ಹೊಸ ಸ್ಟಂಪಿಂಗ್ ಟೆಕ್ನಿಕ್ ಕಂಡುಹಿಡಿದ ಪಾಕಿಸ್ತಾನ
Khawaja Nafay Stumping : ಫೆ.7ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಪಾಕಿಸ್ತಾನ ಕ್ರಿಕೆಟ್ ತಂಡ ವಿವಾದವೊಂದಕ್ಕೆ ಸಿಲುಕಿದೆ. ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ ಮೋಸ ಮಾಡಿ ಗೆದ್ದಿದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಅದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳನ್ನು ಸಹ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೆಬ್ರವರಿ 1 ರಂದು ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ ಮೂರನೇ ಹಾಗೂ ಅಂತಿಮ ಟಿ20 ಪಂದ್ಯ ನಡೆಯಿತು. ಈ ವೇಳೆ ಪಾಕಿಸ್ತಾನದ ವಿಕೆಟ್ ಕೀಪರ್ ಖವಾಜಾ ನಫಾಯ್ ಮಾಡಿದ ಸ್ಟಂಪಿಂಗ್ ಭಾರೀ ವಿವಾದಕ್ಕೀಡಾಗಿದೆ. ತನ್ನ ಕೈಯಲ್ಲಿ ಬಾಲ್ ಇಲ್ಲದಿದ್ದರೂ ಸ್ಟಂಪಿಂಗ್ ಮಾಡಿದರು. ಇದನ್ನು ಗಮನಿಸದ ಅಂಪೈರ್ ಔಟ್ ಕೂಡ ನೀಡಿದರು. ಈ ಸ್ಟಂಪಿಂಗ್ನಿಂದಾಗಿ ಆಸೀಸ್ ತಂಡ ಕೂಪರ್ ಕಾನೋಲಿಯ ವಿಕೆಟ್ ಕಳೆದುಕೊಂಡಿತು. ಇದರ ಪರಿಣಾಮವಾಗಿ ಆಸೀಸ್ ತಂಡ ಪಂದ್ಯವನ್ನು ಸೋತಿತು.
ಸ್ಟಂಪಿಂಗ್ಗೆ ಸಂಬಂಧಿಸಿದ ವಿಡಿಯೋ ಇದೀಗ ವೈರಲ್ ಆಗಿದೆ. ವಿಡಿಯೋ ನೋಡಿದ ಕ್ರಿಕೆಟ್ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಪಾಕಿಸ್ತಾನ ಮೋಸ ಮಾಡಿ ಗೆದ್ದಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇಂತಹ ಆಟಗಾರರನ್ನು ಐಸಿಸಿ ನಿಷೇಧಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಒಂದು ಕೈಯಲ್ಲಿ ಚೆಂಡನ್ನು ಹಿಡಿದು ಇನ್ನೊಂದು ಕೈಯಲ್ಲಿ ಸ್ಟಂಪ್ ಮಾಡುವು ಸರಿಯೇ? ನಾವು ಈವರೆಗೂ ಇಂತಹ ಸ್ಟಂಪಿಂಗ್ ನೋಡೇ ಇಲ್ಲ. ಈ ರೀತಿ ಸ್ಟಂಪ್ ಮಾಡಲು ನಿಮಗೆ ನಾಚಿಕೆ ಆಗಬೇಕು ಎಂದೆಲ್ಲ ಕಾಮೆಂಟ್ ಮಾಡುವ ಮೂಲಕ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ.
ಅಂದಹಾಗೆ, 2026ರ ಟಿ20 ವಿಶ್ವಕಪ್ ಪಂದ್ಯಾವಳಿಗೂ ಮುನ್ನ ಆಸ್ಟ್ರೇಲಿಯಾ, ಪಾಕಿಸ್ತಾನ ಪ್ರವಾಸ ಮಾಡಿತು. ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ 3 ಟಿ20 ಪಂದ್ಯಗಳು ನಡೆದವು. ಫೆಬ್ರವರಿ 1 ರಂದು ಎರಡೂ ತಂಡಗಳ ನಡುವೆ ಮೂರನೇ ಹಾಗೂ ಅಂತಿಮ ಟಿ20 ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಪಾಕಿಸ್ತಾನ 111 ರನ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ, ಪಾಕಿಸ್ತಾನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಪಾಕಿಸ್ತಾನವು ಅದೇ ವೇಗದಲ್ಲಿ ಟಿ20 ವಿಶ್ವಕಪ್ 2026 ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದೆ. ಗಮನಾರ್ಹ ಸಂಗತಿ ಏನೆಂದರೆ, ಭಾರತದೊಂದಿಗೆ ಆಡುವುದಿಲ್ಲ ಎನ್ನುವ ಮೂಲಕ ಅಲ್ಲೂ ವಿವಾದ ಹುಟ್ಟುಹಾಕಿದೆ.
ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ವಿಕೆಟ್ ಕೀಪರ್ ಖವಾಜಾ ನಫಾಯ್ ಸ್ಟಂಪಿಂಗ್ ಮಾಡಿದರು. ಆ ಸಮಯದಲ್ಲಿ, ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಕೂಪರ್ ಕಾನೊಲಿ ಕ್ರೀಸ್‌ನಲ್ಲಿದ್ದರು. ಕ್ರೀಸ್ನಿಂದ ಮುಂದೆ ಹೋಗುತ್ತಿದ್ದಂತೆ ಖವಾಜಾ ಅವರನ್ನು ಎಡಗೈನಿಂದ ಸ್ಟಂಪಿಂಗ್ ಮಾಡಿದರು. ಆದರೆ, ಚೆಂಡು ಬಲಗೈನಲ್ಲಿ ಇತ್ತು. ಹೀಗಾಗಿ, ಇದು ವಿವಾದಕ್ಕೀಡಾಗಿದೆ. ಚೆಂಡನ್ನು ಬಲಗೈಯಲ್ಲಿ ಹಿಡಿದು ಎಡಗೈಯಿಂದ ಸ್ಟಂಪಿಂಗ್ ಮಾಡಿದ ಕ್ರಮ ಸರಿಯಿಲ್ಲ ಅನ್ನೋದು ಎಲ್ಲರ ವಾದವಾಗಿದೆ. ಅದನ್ನು ಪರಿಶೀಲಿಸದೇ ಅಂಪೈರ್ ಔಟ್ ಎಂದು ಘೋಷಿಸಿದ್ದು ಕೂಡ ಸರಿಯಲ್ಲ ಎಂಬ ಟೀಕೆಗಳು ವ್ಯಕ್ತವಾಗಿವೆ.
ಸದ್ಯ ಈ ಸ್ಟಂಪಿಂಗ್ ವಿಡಿಯೋ ವೈರಲ್ ಆಗಿದ್ದು, ಅಂಪೈರ್ ನಿದ್ರಿಸುತ್ತಿದ್ದರಾ? ಪಾಕಿಸ್ತಾನಿ ಆಟಗಾರರು ಮೋಸ ಮಾಡಿ ಗೆದ್ದಿದ್ದಾರೆ ಎಂದು ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖವಾಜಾ ಅವರನ್ನು ಐಸಿಸಿ ನಿಷೇಧಿಸಬೇಕೆಂದು ಒತ್ತಾಯಿಸುತ್ತಿದ್ದಾರೆ, (ಏಜೆನ್ಸೀಸ್).