- 19 ಎಸೆತಗಳಲ್ಲಿ 45 ರನ್ ಚಚ್ಚಿದ ಕಿಂಗ್ ಕೊಹ್ಲಿ.
- ರಜತ್ ಪಾಟೀದಾರ್ ಮತ್ತು ಜಿತೇಶ್ ಶರ್ಮಾಗೆ ಸಖತ್ ಬ್ಯಾಟಿಂಗ್ ಪ್ರಾಕ್ಟೀಸ್.
- ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಅವರಿಂದ ಮುಕ್ತಕಂಠದ ಶ್ಲಾಘನೆ.
- ಮಾರ್ಚ್ 28 ರಂದು ಆರ್‌ಸಿಬಿ ವರ್ಸಸ್ ಎಸ್‌ಆರ್‌ಎಚ್ ಹೈವೋಲ್ಟೇಜ್ ಪಂದ್ಯ.
ಬೆಂಗಳೂರು: ಹದಿನೆಂಟನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಆರಂಭಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಕ್ಷರಶಃ ಅಬ್ಬರಿಸಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಆಂತರಿಕ ಅಭ್ಯಾಸ ಪಂದ್ಯದಲ್ಲಿ (Intra-Squad Match) ಕೇವಲ 19 ಎಸೆತಗಳಲ್ಲಿ 45 ರನ್ ಚಚ್ಚುವ ಮೂಲಕ ವಿರೋಧಿ ತಂಡಗಳಿಗೆ ವಿರಾಟ್ ಕೊಹ್ಲಿ ಎಚ್ಚರಿಕೆ ನೀಡಿದ್ದಾರೆ.
ಕೊಹ್ಲಿ ಬ್ಯಾಟಿಂಗ್‌ಗೆ ದಿನೇಶ್ ಕಾರ್ತಿಕ್ ಫಿದಾ!
ವಿರಾಟ್ ಕೊಹ್ಲಿಯ ಈ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನವನ್ನು ಕಂಡು ತಂಡದ ಮೆಂಟ್ ಮತ್ತು ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಬೆರಗಾಗಿದ್ದಾರೆ. "ವಿರಾಟ್ ಅವರ ಈ ಆಟದ ಶೈಲಿ ಅದ್ಭುತವಾಗಿತ್ತು. ಪ್ರತಿ ವರ್ಷವೂ ಅವರು ಒಂದು ನಿರ್ದಿಷ್ಟ ಗುರಿ ಮತ್ತು ತಂತ್ರದೊಂದಿಗೆ ಕಣಕ್ಕಿಳಿಯುತ್ತಾರೆ. ಈ ಬಾರಿ ಅವರ ತೀವ್ರತೆ (Intent) ಮತ್ತಷ್ಟು ಹೆಚ್ಚಾಗಿದೆ. ಅವರು ತಮ್ಮ ಮಿತಿಗಳನ್ನು ಮೀರಿ ಬೆಳೆಯಲು ಸದಾ ಪ್ರಯತ್ನಿಸುತ್ತಾರೆ, ಅದೇ ಅವರನ್ನು ಶ್ರೇಷ್ಠ ಆಟಗಾರನನ್ನಾಗಿ ಮಾಡಿದೆ," ಎಂದು ಕಾರ್ತಿಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಾಕ್ಟೀಸ್ ಮ್ಯಾಚ್‌ನಲ್ಲಿ ರನ್ ಮಳೆ!
ಬುಧವಾರ ನಡೆದ ಎರಡನೇ ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 19 ಎಸೆತಗಳಲ್ಲಿ 45 ರನ್ ಗಳಿಸಿ ಅಬ್ಬರಿಸಿದರು. ಇದಕ್ಕೂ ಮುನ್ನ ಸೋಮವಾರ ನಡೆದ ಮೊದಲ ಪಂದ್ಯದಲ್ಲೂ ಕೊಹ್ಲಿ 12 ಎಸೆತಗಳಲ್ಲಿ 29 ರನ್ ಬಾರಿಸಿ ತಮ್ಮ ಲಯವನ್ನು ಪ್ರದರ್ಶಿಸಿದ್ದರು.ಕೇವಲ ಕೊಹ್ಲಿ ಮಾತ್ರವಲ್ಲದೆ, ಆರ್‌ಸಿಬಿಯ ಇತರೆ ಬ್ಯಾಟರ್‌ಗಳು ಸಹ ಭರ್ಜರಿ ಫಾರ್ಮ್‌ನಲ್ಲಿದ್ದಾರೆ.
ಜಿತೇಶ್ ಶರ್ಮಾ: 37 ಎಸೆತಗಳಲ್ಲಿ ಭರ್ಜರಿ 81 ರನ್.
ರಜತ್ ಪಾಟೀದಾರ್ (ಕ್ಯಾಪ್ಟನ್): ಕೇವಲ 25 ಎಸೆತಗಳಲ್ಲಿ ಸ್ಫೋಟಕ 74 ರನ್.
ದೇವದತ್ ಪಡಿಕ್ಕಲ್: 33 ಎಸೆತಗಳಲ್ಲಿ 63 ರನ್.
ಕೃನಾಲ್ ಪಾಂಡ್ಯ: 33 ಎಸೆತಗಳಲ್ಲಿ 58 ರನ್.
ವೆಂಕಟೇಶ್ ಅಯ್ಯರ್ ನೇತೃತ್ವದ ತಂಡ 234 ರನ್ ಗಳಿಸಿದರೆ, ಕೃನಾಲ್ ಪಾಂಡ್ಯ ನೇತೃತ್ವದ ತಂಡ 247 ರನ್ ಗಳಿಸಿ ಬ್ಯಾಟಿಂಗ್ ಶಕ್ತಿಯನ್ನು ಪ್ರದರ್ಶಿಸಿತು.
ಮಾರ್ಚ್ 28ಕ್ಕೆ ಮೊದಲ ಕದನ
ಆರ್‌ಸಿಬಿ ತನ್ನ ಐಪಿಎಲ್ 2026ರ ಅಭಿಯಾನವನ್ನು ಮಾರ್ಚ್ 28 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಆರಂಭಿಸಲಿದೆ. ವಿರಾಟ್ ಕೊಹ್ಲಿ ಅವರ ಈ ಭೀಕರ ಫಾರ್ಮ್ ಅಭಿಮಾನಿಗಳಲ್ಲಿ "ಈ ಸಲ ಕಪ್ ನಮ್ದೇ" ಎಂಬ ಭರವಸೆಯನ್ನು ದುಪ್ಪಟ್ಟು ಮಾಡಿದೆ,(ಏಜೆನ್ಸೀಸ್).