ಗಾಲೆಯಲ್ಲಿ ಕನ್ನಡಿಗರ ಜುಗಲ್‌ಬಂದಿ: ಮಳೆ ಅಡಚಣೆ ನಡುವೆ ಬೃಹತ್ ಮೊತ್ತದತ್ತ ಭಾರತ 
ಕ್ರಿಕೆಟ್

ಗಾಲೆಯಲ್ಲಿ ಕನ್ನಡಿಗರ ಜುಗಲ್‌ಬಂದಿ: ಮಳೆ ಅಡಚಣೆ ನಡುವೆ ಬೃಹತ್ ಮೊತ್ತದತ್ತ ಭಾರತ

ಗಾಲೆ:

ಬರೋಬ್ಬರಿ 20 ತಿಂಗಳುಗಳ ನಂತರ ಟೆಸ್ಟ್ ತಂಡಕ್ಕೆ ಪುನರಾಗಮನ ಕಂಡ ಕರ್ನಾಟಕ ತಂಡದ ನಾಯಕ ಹಾಗೂ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ (131* ರನ್, 178 ಎಸೆತ, 12 ಬೌಂಡರಿ, 1 ಸಿಕ್ಸರ್) ಚೊಚ್ಚಲ ಅಂತಾರಾಷ್ಟ್ರೀಯ ಶತಕದ ನೆರವಿನಿಂದ ಭಾರತ ತಂಡ, ಆತಿಥೇಯ ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭರ್ಜರಿ ಆರಂಭ ಕಂಡಿದೆ.

ಪಡಿಕ್ಕಲ್ ಜತೆಗೆ ಮತ್ತೋರ್ವ ಕನ್ನಡಿಗ ಹಾಗೂ ಉಪನಾಯಕ ಕೆಎಲ್ ರಾಹುಲ್ (77 ರನ್, 162 ಎಸೆತ, 9 ಬೌಂಡರಿ, 1 ಸಿಕ್ಸರ್) ಆಕರ್ಷಕ ಜತೆಯಾಟದ ನೆರವಿನಿಂದ ಶುಭಮಾನ್ ಗಿಲ್ ಬಳಗ ಮೊದಲ ಟೆಸ್ಟ್‌ನ ಆರಂಭಿಕ ದಿನದ ಗೌರವ ಸಂಪಾದಿಸಿದ್ದು, ಬೃಹತ್ ಮೊತ್ತ ಪೇರಿಸುವ ನಿರೀಕ್ಷೆ ಹರಡಿದೆ.


ಶನಿವಾರ ಗಾಲೆ ಕ್ರೀಡಾಂಗಣದಲ್ಲಿ ಆರಂಭಗೊಂಡ 50ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಶುಭಮಾನ್ ಗಿಲ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಭೋಜನ ಹಾಗೂ ಚಹಾ ವಿರಾಮ ನಂತರ ಮಳೆ ಅಡಚಣೆಯ ನಡುವೆಯೂ ಲಂಕಾ ಸ್ಪಿನ್ನರ್‌ಗಳನ್ನು ದಿಟ್ಟವಾಗಿ ಎದುರಿಸಿದ ಭಾರತ ದಿನದಂತ್ಯಕ್ಕೆ 73 ಓವರ್‌ಗಳಲ್ಲಿ 2 ವಿಕೆಟ್‌ಗೆ 288 ರನ್ ಕಲೆಹಾಕಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿ ಅಜೇಯವಾಗುಳಿದಿರುವ 26 ವರ್ಷದ ಪಡಿಕ್ಕಲ್ ಜತೆಗೆ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ (27* ರನ್, 36 ಎಸೆತ, 3 ಬೌಂಡರಿ, 1 ಸಿಕ್ಸರ್) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡರು. ಇವರಿಬ್ಬರು ಮುರಿಯದ ಮೂರನೇ ವಿಕೆಟ್‌ಗೆ 67 ಎಸೆತಗಳಲ್ಲಿ 52 ರನ್ ಸೇರಿಸಿದರು.