ಯುವರಾಜ್ ಸಿಂಗ್, ಸೆಹ್ವಾಗ್​ ಮತ್ತು ಮೊಹಮ್ಮದ್​ ಕೈಫ್  
ಕ್ರಿಕೆಟ್

ಯುವಿ-ಸೆಹ್ವಾಗ್​ಗಿಂತ ಬಡವ ನಾನು! ಅವರಿಬ್ಬರ ಬಳಿ 5ರಿಂದ 6 ಕೋಟಿ... ಮಾಜಿ ಕ್ರಿಕೆಟಿಗನ ಅಚ್ಚರಿ ಹೇಳಿಕೆ

ಪ್ರಮುಖ ಮುಖ್ಯಾಂಶಗಳು

  • ಟೀಮ್ ಇಂಡಿಯಾದ ಮೂವರು ಹಿರಿಯ ಕ್ರಿಕೆಟಿಗರು ಒಂದೇ ವೇದಿಕೆಯಲ್ಲಿ
  • ಯುವರಾಜ್​ ಸಿಂಗ್, ವೀರೇಂದ್ರ ಸೆಹ್ವಾಗ್​ಗಿಂತ ನಾನು ಬಡವ
  • ಅವರಿಬ್ಬರ ಬಳಿ ಸದಾ 5ರಿಂದ 6 ಕೋಟಿ ರೂ. ಇರುತ್ತೆ
ನವದೆಹಲಿ: ಪ್ರಸಕ್ತ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್​ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡೂ ತಂಡಗಳು ತಲಾ ಒಂದೊಂದು ಪಂದ್ಯ ಗೆಲ್ಲುವ ಮೂಲಕ 1-1 ಅಂತರ ಕಾಯ್ದುಕೊಂಡಿದೆ. ಈಗ ಉಳಿದಿರುವ ಕೊನೆಯ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಯಾರಿಗೆ ಸರಣಿಯ ಗೆಲುವು ಒಲಿಯಲಿದೆ ಎಂಬುದೇ ಕುತೂಹಲ. ಈ ಮಧ್ಯೆ, ಸದಾ ಕ್ರಿಕೆಟಿಗರ ಪರ ಒಂದಲ್ಲ ಒಂದು ವಿಚಾರಕ್ಕೆ ಪ್ರತಿಕ್ರಿಯಿಸುವ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್​, ಇದೀಗ ತಾನು ಯುವರಾಜ್ ಸಿಂಗ್ ಮತ್ತು ವೀರೇಂದ್ರ ಸೆಹ್ವಾಗ್​ಗಿಂತಲೂ ಬಡವ ಎಂದು ಹೇಳಿಕೊಂಡಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಹಾಗೂ ಹಿರಿಯ ಆಟಗಾರರಾದ ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಮತ್ತು ಮೊಹಮ್ಮದ್ ಕೈಫ್ ಪರಸ್ಪರ ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದಾರೆ. ಈ ಮೂವರು 20ರ ದಶಕದಲ್ಲಿ ಭಾರತ ತಂಡದಲ್ಲಿ ಒಟ್ಟಿಗೆ ಆಡಿದ್ದಾರೆ. 2002ರ ಇಂಗ್ಲೆಂಡ್ ವಿರುದ್ಧದ ನ್ಯಾಟ್‌ವೆಸ್ಟ್ ಸರಣಿಯ ಅಂತಿಮ ಹಣಾಹಣಿಯಲ್ಲಿ ಕೈಫ್ ಮತ್ತು ಯುವರಾಜ್ ಗೆಲುವಿನ ರೂವಾರಿಗಳಾಗಿ ಮಿಂಚಿದ್ದು ಇಂದಿಗೂ ಕ್ರಿಕೆಟ್ ಅಭಿಮಾನಿಗಳ ನೆನಪಿನಲ್ಲಿ ಶಾಶ್ವತವಾಗಿದೆ.
2006ರ ಬಳಿಕ ಕೈಫ್, ಟೀಮ್ ಇಂಡಿಯಾದಲ್ಲಿ ಆಡಲು ಸಾಧ್ಯವಾಗಲಿಲ್ಲ. ಆದರೆ, ಯುವರಾಜ್ ಮತ್ತು ಸೆಹ್ವಾಗ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್​ ಕರಿಯರ್​ ಅನ್ನು ಮುಂದುವರೆಸಿದರು. ಯುವರಾಜ್ 2007ರ ಟಿ20 ಮತ್ತು 2011ರ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ದೊಡ್ಡ ಗೆಲುವು ತಂದುಕೊಟ್ಟ ಯುವರಾಜ್​, ಈ ಟೂರ್ನಿಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದು ಬಹುತೇಕರಿಗೆ ಗೊತ್ತೇ ಇದೆ. ನೆಟ್‌ಫ್ಲಿಕ್ಸ್‌ನಲ್ಲಿ ಇನ್ನೂ ಪ್ರಸಾರವಾಗದ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ'ನ ಸಂಚಿಕೆಯಲ್ಲಿ ಮಾತನಾಡಿರುವ ಕೈಫ್​, ಯುವರಾಜ್ ಮತ್ತು ಸೆಹ್ವಾಗ್ ನನಗಿಂತ ಹೆಚ್ಚು ಶ್ರೀಮಂತರು ಎಂಬ ಹೇಳಿಕೆ ವೈರಲ್ ಆಗಿದೆ.
ಪ್ರೋಮೊದಲ್ಲಿ, "ಯುವರಾಜ್ ಮತ್ತು ಸೆಹ್ವಾಗ್ ಇಬ್ಬರ ಬಳಿ ಸದಾ 5ರಿಂದ 6 ಕೋಟಿ ರೂ. ಇದ್ದೇ ಇರುತ್ತದೆ. ಆದ್ರೆ, ನಾನು ಅವರಿಗಿಂತ ತುಂಬಾ ಬಡವ" ಎಂದು ಹಾಸ್ಯಸ್ಪದವಾಗಿ ಹೇಳಿರುವ ವಿಡಿಯೋ ತುಣಕು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಅಷ್ಟಕ್ಕೂ, ಕೈಫ್​ ಹೇಳಿದ್ದೇನು? ಯಾವ ಕಾರಣಕ್ಕೆ ಹಣದ ವಿಚಾರ ಚರ್ಚೆಯಾಯಿತು ಎಂಬುದು ಪೂರ್ತಿ ಸಂಚಿಕೆಯ ಪ್ರಸಾರದ ಬಳಿಕ ತಿಳಿಯಬೇಕಿದೆ,(ಏಜೆನ್ಸೀಸ್).