- ಟ್ರೋಫಿ ಗೆಲ್ಲಿಸಿಕೊಟ್ಟ ಶ್ರೇಯಸ್ ಅಯ್ಯರ್ನ ಬೇಡವೆಂದ ಕೆಕೆಆರ್
- ಅಜಿಂಕ್ಯಾ ರಹಾನೆಗೆ ಮತ್ತೊಮ್ಮೆ ನಾಯಕತ್ವ ನೀಡಲು ಫ್ರಾಂಚೈಸಿ ಚಿಂತನೆ
ಬೆಂಗಳೂರು: ಇದೇ ಮಾ.28ರಿಂದ ಐಪಿಎಲ್ 19ನೇ ಆವೃತ್ತಿ ಆರಂಭವಾಗಲಿದ್ದು, ಕ್ರಿಕೆಟ್ ಪ್ರಿಯರಿಗಂತು ಮನರಂಜನೆಯ ಹಬ್ಬ ಜೋರಾಗಲಿದೆ. ಈಗಾಗಲೇ 10 ತಂಡಗಳು ಮೈದಾನದಲ್ಲಿ ಭರ್ಜರಿ ತಯಾರಿಗಳನ್ನು ನಡೆಸುತ್ತಿವೆ. ಈ ನಿಟ್ಟಿನಲ್ಲಿ, ಸಾಕಷ್ಟು ಹೊಸ ಬದಲಾವಣೆಗಳು ಮುನ್ನೆಲೆಗೆ ಬಂದಿವೆ.
ಪ್ರಸ್ತುತ, 10 ಫ್ರಾಂಚೈಸಿಗಳು ತಮ್ಮ ಕಾರ್ಯತಂತ್ರಗಳನ್ನು ಚುರುಕುಗೊಳಿಸುತ್ತಿದ್ದು, ಕಳೆದ ಸೀಸನ್ನಲ್ಲಿ ಮಾಡಿದ ತಪ್ಪುಗಳನ್ನು ಈ ಬಾರಿ ಯಾವುದೇ ಕಾರಣಕ್ಕೂ ರಿಪೀಟ್ ಮಾಡಬಾರದು ಎಂದು ನಿರ್ಧರಿಸಿವೆ. ಅಂತೆಯೇ, 18ನೇ ಆವೃತ್ತಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಲು ಸಾಧ್ಯವಾಗದ ಕೋಲ್ಕತ್ತಾ ನೈಟ್ ರೈಡರ್ಸ್, ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿತು. ಹೀಗಾಗಿ, ತಂಡದ ನಾಯಕತ್ವವನ್ನು ಮತ್ತೆ ಅಜಿಂಕ್ಯಾ ರಹಾನೆಗೆ ನೀಡಲು ಫ್ರಾಂಚೈಸಿ ನಿರ್ಧರಿಸಿರುವುದಾಗಿ ಕ್ರಿಕೆಟ್ ಮೂಲಗಳು ತಿಳಿಸಿವೆ.
ಈ ಹಿಂದೆ ಶ್ರೇಯಸ್ ಅಯ್ಯರ್ಗೆ ಕೆಕೆಆರ್ ತಂಡದ ನಾಯಕತ್ವವನ್ನು ನೀಡಲಾಗಿತ್ತು. ಆಗ, ಆ ಸೀಸನ್ನಲ್ಲಿ ಅವರು ಗೌತಮ್ ಗಂಭೀರ್ ನೇತೃತ್ವದಲ್ಲಿ ಟ್ರೋಫಿ ಗೆಲ್ಲಿಸಿಕೊಟ್ಟರು. ಆದರೀಗ, ಶಾರೂಖ್ ಖಾನ್ ಮಾಲೀಕತ್ವದ ಫ್ರಾಂಚೈಸಿ, ಅಜಿಂಕ್ಯಾ ರಹಾನೆಗೆ ನಾಯಕತ್ವವನ್ನು ಹಸ್ತಾಂತರಿಸಲು ಮುಂದಾಗಿದೆ. ಇದಕ್ಕೆ ಕಾರಣ, ಕಳೆದ ವರ್ಷ ಅಜಿಂಕ್ಯ ಕ್ಯಾಪ್ಟನ್ಸಿಯಲ್ಲಿ ಕೆಕೆಆರ್ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿ ಮುಗಿಸಿತು. ಇದರ ಬೆನ್ನಲ್ಲೇ ತಂಡದಲ್ಲಿ ನಾಯಕನ ಬದಲಾವಣೆಗಳು ಕೂಗು ಜೋರಾಗಿತ್ತು. ಆದಾಗ್ಯೂ, ರಹಾನೆ ಅವರ ಅನುಭವ ತಂಡಕ್ಕೆ ಅಗತ್ಯ ಎಂದು ಮ್ಯಾನೇಜ್‌ಮೆಂಟ್ ಭಾವಿಸಿದೆ.
"ರಹಾನೆ ನಮಗೆ ಅತ್ಯುತ್ತಮ ಆಯ್ಕೆ. ಅವರ ಅನುಭವ ತಂಡಕ್ಕೆ ಬಹಳ ಮುಖ್ಯ. ಫ್ರಾಂಚೈಸಿ ಈಗಾಗಲೇ ಈ ಬಗ್ಗೆ ನಿರ್ಧಾರಕ್ಕೆ ಬಂದಿದೆ" ಎಂದು ಕೆಕೆಆರ್ ಮೂಲಗಳು ಬಹಿರಂಗಪಡಿಸಿವೆ. ಇದಕ್ಕೆ ಸಂಬಂಧಿಸಿದಂತೆ, ಅಧಿಕೃತ ಘೋಷಣೆಯೊಂದೇ ಬಾಕಿ. ಈ ಬಾರಿ ಕೆಕೆಆರ್ ಹರಾಜಿನಲ್ಲಿ ಅತ್ಯಂತ ಅಪಾಯಕಾರಿ ವಿದೇಶಿ ಆಟಗಾರರನ್ನೇ ತಂಡಕ್ಕೆ ಕರೆದುಕೊಂಡಿದೆ. ಕಿವೀಸ್ ಸ್ಟಾರ್ ಆಟಗಾರರಾದ ಫಿನ್ ಅಲೆನ್, ಟಿಮ್ ಸೀಫರ್ಟ್ ಮತ್ತು ರಚಿನ್ ರವೀಂದ್ರ ಜೊತೆಗೆ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ತಂಡದಲ್ಲಿ ಈಗಾಗಲೇ ಸುನಿಲ್ ನರೈನ್, ರೋವ್ಮನ್ ಪೊವೆಲ್, ಮತಿಶಾ ಪತಿರಾನ ಮತ್ತು ಬ್ಲೆಸಿಂಗ್ ಮುಜರಬಾನಿಯಂತಹ ಸ್ಟಾರ್ ಆಟಗಾರರಿದ್ದಾರೆ. ಇನ್ನು ನಾಲ್ವರು ವಿದೇಶಿ ಆಟಗಾರರ ಕೋಟಾದಿಂದ ಅಂತಿಮ ತಂಡದಲ್ಲಿ ಯಾರನ್ನು ಸೇರಿಸಿಕೊಳ್ಳುವುದು ಎಂಬುದು ಈಗ ಮ್ಯಾನೇಜ್ಮೆಂಟ್ಗೆ ದೊಡ್ಡ ಸವಾಲಾಗಿದೆ. ಕೆಕೆಆರ್‌ನ ಪ್ರಮುಖ ಬೌಲರ್ ಹರ್ಷಿತ್ ರಾಣಾ ಗಾಯದ ಕಾರಣದಿಂದಾಗಿ ಈ ಆವೃತ್ತಿಯಿಂದ ಹೊರಗುಳಿದಿದ್ದಾರೆ ಎಂಬ ವರದಿಗಳಿವೆ. ಈ ಬಗ್ಗೆ ಫ್ರಾಂಚೈಸಿ ಏನು ಹೇಳುತ್ತೆ? ಅವರ ಸ್ಥಾನದಲ್ಲಿ ಯಾರನ್ನು ಆಡಿಸುತ್ತೆ? ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).