ಕರುಣ್, ಸ್ಮರಣ್​ಗೆ ಗರಿಷ್ಠ ಬಿಡ್, ದ್ರಾವಿಡ್ ಪುತ್ರರಿಗೂ ಬೇಡಿಕೆ 
ಕ್ರಿಕೆಟ್

Maharaja Trophy KSCA T20: ಕರುಣ್, ಸ್ಮರಣ್​ಗೆ ಗರಿಷ್ಠ ಬಿಡ್, ದ್ರಾವಿಡ್ ಪುತ್ರರಿಗೂ ಬೇಡಿಕೆ

ಬೆಂಗಳೂರು: ಭಾರತ ಟೆಸ್ಟ್ ತಂಡದ ಆಟಗಾರ ಕರುಣ್ ನಾಯರ್ ಮುಂಬರುವ ಐದನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 (Maharaja Trophy KSCA T20) ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಅತ್ಯಧಿಕ ಮೊತ್ತಕ್ಕೆ ಬಿಕರಿಯಾದರು. ಪ್ರತಿಷ್ಠಿತ ಚಿನ್ನಸ್ವಾಮಿ ಕ್ರೀಡಾಂಗಣದ ಸಭಾಂಗಣದಲ್ಲಿ ಶುಕ್ರವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಅವರು 18 ಲಕ್ಷ ರೂ.ಗಳಿಗೆ ಹೊಸ ಫ್ರಾಂಚೈಸಿ ಕೋಸ್ಟಲ್ ಕಿಂಗ್ಸ್ ಮಂಗಳೂರು ಪಾಲಾದರು. ಎಡಗೈ ಬ್ಯಾಟರ್ ಆರ್. ಸ್ಮರಣ್ 2ನೇ ಗರಿಷ್ಠ ಮೌಲ್ಯಕ್ಕೆ ಮತ್ತೊಂದು ಹೊಸ ಫ್ರಾಂಚೈಸಿ ಶಿವಮೊಗ್ಗ ಯೋಧಾಸ್‌ಗೆ 15.70 ಲಕ್ಷ ರೂ.ಗಳಿಗೆ ಸೇರ್ಪಡೆಯಾದರು. ಭಾರತ ಟೆಸ್ಟ್-ಏಕದಿನ ತಂಡದ ಕಾಯಂ ಸದಸ್ಯ ಕೆಎಲ್ ರಾಹುಲ್ ಟೂರ್ನಿಗೆ ಅಲಭ್ಯರಾಗಲಿದ್ದು, ಹರಾಜಿನಲ್ಲಿ ಸೇಲಾಗದೆ ಉಳಿದರು.
ಜೂನ್ 20ರಿಂದ ಜುಲೈ 12ರವರೆಗೆ ಮೈಸೂರು, ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಮೂರು ಚರಣಗಳಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಕೋಸ್ಟಲ್ ಕಿಂಗ್ಸ್ ಮಂಗಳೂರು ( Coastal Kings Mangaluru,), ಗುಲ್ಬರ್ಗಾ ಮಿಸ್ಟಿಕ್ಸೃ್( Gulbarga Mystics), ಹುಬ್ಬಳ್ಳಿ ಟೈಗರ್ಸ್‌(Hubli Tigers), ಬೆಂಗಳೂರು ಬ್ಲಾಸ್ಟರ್ಸ್‌(Bengaluru Blasters), ಮೈಸೂರು ವಾರಿಯರ್ಸ್‌ ( Mysore Warriors) ಮತ್ತು ಶಿವಮೊಗ್ಗ ಯೋಧಾಸ್ ( Shivamogga Yodhas) ತಂಡಗಳು ಭಾಗವಹಿಸಲಿವೆ. 
ಸ್ಫೋಟಕ ಬ್ಯಾಟರ್ ಅಭಿನವ್ ಮನೋಹರ್ (₹13.50 ಲಕ್ಷ), ಮಾಜಿ ನಾಯಕ ಮಯಾಂಕ್ ಅಗರ್ವಾಲ್ (₹11.50 ಲಕ್ಷ) ಹುಬ್ಬಳ್ಳಿ ಟೈಗರ್ಸ್‌ ಸೇರಿದರೆ, ಅನುಭವಿ ಮನೀಷ್ ಪಾಂಡೆ (₹12.75 ಲಕ್ಷ) ಮತ್ತು ಆಲ್ರೌಂಡರ್ ಮ್ಯಾಕ್ನೀಲ್ ನೋರೊನ್ಹಾ (₹12.25ಲಕ್ಷ) ಗುಲ್ಬರ್ಗ ಮಿಸ್ಟಿಕ್ಸ್ ತಂಡ ಕೂಡಿಕೊಂಡರು. 
ಆರಂಭಿಕ ಬ್ಯಾಟರ್ ಚೇತನ್ ಎಲ್‌ಆರ್ (11.50ಲಕ್ಷ), ಆಲ್ರೌಂಡರ್ ಮನೋಜ್ ಭಾಂಡಗೆ (₹10 ಲಕ್ಷ), ವೈಶಾಖ್ ವಿಜಯಕುಮಾರ್ (₹8.25 ಲಕ್ಷ) ಮೈಸೂರು ವಾರಿಯರ್ಸ್‌,  ಆಲ್ರೌಂಡರ್ ಶುಭಾಂಗ್ ಹೆಗ್ಡೆ (₹11 ಲಕ್ಷ) ಬೆಂಗಳೂರು ಬ್ಲಾಸ್ಟರ್ಸ್‌, ಶ್ರೇಯಸ್ ಗೋಪಾಲ್ (₹10.25ಲಕ್ಷ), ಕೌಶಿಕ್ ವಿ (₹8 ಲಕ್ಷ) ಕೋಸ್ಟಲ್ ಕಿಂಗ್ಸ್ ತಂಡಗಳಿಗೆ ಸೇರಿದ ಪ್ರಮುಖ ಆಟಗಾರರೆನಿಸಿದರು. ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಗಮನಸೆಳೆದ ಲೆಗ್ ಸ್ಪಿನ್ನರ್ ಯಶ್ ರಾಜ್ ಪೂಂಜಾ (₹5 ಲಕ್ಷ) ಶಿವಮೊಗ್ಗ ಯೋಧಾಸ್ ತಂಡ ಸೇರಿದರು. 
ಅಗ್ರ 10 ಬಿಡ್
ಕರುಣ್ ನಾಯರ್ (₹18 ಲಕ್ಷ), ಮಂಗಳೂರು
ಆರ್. ಸ್ಮರಣ್ (₹15.75 ಲಕ್ಷ), ಶಿವಮೊಗ್ಗ
ಅಭಿನವ್ ಮನೋಹರ್ (₹13.50 ಲಕ್ಷ), ಹುಬ್ಬಳ್ಳಿ
ಮನೀಷ್ ಪಾಂಡೆ (₹12.75 ಲಕ್ಷ), ಗುಲ್ಬರ್ಗ
ಮ್ಯಾಕ್ನೀಲ್ ನೋರೊನ್ಹಾ (₹12.25 ಲಕ್ಷ), ಗುಲ್ಬರ್ಗ
ಮಯಾಂಕ್ ಅಗರ್ವಾಲ್ (₹11.50 ಲಕ್ಷ), ಹುಬ್ಬಳ್ಳಿ
ಚೇತನ್ ಎಲ್ಆರ್ (₹11.50 ಲಕ್ಷ), ಮೈಸೂರು
ಶುಭಾಂಗ್ ಹೆಗ್ಡೆ (₹11 ಲಕ್ಷ), ಬೆಂಗಳೂರು
ಶ್ರೇಯಸ್ ಗೋಪಾಲ್ (₹10.25 ಲಕ್ಷ), ಮಂಗಳೂರು
ಮನೋಜ್ ಭಾಂಡಗೆ (₹10 ಲಕ್ಷ), ಮೈಸೂರು
ಪಡಿಕ್ಕಲ್, ಪ್ರಸಿದ್ಧ ಅನಿಶ್ಚಿತತೆ
ಅಫ್ಘಾನಿಸ್ತಾನ ತಂಡದ ವಿರುದ್ಧ ಏಕೈಕ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಭಾಗವಾಗಿರುವ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್, ವೇಗಿ ಪ್ರಸಿದ್ಧ ಕೃಷ್ಣ ಮಹಾರಾಜ ಟೂರ್ನಿಯಲ್ಲಿ ಆಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಕಾರ್ಯದೊತ್ತಡ ನಿರ್ವಹಣೆಯಿಂದ ಟೂರ್ನಿಯ ಅಂತಿಮ ಹಂತಕ್ಕೆ ಮಾತ್ರ ಲಭ್ಯರಾಗುವ ಸಾಧ್ಯತೆಗಳಿದ್ದು, ಇವರಿಬ್ಬರ ಖರೀದಿಗೆ ಫ್ರಾಂಚೈಸಿ  ಹೆಚ್ಚಿನ ಆಸಕ್ತಿ ತೋರಲಿಲ್ಲ. ಕೊನೆಗೆ ಪ್ರಸಿದ್ಧಕೃಷ್ಣ, ಪಡಿಕ್ಕಲ್ ತಲಾ ₹2.60 ಲಕ್ಷಕ್ಕೆ ಮೈಸೂರು ತಂಡ ಸೇರಿದರು.
ದ್ರಾವಿಡ್ ಪುತ್ರರಿಗೂ ಬೇಡಿಕೆ
ಭಾರತ ತಂಡ ಮಾಜಿ ನಾಯಕ-ಕೋಚ್ ರಾಹುಲ್ ದ್ರಾವಿಡ್ ಅವರ ಹಿರಿಯ ಮಗ ಸಮಿತ್ ದ್ರಾವಿಡ್ ಮತ್ತು ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಸೇರ್ಪಡೆಗೆ ಫ್ರಾಂಚೈಸಿಗಳು ಹೆಚ್ಚಿನ ಆಸಕ್ತಿ ತೋರಿದವು. 20 ವರ್ಷದ ಆಲ್ರೌಂಡರ್ ಸಮಿತ್ (₹1.50 ಲಕ್ಷ) ಬೆಂಗಳೂರು ಬ್ಲಾಸ್ಟರ್ಸ್‌ ಹಾಗೂ ಅಪ್ಪನಂತೆ ಜೂನಿಯರ್ ತಂಡದ ನಾಯಕ, ವಿಕೆಟ್ ಕೀಪರ್-ಬ್ಯಾಟರ್ ಆಗಿರುವ ಅನ್ವಯ್ ದ್ರಾವಿಡ್ (₹90 ಸಾವಿರ) ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡ ಸೇರಿದರು. ಇವರಿಬ್ಬರು 50 ಸಾವಿರ ಮೂಲಬೆಲೆ ಹೊಂದಿದ್ದರು. ಸಮಿತ್ ದ್ರಾವಿಡ್ ಕಳೆದ ಬಾರಿ ಮೈಸೂರು ವಾರಿಯರ್ಸ್‌ ಪರ ಆಡಿದ್ದರು.