ಕಾವ್ಯ ಮಾರನ್ (ಎಡ), ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ
- ಎಸ್ಆರ್ಎಚ್ ಸಹ ಮಾಲೀಕರಾದ ಕಾವ್ಯಾ ಮಾರನ್ ನಿರ್ಧಾರಕ್ಕೆ ಛೀಮಾರಿ
- ಸನ್ರೈಸರ್ಸ್ ಲೀಡ್ಸ್ ತಂಡಕ್ಕೆ ಪಾಕ್ ಆಟಗಾರನ ಖರೀದಿ ವಿರುದ್ಧ ಆಕ್ರೋಶ
- ಕಾವ್ಯ ಮಾರನ್ಗೆ ಚೆಕ್ಮೇಟ್ ಇಟ್ಟ ಪಿಸಿಬಿ ಮುಖ್ಯಸ್ಥ
ಚೆನ್ನೈ: ಈ ಬಾರಿಯ 'ದಿ ಹಂಡ್ರೆಡ್' 2026ರ ಟಿ20 ಲೀಗ್ ಇಂಗ್ಲೆಂಡ್ನಲ್ಲಿ ನಡೆಯಲಿದ್ದು, ಇತ್ತೀಚೆಗಷ್ಟೇ ಹರಾಜು ಪ್ರಕ್ರಿಯೆ ನಡೆಯಿತು. ಈ ಆಕ್ಷನ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ಲೀಡ್ಸ್ ಫ್ರಾಂಚೈಸಿಗಳ ಸಹ ಮಾಲೀಕರಾದ ಕಾವ್ಯ ಮಾರನ್ ಮಾಡಿದ ಎಡವಟ್ಟಿಗೆ ಇದೀಗ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದು, ಛೀಮಾರಿ ಹಾಕಿದ್ದಾರೆ.
ಹಂಡ್ರೆಡ್ ಲೀಗ್ಗಾಗಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ, ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ನನ್ನು 2.34 ಕೋಟಿ (190,000 ಪೌಂಡ್‌ಗಳು) ರೂ.ಗೆ ಖರೀದಿಸಿ ಕಾವ್ಯ ಮಾರನ್, ಸದ್ಯ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದು, ದೊಡ್ಡ ವಿವಾದಕ್ಕೆ ಸಿಲುಕಿದ್ದಾರೆ. ಸನ್ರೈಸರ್ಸ್ ಲೀಡ್ಸ್ ಕೋಚ್ ಡೆನಿಯಲ್ ವೆಟೋರಿ ಜತೆಗೆ ಈ ನಿರ್ಧಾರ ಕೈಗೊಂಡ ಕಾವ್ಯ, ತಮ್ಮ ತಂಡಕ್ಕೆ ಪಾಕ್ ಸ್ಪಿನ್ ಇರಲಿ ಎಂದು ಮೊದಲೇ ಮಾತಾಡಿಕೊಂಡಿದ್ದರಂತೆ. ಅಂತೆಯೇ, ಹರಾಜಿನಲ್ಲಿ ಖರೀದಿ ಮಾಡಿದ್ದಾಗಿ ತಿಳಿಸಿದ್ದಾರೆ.
ಈ ವಿಚಾರ ದೊಡ್ಡ ವಿವಾದಕ್ಕೆ ತಿರುಗಿದ್ದು, ಪಾಕಿಸ್ತಾನದ ಇತರೆ ಕ್ರಿಕೆಟಿಗರ ಮೇಲೂ ಕಣ್ಣಿಟ್ಟಿದ್ದ ಫ್ರಾಂಚೈಸಿಯ ನಡೆಯನ್ನು ತೀವ್ರವಾಗಿ ಖಂಡಿಸಿರುವ ಭಾರತೀಯ ಕ್ರಿಕೆಟ್ ಅಭಿಮಾನಿಗಳು, ಐಪಿಎಲ್ 19ನೇ ಆವೃತ್ತಿಯಿಂದ ಮೊದಲು ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಕಿತ್ತುಬಿಸಾಡಿ. ವೈರಿ ರಾಷ್ಟ್ರದ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವ ಇಂಥ ತಂಡ ನಮಗೆ ಬೇಕಿಲ್ಲ ಎಂದು ಬಿಸಿಸಿಐಗೆ ಆಗ್ರಹಿಸಿದ್ದಾರೆ. ಸನ್ರೈಸರ್ಸ್ ಲೀಡ್ಸ್ನ ಸಹ ಒಡತಿ ಕಾವ್ಯ ಮಾರನ್ ವಿರುದ್ಧ ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ.
ಕಾವ್ಯ ಮಾರನ್ ತಂಡಕ್ಕೆ ಪಿಸಿಬಿ ಶಾಕ್
ಈ ಬಾರಿಯ 'ದಿ ಹಂಡ್ರೆಡ್' ಲೀಗ್‌ನಲ್ಲಿ ಅಬ್ರಾರ್ ಅಹ್ಮದ್ ಆಡುವುದು ಬಹುತೇಕ ಡೌಟ್ ಎನ್ನಲಾಗಿದೆ. ಅದಕ್ಕೆ ಕಾರಣ, ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ. ಅಬ್ರಾರ್ ಇಲ್ಲಿಯವರೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಆಕ್ಷೇಪಣೆ ಇಲ್ಲ ಪ್ರಮಾಣಪತ್ರವನ್ನು ಪಡೆದೇ ಇಲ್ಲ. ಇದಲ್ಲದೆ, ಈ ಲೀಗ್ ಆರಂಭವಾಗುವ ಸಮಯದಲ್ಲೇ ಪಾಕಿಸ್ತಾನ ತಂಡವು ವೆಸ್ಟ್ ಇಂಡೀಸ್‌ನೊಂದಿಗೆ ಟೆಸ್ಟ್ ಸರಣಿಯನ್ನು ಆಡಲಿದೆ. ಪಿಸಿಬಿ ಇದಕ್ಕೆ ಸಂಬಂಧಿಸಿದ ಪೂರ್ವ ತಯಾರಿಗಳನ್ನು ಸಹ ಮಾಡಿಕೊಂಡಿದೆ ಎಂದು ವರದಿಯಾಗಿದೆ..
ಈ ಸಂದರ್ಭಗಳ ಹಿನ್ನೆಲೆಯಲ್ಲಿ, ಹಂಡ್ರೆಡ್ ಲೀಗ್‌ನಲ್ಲಿ ಅಬ್ರಾರ್ ಆಡಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು NOC (ಆಕ್ಷೇಪಣೆ ಇಲ್ಲ ಪ್ರಮಾಣಪತ್ರ) ನೀಡುವುದಿಲ್ಲ ಎಂಬ ಸುದ್ದಿಗಳು ಸದ್ಯ ಕ್ರಿಕೆಟ್ ವಲಯಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದನ್ನು ಪಿಬಿಸಿ ಮೂಲಗಳು ಬಹಿರಂಗಪಡಿಸಿವೆ. ವರದಿಗಳನ್ನು ಆಧರಿಸಿ ನೋಡುವುದಾದರೆ, ಈ ಲೀಗ್‌ನಲ್ಲಿ ಅಬ್ರಾರ್ ಸನ್ರೈಸರ್ಸ್ ಲೀಡ್ಸ್ ತಂಡದ ಪರ ಆಡುವ ಸಾಧ್ಯತೆಗಳು 50-50 ಎನ್ನಲಾಗಿದೆ.
ಬಿಸಿಸಿಐ ಉಪಾಧ್ಯಕ್ಷ ಪ್ರತಿಕ್ರಿಯೆ
ಈ ವಿಷಯ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ನೇರವಾಗಿ ಬಿಸಿಸಿಐ ಅಂಗಳಕ್ಕೆ ತಲುಪಿದೆ. ಸನ್ರೈಸರ್ಸ್ ಫ್ರಾಂಚೈಸಿಯನ್ನು ಮಾ.28ರಿಂದ ಆರಂಭವಾಗಲಿರುವ ಐಪಿಎಲ್ ಲೀಗ್ನಿಂದ ತೆಗೆಯುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಿಸಿಸಿಐ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್ ಸಂಸದ ರಾಜೀವ್ ಶುಕ್ಲಾ, "ಇದು ನಮ್ಮ (ಐಪಿಎಲ್) ಡೊಮೈನ್ಗೆ ಬರಲ್ಲ. ಅವರು ವಿದೇಶಿ ನೆಲದ ಟೂರ್ನಿಗಾಗಿ ಮಾಡಿಕೊಂಡಿದ್ದಾರೆ. ಹೀಗಾಗಿ, ಇಲ್ಲಿ ನಿರ್ಧಾರ ಅವರದ್ದೇ ಆಗಿದೆ ಹೊರತು ನಮ್ಮದು ಏನಿಲ್ಲ" ಎಂದಿದ್ದಾರೆ,(ಏಜೆನ್ಸೀಸ್).