Jos Buttler | ನನ್ನ ​ರೆಕಾರ್ಡ್ ಬ್ರೇಕ್ ಮಾಡೋ ಕೆಪಾಸಿಟಿ ಆ ಭಾರತೀಯನಲ್ಲಿದೆ ಎಂದ ಬಟ್ಲರ್ 
ಕ್ರಿಕೆಟ್

ಟಿ20 ಕ್ರಿಕೆಟ್‌ಗೆ 'ಜೋಸ್ ದ ಬಾಸ್'!...ನನ್ನ ​ರೆಕಾರ್ಡ್ ಬ್ರೇಕ್ ಮಾಡೋ ಕೆಪಾಸಿಟಿ ಆ ಭಾರತೀಯನಲ್ಲಿದೆ ಎಂದ ಬಟ್ಲರ್ | Jos Buttler

ಇಂಗ್ಲೆಂಡ್‌ ಕ್ರಿಕೆಟ್​ ತಂಡದ ಸ್ಫೋಟಕ ಆಟಗಾರ ಜೋಸ್ ಬಟ್ಲರ್, ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದ್ದಾರೆ. ದ ಹಂಡ್ರೆಡ್ ಟೂರ್ನಿಯಲ್ಲಿ ವೆಲ್ಷ್ ಫೈರ್ ವಿರುದ್ಧ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಪರ ಆಡಿದ ಬಟ್ಲರ್, ವೆಸ್ಟ್ ಇಂಡೀಸ್‌ನ ದಿಗ್ಗಜ ಕೀರನ್ ಪೊಲಾರ್ಡ್ ದಾಖಲೆಯನ್ನು ಧೂಳಿಪಟ ಮಾಡಿದ್ದಾರೆ.

ಬಟ್ಲರ್ ತಾವು ಎದುರಿಸಿದ 20 ಎಸೆತಗಳಲ್ಲಿ 2 ಬೌಂಡರಿ ಹಾಗೂ 6 ಸ್ಫೋಟಕ ಸಿಕ್ಸರ್‌ಗಳ ನೆರವಿನಿಂದ 250.00 ಅವರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 51 ರನ್ ಚಚ್ಚಿದರು. 522 ಟಿ20 ಪಂದ್ಯಗಳನ್ನಾಡಿರುವ ಬಟ್ಲರ್, 9 ಶತಕ ಮತ್ತು 105 ಅರ್ಧಶತಕಗಳೊಂದಿಗೆ ಒಟ್ಟು 14,833 ರನ್ ಗಳಿಸಿದ್ದಾರೆ. ಈ ಮೂಲಕ ಕೀರನ್ ಪೊಲಾರ್ಡ್ (746 ಪಂದ್ಯಗಳಲ್ಲಿ 14,803 ರನ್) ಹಾಗೂ ಸುದೀರ್ಘ ಕಾಲ ಅಗ್ರಸ್ಥಾನದಲ್ಲಿದ್ದ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ (463 ಪಂದ್ಯಗಳಲ್ಲಿ 22 ಶತಕಗಳೊಂದಿಗೆ 14,562 ರನ್) ಅವರನ್ನು ಹಿಂದಿಕ್ಕಿದ್ದಾರೆ.

ನನ್ನ ರೆಕಾರ್ಡ್ ಮುರಿಯೋದು ಆ ಭಾರತೀಯ ಯುವಕ!

ಸಾಧನೆಯ ನಂತರ ಸ್ಕೈ ಕ್ರಿಕೆಟ್ ಜೊತೆ ಮಾತನಾಡಿದ ಬಟ್ಲರ್, ಟಿ20 ಕ್ರಿಕೆಟ್‌ನಲ್ಲಿ ಎಲ್ಲರಿಗಿಂತ ಹೆಚ್ಚು ರನ್ ಗಳಿಸಿದ್ದೇನೆ ಎಂದು ಯೋಚಿಸುವುದೇ ತುಂಬಾ ಖುಷಿ ಕೊಡುತ್ತದೆ. ಆದರೆ ಯಾವುದೋ ಒಂದು ದಿನ ಯಾರಾದರೂ ಇದನ್ನು ಮುರಿಯಲೇಬೇಕು, ಬಹುಶಃ ಆಟಗಾರನ ಹೆಸರು ಸೂರ್ಯವಂಶಿ (ವೈಭವ್ ಸೂರ್ಯವಂಶಿ) ಇರಬಹುದು!. ಏನೇ ಆದರೂ ಇದೊಂದು ಹೆಮ್ಮೆಯ ಕ್ಷಣ ಎಂದು ಭಾರತದ ಯುವ ತಾರೆಯನ್ನು ಪ್ರಶಂಸಿಸಿದರು.

ತಮ್ಮ ಫಾರ್ಮ್ ಬಗ್ಗೆ ಮಾತನಾಡುತ್ತಾ, ಕ್ರಿಕೆಟ್‌ ಎಷ್ಟು ಬೇಗ ಬದಲಾಗುತ್ತದೆ ಎಂದರೆ, ಕೆಲವು ತಿಂಗಳ ಹಿಂದೆ ನಾನು ರನ್ ಗಳಿಸಲು ಪರದಾಡುತ್ತಿದ್ದೆ. ಆದರೆ ಕಳೆದ ಕೆಲವು ವಾರಗಳಲ್ಲಿ ನಾನು ಆಡುತ್ತಿರುವ ರೀತಿ ಅತ್ಯುತ್ತಮವಾಗಿದೆ. ನಿಮ್ಮ ಮುಂದೆ ಎರಡೇ ಆಯ್ಕೆಗಳಿರುತ್ತವೆ. ಒಂದೋ ಸೋಲೊಪ್ಪಿಕೊಂಡು ಬಿಡುವುದು, ಇಲ್ಲವೇ ಮತ್ತೆ ಫಾರ್ಮ್‌ಗೆ ಬರಲು ಶ್ರಮಿಸುವುದು. ನಾನು ಎರಡನೆಯದನ್ನು ಆರಿಸಿಕೊಂಡೆ ಎಂದರು.

ಪಂದ್ಯದ ಸಂಕ್ಷಿಪ್ತ ವರದಿ

ಮ್ಯಾಂಚೆಸ್ಟರ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ವೆಲ್ಷ್ ಫೈರ್, ಮ್ಯಾಟ್ ಶಾರ್ಟ್ (47 ಎಸೆತಗಳಲ್ಲಿ 71) ಮತ್ತು ಫಿಲ್ ಸಾಲ್ಟ್ (37 ಎಸೆತಗಳಲ್ಲಿ 48) ವಿದ್ವಂಸಕ ಬ್ಯಾಟಿಂಗ್ ನೆರವಿನಿಂದ 100 ಎಸೆತಗಳಲ್ಲಿ 4 ವಿಕೆಟ್‌ಗೆ 155 ರನ್‌ ಕಲೆಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಆರಂಭದಿಂದಲೇ ಬಿರುಸಿನ ಆಟಕ್ಕಿಳಿಯಿತು. ಟಿಮ್ ಸೀಫರ್ಟ್ (36 ಎಸೆತಗಳಲ್ಲಿ ಅಜೇಯ 62), ಪೌಲ್ ವಾಲ್ಟರ್ (18 ಎಸೆತಗಳಲ್ಲಿ 37) ಮತ್ತು ಜೋಸ್ ಬಟ್ಲರ್ (20 ಎಸೆತಗಳಲ್ಲಿ ಅಜೇಯ 51) ಅವರ ಅಬ್ಬರದ ಆಟದಿಂದಾಗಿ ತಂಡವು ಕೇವಲ 1 ವಿಕೆಟ್ ಕಳೆದುಕೊಂಡು ಭರ್ಜರಿ ಜಯ ಸಾಧಿಸಿತು(ಏಜೆನ್ಸೀಸ್).