ಅಂಧರ ಕ್ರಿಕೆಟ್: ಕರ್ನಾಟಕ ರಾಷ್ಟ್ರೀಯ ಚಾಂಪಿಯನ್
ಬೆಂಗಳೂರು: ಕರ್ನಾಟಕ ತಂಡ ಗುರುಗ್ರಾಮದಲ್ಲಿ ಶುಕ್ರವಾರ ಮುಕ್ತಾಯಗೊಂಡ 8ನೇ ಆವೃತ್ತಿಯ ನಾಗೇಶ್ ಟ್ರೋಫಿ (Nagesh Trophy) ಅಂಧ ಪುರುಷರ ಟಿ20 ಕ್ರಿಕೆಟ್ (blind cricket) ಟೂರ್ನಿಯಲ್ಲಿ ಚಾಂಪಿಯನ್ ಪಟ್ಟವೇರಿದೆ. ಥಾವು ದೇವಿ ಲಾಲ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ದೆಹಲಿ ವಿರುದ್ಧ ಸೂಪರ್ ಓವರ್ನಲ್ಲಿ ರೋಚಕ ಗೆಲುವು ಸಾಧಿಸಿತು.
ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆ (ಸಿಎಬಿಐ) ಆಯೋಜಿಸಿದ್ದ ಟೂರ್ನಿಯ ಪ್ರಶಸ್ತಿ ಕಾದಾಟದಲ್ಲಿ ಕರ್ನಾಟಕ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ಗೆ ಇಳಿದ ದೆಹಲಿ 6 ವಿಕೆಟ್ಗೆ 216 ರನ್ ಗಳಿಸಿತು. ಪ್ರತಿಯಾಗಿ ಕರ್ನಾಟಕ ತಂಡ ಸುನೀಲ್ ರಮೇಶ್ (145*ರನ್, 79 ಎಸೆತ, 24 ಬೌಂಡರಿ) ಶತಕದಾಟದಿಂದ 1 ವಿಕೆಟ್ಗೆ 216 ರನ್ ಗಳಿಸಿ ಟೈ ಸಾಧಿಸಿತು. ನಂತರ ನಡೆದ ಸೂಪರ್ ಓವರ್ನಲ್ಲಿ ಕರ್ನಾಟಕ 1 ವಿಕೆಟ್ಗೆ 11 ರನ್ ಗಳಿಸಿದರೆ, ದೆಹಲಿ ತಂಡ ವಿಕೆಟ್ ನಷ್ಟವಿಲ್ಲದೆ 10 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಚಾಂಪಿಯನ್ ಕರ್ನಾಟಕ ತಂಡ 1.5 ಲಕ್ಷ ರೂ. ಮತ್ತು ರನ್ನರ್ಅಪ್ ದೆಹಲಿ ತಂಡ 1.25 ಲಕ್ಷ ರೂ. ಬಹುಮಾನ ಗಳಿಸಿತು. ಸುನೀಲ್ ರಮೇಶ್ ಪಂದ್ಯಶ್ರೇಷ್ಠ ಪ್ರಶಸ್ತಿಯೊಂದಿಗೆ 10 ಸಾವಿರ ರೂ. ಪಡೆದರು. 3 ವಿಭಾಗಗಳಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಗಳಿಸಿದ ಸಂಜಯ್ ಕುಮಾರ್ ಶಾ (ಬಿ1), ರಾಮ್ಬೀರ್ ಸಿಂಗ್ (ಬಿ2), ಸುನೀಲ್ ರಮೇಶ್ (ಬಿ3) ತಲಾ 20 ಸಾವಿರ ರೂ. ಪಡೆದರು. 29 ತಂಡಗಳು ಸ್ಪರ್ಧಿಸಿದ ಟೂರ್ನಿಯಲ್ಲಿ ಒಟ್ಟು 73 ಪಂದ್ಯಗಳು ನಡೆದವು.