವಲ 2 ವಿಕೆಟ್ ನಷ್ಟಕ್ಕೆ 20 ಓವರ್ನಲ್ಲಿ 264 ರನ್ ಕಲೆಹಾಕಿರುವ ಡಿಸಿ ಪರ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ಇನ್ನಿಂಗ್ಸ್ ನೀಡಿದ ಆಟಗಾರರಾಗಿ ರಾಹುಲ್ ಹೊರಹೊಮ್ಮಿದ್ದಾರೆ. ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ಪರ ಬ್ಯಾಟರ್ ಗಳಿಸಿದ ಅತ್ಯಧಿಕ ವೈಯಕ್ತಿಕ ಸ್ಕೋರ್ ಎಂಬ ದಾಖಲೆಯೂ ಕನ್ನಡಿಗನ ಹೆಸರಿಗೆ ಸೇರಿದೆ.
ಮೊದಲ ಭಾರತೀಯ
ಈ ಇನ್ನಿಂಗ್ಸ್‌ನಲ್ಲಿ, ರಾಹುಲ್ ದೆಹಲಿಯ ದಾಖಲೆಗಳನ್ನು ಮಾತ್ರವಲ್ಲದೆ, ಐಪಿಎಲ್‌ನಲ್ಲಿ ಅಭಿಷೇಕ್ ಶರ್ಮಾ ಅವರ ಅತ್ಯಧಿಕ ವೈಯಕ್ತಿಕ ಸ್ಕೋರ್ 141 ರನ್ಗಳ ರೆಕಾರ್ಡ್ ಅನ್ನು ಮುರಿದಿದ್ದಾರೆ. ಇದು ಐಪಿಎಲ್ 2026ರ ಸೀಸನ್ನಲ್ಲಿ ಇದುವರೆಗಿನ ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿದೆ ಎಂಬುದು ಇಲ್ಲಿ ಗಮನಾರ್ಹ. ರಾಹುಲ್ 152 ರನ್‌ಗಳೊಂದಿಗೆ ಈ ದಾಖಲೆಯನ್ನು ಬ್ರೇಕ್ ಮಾಡಿ, ಇದೀಗ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಹೊಂದಿರುವ ಮೊದಲ ಭಾರತೀಯ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.
ವೇಗದ ಶತಕ
ಈ ಪಂದ್ಯದಲ್ಲಿ ರಾಹುಲ್ ತಮ್ಮ ಐಪಿಎಲ್ ವೃತ್ತಿಜೀವನದ ವೇಗದ ಶತಕ ಗಳಿಸಿದ್ದು ವಿಶೇಷ. ಇದಕ್ಕೂ ಮೊದಲು, 2022ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 56 ಎಸೆತಗಳಲ್ಲಿ ಸೆಂಚುರಿ ದಾಖಲಿಸಿದ್ದರು. ಆದರೀಗ, 47 ಎಸೆತಗಳಲ್ಲಿ 100 ರನ್ ಪೂರ್ಣಗೊಳಿಸುವ ಮೂಲಕ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದಾರೆ. 12 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಾಯದಿಂದ ಅಜೇಯ 152 ರನ್ ಕಲೆಹಾಕಿದ್ದಾರೆ.
ಪಂಜಾಬ್ಗೆ 265 ರನ್ಗಳ ಗುರಿ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವುದಾಗಿ ಹೇಳಿದ ಅಕ್ಷರ್ ಪಟೇಲ್ ಅವರ ನಿರ್ಧಾರವನ್ನು ಸರಿ ಎಂದು ಸಾಬೀತುಪಡಿಸಿದ್ದು ರಾಹುಲ್ ಅವರ ಸ್ಫೋಟಕ ಇನ್ನಿಂಗ್ಸ್. ರಾಹುಲ್ರ 152 ರನ್ ಜೊತೆಗೆ ನಿತೀಶ್ ರಾಣಾ (90 ರನ್) ಸಹಾಯದಿಂದ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಬೃಹತ್ ಮೊತ್ತ ಗಳಿಸಿದೆ. ಟೇಬಲ್ ಟಾಪರ್ಸ್ ಪಂಜಾಬ್ ವಿರುದ್ಧ ರಾಹುಲ್ ಆಡಿದ ಈ ಇನ್ನಿಂಗ್ಸ್ ಇಡೀ ಕ್ರಿಕೆಟ್ ಲೋಕವನ್ನೇ ಬೆರಗಾಗಿಸಿದೆ,(ಏಜೆನ್ಸೀಸ್).