ಕೆಕೆಆರ್ ಆಟಗಾರ ವರುಣ್ ಚಕ್ರವರ್ತಿ
- ಆರ್ಆರ್ ವಿರುದ್ಧದ ಪಂದ್ಯದಲ್ಲಿ ಮೊದಲ ಗೆಲುವು ದಾಖಲಿಸಿದ ಕೆಕೆಆರ್
- ಸತತ ಸೋಲಿನಿಂದ ಕಂಗೆಟ್ಟಿದ್ದ ಅಜಿಂಕ್ಯಾ ರಹಾನೆ ಪಡೆಗೆ ಗೆಲುವಿನ ಬೆಳಕು
- ಡ್ರೆಸ್ಸಿಂಗ್ ರೂಮ್ನಲ್ಲಿ ಆಟಗಾರರು ಕಣ್ಣೀರಿಟ್ಟರು ಎಂದ ವರುಣ್ ಚಕ್ರವರ್ತಿ
KKR vs RR: ಮೂರು ಬಾರಿ ಐಪಿಎಲ್ ಚಾಂಪಿಯನ್ಸ್ ಆಗಿರುವ ಕೋಲ್ಕತ ನೈಟ್ ರೈಡರ್ಸ್ ತಂಡವು ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಸತತ ಆರು ಪಂದ್ಯಗಳಲ್ಲಿ ಸೋತು ಸುಣ್ಣವಾಗಿತ್ತು. ಆದರೆ, ನಿನ್ನೆ ನಡೆದ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ಭಾರೀ ಖುಷಿಯಲ್ಲಿ ತೇಲಾಡಿದ್ದು ವಿಶೇಷ. ಈ ಸಂಭ್ರಮದ ಬಗ್ಗೆ ಸ್ವತಃ ತಂಡದ ಸ್ಪಿನ್ ಮಾಂತ್ರಿಕ ವರುಣ್ ಚಕ್ರವರ್ತಿ ಮಾತನಾಡಿದ್ದಾರೆ.
ಆರಂಭದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮಳೆ ಅಡಚಣೆಯಿಂದ ಒಂದೇ ಒಂದು ಅಂಕವನ್ನು ಪಡೆದು ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿ ಉಳಿದಿದ್ದ ಕೆಕೆಆರ್, 4 ವಿಕೆಟ್ಗಳ ಅಂತರದಲ್ಲಿ ಆರ್ಆರ್ ವಿರುದ್ಧ ಗೆದ್ದು ಬೀಗಿತು. ಈ ಮೂಲಕ 19ನೇ ಆವೃತ್ತಿಯಲ್ಲಿ ತನ್ನ ಚೊಚ್ಚಲ ಜಯ ದಾಖಲಿಸಿತು. ಸತತ ಸೋಲಿನಿಂದ ಕಂಗೆಟ್ಟಿದ್ದ ಅಜಿಂಕ್ಯಾ ರಹಾನೆ ಪಡೆಗೆ ಇದೊಂದು ಗೆಲುವು ಐಪಿಎಲ್ ಫೈನಲ್ ಅನ್ನೇ ಗೆದ್ದಷ್ಟು ಖುಷಿ ನೀಡಿರುವುದು ಗಮನಾರ್ಹ.
"ನಾವು 2024ರಲ್ಲಿ ಐಪಿಎಲ್ ಗೆದ್ದ ವರ್ಷದಲ್ಲಿ ನೋಡದಷ್ಟು ಕಣ್ಣೀರನ್ನು ಆರ್ಆರ್ ವಿರುದ್ಧದ ಪಂದ್ಯದ ಬಳಿಕ ಡ್ರೆಸ್ಸಿಂಗ್ ರೂಮ್ನಲ್ಲಿ ನೋಡಿದೆ. ಈ ಜಯ ಕೋಚಿಂಗ್ ಸಿಬ್ಬಂದಿಗೆ ಸಲ್ಲುತ್ತದೆ. ಏಕೆಂದರೆ ಹೊರಗಿನ ಯಾವುದೇ ಧ್ವನಿ ನಮ್ಮ ಆಟದ ಮೇಲೆ ಪರಿಣಾಮ ಬೀರದಂತೆ ಅವರು ನೋಡಿಕೊಂಡಿದ್ದಾರೆ. ಸಂಪೂರ್ಣವಾಗಿ ಆಧಾರರಹಿತವಾದ ಆರೋಪಗಳನ್ನು ನೀಡುವ ಅನೇಕರಿದ್ದಾರೆ. ಇಂತಹ ಸಮಯದಲ್ಲಿ ನಿಮಗೆ ಉತ್ತಮ ಬೆಂಬಲ ಬೇಕು. ಅದು ನಮಗೆ ಸಿಕ್ಕಿತು ಎಂದರು.
"ಈ ಲೀಗ್ ಅನ್ನು ಅನೇಕರ ಇಂಜುರಿ ಸಮಸ್ಯೆಯಿಂದಲೇ ನಾವು ಪ್ರಾರಂಭಿಸಿದ್ದೇವೆ. ಅದೆಲ್ಲವೂ, ನಮ್ಮ ಸತತ ಸೋಲಿಗೆ ಕಾರಣವಾಯಿತು. ತಂಡದ ಗುರುಗಳಿಗೆ, ವಿಶೇಷವಾಗಿ ಮುಖ್ಯ ಕೋಚ್ ಅಭಿಷೇಕ್ ನಾಯರ್ ಅವರಿಗೆ ಈ ಕ್ರೆಡಿಟ್ ನೀಡಲು ಬಯಸುತ್ತೇನೆ. ಇಂಜುರಿ, ಬಹುಮುಖ್ಯ ಆಟಗಾರರ ಅಲಭ್ಯತೆಯಂತಹ ಪರಿಸ್ಥಿತಿಗಳಲ್ಲಿ ತಂಡವನ್ನು ಮುಂದಕ್ಕೆ ಕೊಂಡೊಯ್ಯಲು ನಿಮಗೆ ಸಾಕಷ್ಟು ಧೈರ್ಯ ಬೇಕು ಎಂದರು.
ಆರ್ಆರ್ ವಿರುದ್ಧದ ಪಂದ್ಯ ಗೆಲ್ಲುವ ಮೂಲಕ ಹತ್ತನೇ ಸ್ಥಾನದಲ್ಲಿದ್ದ ಕೆಕೆಆರ್, ಈಗ 9ನೇ ಸ್ಥಾನಕ್ಕೆ ಜಿಗಿದಿದೆ. ಈಗ ಮುಂಬೈ ಇಂಡಿಯನ್ಸ್ ಅತ್ಯಂತ ಕಳಪೆ ಪ್ರದರ್ಶನದಿಂದ ಕೊನೆ ಸ್ಥಾನವನ್ನು ಅಲಂಕರಿಸಿರುವುದು ಗಮನಾರ್ಹ,(ಏಜೆನ್ಸೀಸ್).