ರಾಷ್ಟ್ರೀಯ 19 ವಯೋಮಿತಿ ಮಹಿಳಾ ಟಿ20 ಟ್ರೋಫಿ: ಕರ್ನಾಟಕಕ್ಕೆ ಪ್ರಶಸ್ತಿ
ಬೆಂಗಳೂರು: ಸ್ಪಿನ್ನರ್ ದೀಕ್ಷಾ ಜೆ. (21ಕ್ಕೆ 5) ಮಾರಕ ಬೌಲಿಂಗ್ ಮತ್ತು ಬ್ಯಾಟರ್ ದೀಕ್ಷಾ ಸಿ.ಡಿ. (47*ರನ್, 39 ಎಸೆತ, 4 ಬೌಂಡರಿ, 1 ಸಿಕ್ಸರ್) ಉಪಯುಕ್ತ ಬ್ಯಾಟಿಂಗ್ ಬಲದಿಂದ ಕರ್ನಾಟಕ ತಂಡ 19 ವಯೋಮಿತಿ (Under 19) ಮಹಿಳಾ ಟಿ20 ಟ್ರೋಫಿಯಲ್ಲಿ (T20 cricket) ಚಾಂಪಿಯನ್ ಪಟ್ಟವೇರಿದೆ. ಕೋಲ್ಕತದ ಸಾಲ್ಟ್ ಲೇಕ್ನ ಜೆಯು ಸೆಕೆಂಡ್ ಕ್ಯಾಂಪಸ್ ಮೈದಾನದಲ್ಲಿ ಬುಧವಾರ ನಡೆದ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಆಂಧ್ರ ವಿರುದ್ಧ 7 ವಿಕೆಟ್ಗಳಿಂದ ಗೆದ್ದು ಬೀಗಿತು. ಈ ಮೂಲಕ ಮಹಿಳಾ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದಲ್ಲಿ ಕನ್ನಡತಿಯರಿರಲಿಲ್ಲ ಎಂಬ ಕೊರಗನ್ನು ಬದಿಗೊತ್ತಿ, ಭವಿಷ್ಯದ ಬಗ್ಗೆ ಭರವಸೆ ಮೂಡಿಸುವಲ್ಲಿ ಕರ್ನಾಟಕದ ಕಿರಿಯ ಮಹಿಳೆಯರು ಯಶಸ್ವಿಯಾಗಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಇಳಿದ ಆಂಧ್ರ 9 ವಿಕೆಟ್ಗೆ 119 ರನ್ ಗಳಿಸಿತು. ದೀಕ್ಷಾಗೆ ನಾಯಕಿ ವಂದಿತಾ ಕೆ. ರಾವ್ (18ಕ್ಕೆ 2) ಮತ್ತು ವೇದಾ ವರ್ಷಿಣಿ ವಿ. (21ಕ್ಕೆ 2) ಉತ್ತಮ ಬೆಂಬಲ ಒದಗಿಸಿ ಆಂಧ್ರಗೆ ಕಡಿವಾಣ ಹೇರಿದರು. ಪ್ರತಿಯಾಗಿ ಕರ್ನಾಟಕ ಒಂದು ಹಂತದಲ್ಲಿ 55 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದರೂ, ಅಂತಿಮವಾಗಿ 17.4 ಓವರ್ಗಳಲ್ಲಿ 3 ವಿಕೆಟ್ಗೆ 120 ರನ್ ಗಳಿಸಿ ಗೆಲುವು ಸಾಧಿಸಿತು.
ದೀಕ್ಷಾ ಸಿ.ಡಿ. ಮತ್ತು ಕಾಶ್ವಿ ಕಂಡಿಕುಪ್ಪ (27*) ಮುರಿಯದ 4ನೇ ವಿಕೆಟ್ಗೆ 49 ಎಸೆತಗಳಲ್ಲಿ 65 ರನ್ ಗಳಿಸಿ ಗೆಲುವಿನ ದಡ ಸೇರಿಸಿದರು. ಟೂರ್ನಿ 7 ಪಂದ್ಯಗಳಲ್ಲಿ ಸರ್ವಾಧಿಕ 224 ರನ್ ಗಳಿಸಿದ ಕರ್ನಾಟಕದ ರಚಿತಾ ಹತ್ವಾರ್ ಸರಣಿಶ್ರೇಷ್ಠ ಪ್ರಶಸ್ತಿ ಭಾಜನರಾದರು. ಕರ್ನಾಟಕ ತಂಡ 5 ಲೀಗ್ ಪಂದ್ಯಗಳ ಸಹಿತ ಟೂರ್ನಿಯಲ್ಲಿ ಆಡಿದ ಎಲ್ಲ 7 ಪಂದ್ಯಗಳಲ್ಲಿ ಗೆದ್ದು ಅಜೇಯವಾಗಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ.
ಆಂಧ್ರ: 9 ವಿಕೆಟ್ಗೆ 119 (ದೀಕ್ಷಾ ಕತ್ರಗಡ್ಡ 36, ಸೇತುಸಾಯಿ 45, ದೀಕ್ಷಾ ಜೆ. 21ಕ್ಕೆ 5, ವಂದಿತಾ 18ಕ್ಕೆ 2, ವೇದಾ 21ಕ್ಕೆ 2). ಕರ್ನಾಟಕ: 17.4 ಓವರ್ಗಳಲ್ಲಿ 3 ವಿಕೆಟ್ಗೆ 120 (ರಚಿತಾ 10, ಲಿಯಂಕಾ 28, ದೀಕ್ಷಾ ಸಿ.ಡಿ. 47*, ಕಾಶ್ವಿ 27*, ತಮನ್ನಾ 28ಕ್ಕೆ 1, ದೀಪ್ತಿ 19ಕ್ಕೆ 1). ಪಂದ್ಯಶ್ರೇಷ್ಠ: ದೀಕ್ಷಾ ಜೆ, ಸರಣಿಶ್ರೇಷ್ಠ: ರಚಿತಾ ಹತ್ವಾರ್ (ಕರ್ನಾಟಕ).