ದಕ್ಷಿಣ ಆಫ್ರಿಕಾ vs ಟೀಮ್ ಇಂಡಿಯಾ
- ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಸೂಪರ್-8 ಹಂತದ ಪಂದ್ಯ
- ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಜಯ ಸಾಧಿಸಲು ಟೀಮ್ ಇಂಡಿಯಾ ಸನ್ನದ್ಧ
- ಈ ಪಂದ್ಯಕ್ಕಾಗಿ ತಂಡದಲ್ಲಿ ಮಹತ್ವದ ಬದಲಾವಣೆ?
SA vs IND: ಪ್ರಸಕ್ತ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿ ಇದೀಗ ಸೂಪರ್-8 ಹಂತ ತಲುಪಿದ್ದು, ನಿನ್ನೆಯಷ್ಟೇ (ಫೆ.21) ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ಮೊದಲ ಪಂದ್ಯ ನಡೆಯಿತು. ಈ ಪಂದ್ಯಕ್ಕೆ ಮಳೆ ಅಡ್ಡಿಯಾದ ಹಿನ್ನೆಲೆ ಎರಡೂ ತಂಡಗಳು ತಲಾ ಒಂದೊಂದು ಅಂಕ ಸ್ವೀಕರಿಸಿತು. ಇಂದು (ಫೆ.22) ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮ್ಯಾಚ್ ಅಹಮದಾಬಾದ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇಂದಿನ ಪಂದ್ಯದ ಮೇಲೆ ಕ್ರಿಕೆಟ್ ಪ್ರಿಯರಲ್ಲಿ ಸದ್ಯ ಭಾರೀ ಕುತೂಹಲ ಮೂಡಿದ್ದು, ಖಂಡಿತ ಟೀಮ್ ಇಂಡಿಯಾ ಗೆಲುವು ಸಾಧಿಸಲಿದೆ ಎಂಬ ಭರವಸೆ ಹೆಚ್ಚಿದೆ.
ಗ್ರೂಪ್ ಸ್ಟೇಜ್ ಪಂದ್ಯಗಳಲ್ಲಿ ಆಡಿದ ನಾಲ್ಕು ಪಂದ್ಯಗಳನ್ನು ಗೆದ್ದು ಈಗ ಸೂಪರ್-8 ಹಂತದಲ್ಲಿ ಸಖತ್ ಪೈಪೋಟಿ ಕೊಡಲು ಸನ್ನದ್ಧವಾಗಿರುವ ಟೀಮ್ ಇಂಡಿಯಾಗೆ ಹರಿಣರ ಪಡೆ ಗೆದ್ದು ತೋರಿಸುವ ಸವಾಲು ಹಾಕಿದೆ. ಯುಎಸ್ಎ, ನಮೀಬಿಯಾ ಮತ್ತು ನೆದರ್‌ಲ್ಯಾಂಡ್ಸ್‌ನಂತಹ ಸಣ್ಣ ತಂಡಗಳ ವಿರುದ್ಧ ಗೆದ್ದಿರುವ ಭಾರತಕ್ಕೆ, ಈ ನಿರೀಕ್ಷಿತ ಪಂದ್ಯವು ಖಂಡಿತವಾಗಿಯೂ ಕಠಿಣ ಪರೀಕ್ಷೆಯಾಗಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ.
ಈ ನಿರ್ಣಾಯಕ ಪಂದ್ಯದ ಹಿನ್ನೆಲೆ ಟೀಮ್ ಇಂಡಿಯಾದ ಪ್ಲೇಯಿಂಗ್ ಎಲೆವೆನ್ನಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ ಎಂದು ಒಂದಷ್ಟು ಕ್ರಿಕೆಟ್ ವರದಿಗಳು ಸೂಚಿಸಿವೆ. ಆಡಿದ ಮೂರು ಪಂದ್ಯಗಳಲ್ಲಿಯೂ ಒಂದೇ ಒಂದು ರನ್ ಗಳಿಸದೆ, ಡಕ್ಔಟ್ ಆಗಿರುವ ಪವರ್ಹಿಟ್ಟರ್ ಅಭಿಷೇಕ್ ಶರ್ಮ ಅವರನ್ನು ಇಂದಿನ ಪಂದ್ಯದಲ್ಲಿ ಆಡಿಸುತ್ತಾರೆಯೇ? ಎಂಬ ಪ್ರಶ್ನೆ ತೀರ ಚರ್ಚೆಗೆ ಗ್ರಾಸವಾಗಿದೆ. ಮತ್ತೊಂದೆಡೆ, ಸಂಜು ಸ್ಯಾಮ್ಸನ್, ಅಹಮದಾಬಾದ್‌ನಲ್ಲಿ ನೆಟ್ಸ್ ಸೆಷನ್‌ನಲ್ಲಿ ಅಭ್ಯಾಸ ಮಾಡುತ್ತಿರುವುದು ತಂಡದಲ್ಲಿ ಅವರ ಉಪಸ್ಥಿತಿ ಖಚಿತ ಎನ್ನುವಂತೆ ಮಾಡಿದೆ.
ಅಭಿಷೇಕ್ ಶರ್ಮ ಕೂಡ ಮೈದಾನದಲ್ಲಿ ಪ್ರ್ಯಾಕ್ಟಿಸ್ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಬದಲಿಗೆ ಸಂಜು ಸ್ಯಾಮ್ಸನ್ ಅಖಾಡಕ್ಕೆ ಇಳಿಯುವುದು ಬಹುತೇಕ ಅನುಮಾನ ಎಂದೇ ಹೇಳಲಾಗಿದೆ. ಆದರೆ, ಕೊನೆ ಘಳಿಗೆಯಲ್ಲಿ ಇವರಿಬ್ಬರ ಪೈಕಿ ಯಾರು ಓಪನರ್ ಆಗಿ ಹರಿಣರ ಪಡೆ ವಿರುದ್ಧ ಕಣಕ್ಕಿಳಿಯುತ್ತಾರೆ ಎಂಬುದನ್ನು ಸದ್ಯ ಕಾದು ನೋಡಬೇಕಿದೆ.
ಮತ್ತೊಂದೆಡೆ, ಬೌಲಿಂಗ್ ವಿಭಾಗದಲ್ಲಿಯೂ ಬದಲಾವಣೆಗಳು ಕೇಳಿಬಂದಿವೆ. ವಾಷಿಂಗ್ಟನ್ ಸುಂದರ್ ಬದಲಿಗೆ ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಬದಲಿಗೆ ಅರ್ಶ್‌ದೀಪ್ ಸಿಂಗ್ ಅವರನ್ನು ಮರಳಿ ಕರೆತರುವ ಸಾಧ್ಯತೆಯಿದೆ. ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳನ್ನು ಅಬ್ಬರಿಸದಂತೆ ಕಟ್ಟಿಹಾಕಲು ಈ ಬದಲಾವಣೆಗಳು ಅಗತ್ಯ ಎಂದು ಮ್ಯಾನೇಜ್‌ಮೆಂಟ್ ಭಾವಿಸಿದೆ. ಸಣ್ಣ ತಂಡಗಳ ವಿರುದ್ಧವೇ ಅಬ್ಬರಿಸಲು ಪರದಾಡುತ್ತಿರುವ ಅಭಿಷೇಕ್, ರಬಾಡ ಮತ್ತು ನಾರ್ಟ್ಜೆಯಂತಹ ಡೇಂಜರೆಸ್ ಬೌಲರ್‌ಗಳನ್ನು ಹೇಗೆ ಎದುರಿಸುತ್ತಾರೆ ಎಂಬುದೇ ಕುತೂಹಲ.
ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ತಂಡವು ಅತ್ಯುತ್ತಮ ಫಾರ್ಮ್‌ನಲ್ಲಿದೆ. ಕ್ಯಾಪ್ಟನ್ ಮಾರ್ಕ್ರಮ್, ಡಿ ಕಾಕ್, ಸ್ಟಬ್ಸ್ ಮತ್ತು ಡೇವಿಡ್ ಮಿಲ್ಲರ್‌ನಂತಹ ಸ್ಫೋಟಕ ಬ್ಯಾಟ್ಸ್ಮನ್ಗಳಿಂದ ತಂಡದ ಬ್ಯಾಟಿಂಗ್ ಲೈನ್ ಅಪ್ ಇನ್ನಷ್ಟು ಬಲಿಷ್ಠವಾಗಿ ಕಂಡಿದೆ. ಇನ್ನು ಬೌಲಿಂಗ್‌ನಲ್ಲಿ ಕಗಿಸೋ ರಬಾಡ ಮತ್ತು ಕೇಶವ್ ಮಹಾರಾಜ್‌ನಂತಹ ವೇಗಿಗಳು ಟೀಮ್ ಇಂಡಿಯಾ ಬ್ಯಾಟರ್ಗಳನ್ನು ಕಟ್ಟಿಹಾಕಲು ಪಣತೊಟ್ಟಿದ್ದಾರೆ.
ಪ್ಲೇಯಿಂಗ್ XI
ಭಾರತ ತಂಡ: ಸೂರ್ಯಕುಮಾರ್ (ನಾಯಕ), ಅಭಿಷೇಕ್ ಶರ್ಮ/ಸಂಜು ಸ್ಯಾಮ್ಸನ್, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರಿಂಕು ಸಿಂಗ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್.
ದಕ್ಷಿಣ ಆಫ್ರಿಕಾ: ಮಾರ್ಕ್ರಾಮ್ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಿಕಲ್ಟನ್, ಬ್ರೂವಿಸ್, ಸ್ಟಬ್ಸ್, ಡೇವಿಡ್ ಮಿಲ್ಲರ್, ಜಾನ್ಸೆನ್, ಬಾಷ್, ಕಗಿಸೊ ರಬಾಡ, ಲುಂಗಿ ಎನ್‌ಗಿಡಿ, ಕೇಶವ್ ಮಹಾರಾಜ್.