ಶ್ರೀವತ್ಸ ಆಚಾರ್​ ಹೊಸಮುಖ; ರಣಜಿಯಲ್ಲಿ ಮಿಂಚಿದ ಶಿಖರ್​ ಶೆಟ್ಟಿಗೂ ಸ್ಥಾನ 
ಕ್ರಿಕೆಟ್

ಕರ್ನಾಟಕ ಟಿ20 ತಂಡ ಪ್ರಕಟ: ಶ್ರೀವತ್ಸ ಆಚಾರ್​ ಹೊಸಮುಖ; ರಣಜಿಯಲ್ಲಿ ಮಿಂಚಿದ ಶಿಖರ್​ ಶೆಟ್ಟಿಗೂ ಸ್ಥಾನ

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮುಂಬರುವ ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಗೆ ಮಯಾಂಕ್​ ಅಗರ್ವಾಲ್​ ಸಾರಥ್ಯದ 16 ಆಟಗಾರರ ಕರ್ನಾಟಕ ತಂಡವನ್ನು ಗುರುವಾರ ಪ್ರಕಟಿಸಲಾಗಿದೆ. ವೇಗಿ ಶ್ರೀವತ್ಸ ಆರ್​. ಆಚಾರ್​ ತಂಡದಲ್ಲಿ ಸ್ಥಾನ ಪಡೆದಿರುವ ಹೊಸಮುಖವಾಗಿದ್ದಾರೆ. ಯುವ ಎಡಗೈ ಸ್ಪಿನ್ನರ್​ ಶಿಖರ್​ ಶೆಟ್ಟಿ ರಣಜಿ ತಂಡದಲ್ಲಿ ಕಂಡ ಯಶಸ್ಸಿನ ಬಳಿಕ ಟಿ20 ತಂಡದಲ್ಲೂ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕರುಣ್​ ನಾಯರ್​ 3 ವರ್ಷಗಳ ಬಳಿಕ ರಾಜ್ಯ ಟಿ20 ತಂಡಕ್ಕೂ ಮರಳಿದ್ದಾರೆ. ಭಾರತ ಟೆಸ್ಟ್​ ತಂಡದಲ್ಲಿದ್ದ ಕಾರಣ ಕೆಲ ರಣಜಿ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ಎಡಗೈ ಬ್ಯಾಟರ್​ ದೇವದತ್​ ಪಡಿಕ್ಕಲ್​, ಟಿ20 ತಂಡದಲ್ಲೂ ಸ್ಥಾನ ಪಡೆದಿದ್ದಾರೆ. ಆದರೆ ದಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್​ ಪಂದ್ಯ ನವೆಂಬರ್​ 26ರವರೆಗೂ ನಿಗದಿಯಾಗಿರುವುದರಿಂದ ಅವರು ಆರಂಭಿಕ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ.

ಕೆಎಲ್​ ಶ್ರೀಜಿತ್​ ತಂಡದ ಪ್ರಮುಖ ವಿಕೆಟ್​ ಕೀಪರ್​ ಆಗಿ ಮುಂದುವರಿದಿದ್ದರೆ, ಅನುಭವಿ ಬಿಆರ್​ ಶರತ್​ 2ನೇ ಕೀಪರ್​ ಆಗಿ ಸ್ಥಾನ ಸಂಪಾದಿಸಿದ್ದಾರೆ. ವೈಶಾಕ್​ ವಿಜಯಕುಮಾರ್​, ವಿದ್ವತ್​ ಕಾವೇರಪ್ಪ, ವಿದ್ಯಾಧರ್​ ಪಾಟೀಲ್​ ಜತೆಗೆ 23 ವರ್ಷದ ಶ್ರೀವತ್ಸ ಗೋಸ್ವಾಮಿ ತಂಡದಲ್ಲಿರುವ 4ನೇ ವೇಗಿಯಾಗಿದ್ದಾರೆ. ಸ್ಪಿನ್​ ಬೌಲಿಂಗ್​ ವಿಭಾಗದಲ್ಲಿ ಶ್ರೇಯಸ್​ ಗೋಪಾಲ್​, ಶಿಖರ್​ ಶೆಟ್ಟಿಗೆ ಶುಭಾಂಗ್​ ಹೆಗ್ಡೆ ಮತ್ತು ಪ್ರವಿಣ್​ ದುಬೆ ಸಾಥ್​ ನೀಡಲಿದ್ದಾರೆ.

ನವೆಂಬರ್​ 26ರಿಂದ ಅಹಮದಾಬಾದ್​ನಲ್ಲಿ ನಡೆಯಲಿರುವ ಟೂರ್ನಿಯ ಡಿ ಗುಂಪಿನ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡ ಉತ್ತರಾಖಂಡ ವಿರುದ್ಧ ಆಡಲಿದೆ.

ಕರ್ನಾಟಕ ಟಿ20 ತಂಡ: ಮಯಾಂಕ್​ ಅಗರ್ವಾಲ್​ (ನಾಯಕ), ದೇವದತ್​ ಪಡಿಕ್ಕಲ್​, ಮ್ಯಾಕ್ನೀಲ್​ ನೋರೋನ್ಹಾ, ಕೆಎಲ್​ ಶ್ರೀಜಿತ್​ (ವಿ.ಕೀ), ಕರುಣ್​ ನಾಯರ್​, ಆರ್​. ಸ್ಮರಣ್​, ಅಭಿನವ್​ ಮನೋಹರ್​, ಶ್ರೇಯಸ್​ ಗೋಪಾಲ್​, ಶಿಖರ್​ ಶೆಟ್ಟಿ, ವೈಶಾಕ್​ ವಿಜಯಕುಮಾರ್​, ವಿದ್ವತ್​ ಕಾವೇರಪ್ಪ, ವಿದ್ಯಾಧರ್​ ಪಾಟೀಲ್​, ಶ್ರೀವತ್ಸ ಆರ್​. ಆಚಾರ್​, ಶುಭಾಂಗ್​ ಹೆಗ್ಡೆ, ಪ್ರವಿಣ್​ ದುಬೆ, ಬಿಆರ್​ ಶರತ್​ (ವಿ.ಕೀ).
ಕರ್ನಾಟಕದ ಪಂದ್ಯಗಳು
ದಿನಾಂಕ ಎದುರಾಳಿ ಆರಂಭ
ನ.26 ಉತ್ತರಾಖಂಡ ಬೆಳಗ್ಗೆ 9.00
ನ.28 ಜಾರ್ಖಂಡ್​ ಮಧ್ಯಾಹ್ನ 3.30
ನ. 30 ರಾಜಸ್ಥಾನ ಬೆಳಗ್ಗೆ 11.00
ಡಿ. 2 ತಮಿಳುನಾಡು ಬೆಳಗ್ಗೆ 9.00
ಡಿ. 4 ದೆಹಲಿ ಮಧ್ಯಾಹ್ನ 1.30
ಡಿ. 6 ಸೌರಾಷ್ಟ್ರ ಬೆಳಗ್ಗೆ 11.00
ಡಿ.8 ತ್ರಿಪುರ ಮಧ್ಯಾಹ್ನ 1.30
ಎಲ್ಲಿ: ನಮೋ ಸ್ಟೇಡಿಯಂ, ಅಹಮದಾಬಾದ್​