ಇಲ್ಲಿ ಬೌಲರ್‌ಗಳಿಗೂ ಬೆಲೆಯಿದೆ... ಟೀಮ್ ಇಂಡಿಯಾ ಹೀನಾಯ ಸೋಲಿನ ಬೆನ್ನಲ್ಲೇ ಜೋಫ್ರಾ ಆರ್ಚರ್ ಶಾಕಿಂಗ್ ಸ್ಟೇಟ್ಮೆಂಟ್! Jofra Archer
- ಭಾರತದ ಬ್ಯಾಟಿಂಗ್ ಸ್ನೇಹಿ ಪಿಚ್‌ಗಳ ವಿರುದ್ಧ ಜೋಫ್ರಾ ಆರ್ಚರ್ ಆಕ್ರೋಶ
- ಭಾರತದ ಪಿಚ್‌ಗಳಲ್ಲಿ ಬೌಲರ್‌ಗಳಿಗೆ ಬೆಲೆ ಇಲ್ಲ ಎಂದ ಇಂಗ್ಲೆಂಡ್ ವೇಗಿ
- ಐಪಿಎಲ್ ರನ್ ಮಳೆಗೆ ಇಂಗ್ಲೆಂಡ್ ಸ್ಪೀಡ್‌ಸ್ಟರ್ ಜೋಫ್ರಾ ಆರ್ಚರ್ ವ್ಯಂಗ್ಯ
- ಟೀಮ್ ಇಂಡಿಯಾವನ್ನು ಹೀನಾಯವಾಗಿ ಸೋಲಿಸಿ ಐಪಿಎಲ್ ಕಾಲೆಳೆದ ಆರ್ಚರ್
Jofra Archer : ಟ್ರೆಂಟ್‌ಬ್ರಿಡ್ಜ್‌ನಲ್ಲಿ ಮಂಗಳವಾರ ನಡೆದ ಮೂರನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಪಡೆ ಟೀಮ್ ಇಂಡಿಯಾವನ್ನು 125 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿತು. 202 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ ತಂಡವನ್ನು ಕೇವಲ 76 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಇಂಗ್ಲೆಂಡ್ ವೇಗಿಗಳಾದ ಜೋಶ್ ಟಾಂಗ್ (4 ವಿಕೆಟ್) ಮತ್ತು ಜೋಫ್ರಾ ಆರ್ಚರ್ (29 ರನ್‌ಗಳಿಗೆ 3 ವಿಕೆಟ್) ಮಾರಕ ದಾಳಿ ನಡೆಸಿದರು. ಪಂದ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಂಗ್ಲೆಂಡ್‌ನ ಸ್ಟಾರ್ ವೇಗಿ ಜೋಫ್ರಾ ಆರ್ಚರ್, ಐಪಿಎಲ್ ಹಾಗೂ ಇಂಗ್ಲೆಂಡ್ ಪರಿಸ್ಥಿತಿಗಳ ನಡುವಿನ ವ್ಯತ್ಯಾಸವನ್ನು ಎಳೆಎಳೆಯಾಗಿ ಬಿಚ್ಚಿಡುವ ಮೂಲಕ ಭಾರತದ ಬ್ಯಾಟಿಂಗ್ ಸ್ನೇಹಿ ಪಿಚ್‌ಗಳ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಇದು ಐಪಿಎಲ್ ಅಲ್ಲ, ಇಲ್ಲಿ ಬೌಲರ್‌ಗಳಿಗೂ ಬೆಲೆಯಿದೆ ಎಂಬ ಅರ್ಥದಲ್ಲಿ ಮಾತನಾಡಿದ ಆರ್ಚರ್, ಭಾರತದಲ್ಲಿ ಬ್ಯಾಟರ್‌ಗಳಿಗೆ ಮಾತ್ರ ಪೂರಕವಾಗಿರುವ ಸಣ್ಣ ಬೌಂಡರಿಗಳು ಮತ್ತು ಫ್ಲ್ಯಾಟ್ ಪಿಚ್‌ಗಳ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಭಾರತದ ಕಡು ಬಿಸಿಲು ಹಾಗೂ ರನ್ ಮಳೆ ಹರಿಯುವ ಪಿಚ್‌ಗಳಲ್ಲಿ ಬೌಲಿಂಗ್ ಮಾಡಿ ಸುಸ್ತಾಗಿದ್ದ ನಮಗೆ, ತಾಯ್ನಾಡು ಇಂಗ್ಲೆಂಡ್‌ನ ಹವಾಮಾನ ಮತ್ತು ಪಿಚ್‌ಗಳಲ್ಲಿ ಬೌಲಿಂಗ್ ಮಾಡುವುದು ಎಲ್ಲವೂ ಮತ್ತೆ ಯಥಾಸ್ಥಿತಿಗೆ ಮರಳಿದಂತೆ ಭಾಸವಾಗುತ್ತಿದೆ. ಇಂಗ್ಲೆಂಡ್ ಪರಿಸ್ಥಿತಿಗಳು ಬೌಲರ್‌ಗಳಿಗೆ ಹೊಸ ಚೈತನ್ಯ ನೀಡಿವೆ ಎಂದು ಆರ್ಚರ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಪಿಚ್‌ಗಳ ತಾಂತ್ರಿಕ ವ್ಯತ್ಯಾಸವನ್ನು ವಿವರಿಸಿದ ಆರ್ಚರ್, ಇಂಗ್ಲೆಂಡ್‌ನಲ್ಲಿ ಬೌಲರ್‌ಗಳು ಕೇವಲ ಉತ್ತಮ ಲೆಂಗ್ತ್‌ನಲ್ಲಿ ನೇರವಾದ ಎಸೆತಗಳನ್ನು ಎಸೆದರೆ ಸಾಕು, ವಿಕೆಟ್ ಪಡೆಯಬಹುದು. ಆದರೆ ಭಾರತದಲ್ಲಿ ಬ್ಯಾಟಿಂಗ್ ಮಾಡುವುದು ಅತ್ಯಂತ ಸುಲಭ ಹಾಗೂ ಅಲ್ಲಿನ ಬೌಂಡರಿಗಳು ತುಂಬಾ ಚಿಕ್ಕದಾಗಿರುತ್ತವೆ. ಹೀಗಾಗಿ ಅಲ್ಲಿ ಬೌಲರ್‌ಗಳು ಸಣ್ಣ ತಪ್ಪು ಮಾಡಿದರೂ ಸಿಕ್ಸರ್-ಬೌಂಡರಿ ಹೋಗುತ್ತವೆ, ಅದಕ್ಕಾಗಿಯೇ ಅಲ್ಲಿ ಅತ್ಯಂತ ಜಾಗರೂಕತೆಯಿಂದ ಮತ್ತು ನಿಖರವಾಗಿ ಬೌಲಿಂಗ್ ಮಾಡಬೇಕಾಗುತ್ತದೆ. ಇಂಗ್ಲೆಂಡ್ ಪಿಚ್‌ಗಳಲ್ಲಿ ಬೌಲರ್‌ಗಳಿಗೆ ತಪ್ಪುಗಳನ್ನು ತಿದ್ದಿಕೊಳ್ಳಲು ಒಂದಿಷ್ಟು ಅವಕಾಶವಿರುತ್ತದೆ ಎಂದು ಹೇಳುವ ಮೂಲಕ ಐಪಿಎಲ್ ಕ್ರಿಕೆಟ್‌ನ ಸ್ವರೂಪಕ್ಕೆ ಆರ್ಚರ್ ಟಾಂಗ್ ನೀಡಿದ್ದಾರೆ.
ಇಂಗ್ಲೆಂಡ್‌ನ ವಾತಾವರಣ ಮತ್ತು ಐಪಿಎಲ್ ನಡುವಿನ ವ್ಯತ್ಯಾಸವನ್ನು ಮತ್ತಷ್ಟು ಬೊಟ್ಟು ಮಾಡಿದ ಆರ್ಚರ್, ಟ್ರೆಂಟ್‌ಬ್ರಿಡ್ಜ್ ಪಿಚ್‌ನಲ್ಲಿ 201 ರನ್‌ಗಳ ಗುರಿಯನ್ನು ಬೆನ್ನಟ್ಟುವುದು ಯಾವುದೇ ತಂಡಕ್ಕಾದರೂ ಕಷ್ಟಕರವಾಗಿರುತ್ತದೆ ಎಂದಿದ್ದಾರೆ. ಐಪಿಎಲ್‌ನಲ್ಲಿ ಕೆಲವೊಮ್ಮೆ 200 ರನ್ ಗಳಿಸಿದರೂ ಪಂದ್ಯ ಗೆಲ್ಲುವ ವಿಶ್ವಾಸವಿರುವುದಿಲ್ಲ, ಆದರೆ ಈ ಪಿಚ್‌ನಲ್ಲಿ 201 ರನ್ ಗಳಿಸಿದಾಗ, ನಮಗೆ ಸಂಪೂರ್ಣ ವಿಶ್ವಾಸವಿಲ್ಲದಿದ್ದರೂ ಸಹ ಇದನ್ನು ಭೇದಿಸಲು ಎದುರಾಳಿಗಳು ಅತ್ಯದ್ಭುತವಾದ ಇನ್ನಿಂಗ್ಸ್ ಆಡಬೇಕಾಗುತ್ತದೆ ಎಂಬುದು ನನಗೆ ತಿಳಿದಿತ್ತು. ನಮ್ಮ ಎಲ್ಲಾ ಬೌಲರ್‌ಗಳು ವಿಕೆಟ್ ಪಡೆಯುತ್ತಿರುವುದು ಮತ್ತು ತಂಡದ ಗೆಲುವಿಗಾಗಿ ಒಟ್ಟಾಗಿ ಶ್ರಮಿಸುತ್ತಿರುವುದು ನನಗೆ ಅತೀವ ಸಂತಸ ತಂದಿದೆ ಎಂದು ಆರ್ಚರ್ ಅವರು ವಿವರಿಸಿದ್ದಾರೆ.
ಮತ್ತೊಂದೆಡೆ, ಐರ್ಲೆಂಡ್ ಪ್ರವಾಸದಲ್ಲಿ ಟಿ20 ಸರಣಿಯನ್ನು ಸೋತು ಮುಖಭಂಗ ಅನುಭವಿಸಿದ್ದ ಶ್ರೇಯಸ್ ಅಯ್ಯರ್ ನೇತೃತ್ವದ ಯುವ ಭಾರತ ತಂಡ, ಇದೀಗ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲೂ 2-0 ಅಂತರದ ಹಿನ್ನಡೆಯಲ್ಲಿದೆ. ಈ ಪಂದ್ಯದಲ್ಲಿ ಆರ್ಚರ್ ಮತ್ತು ಜೋಶ್ ಟಾಂಗ್ ಇಬ್ಬರೂ ಗಂಟೆಗೆ 144 ಕಿ.ಮೀ.ಗೂ ಅಧಿಕ ವೇಗದಲ್ಲಿ ಬೆಂಕಿ ಚೆಂಡುಗಳನ್ನು ಎಸೆಯುವ ಮೂಲಕ ಮತ್ತು ಹೆಚ್ಚುವರಿ ಬೌನ್ಸ್ ಬಳಸಿಕೊಂಡು ಭಾರತದ ಬ್ಯಾಟಿಂಗ್ ಲೈನಪ್ ಅನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದರು. ಆದಾಗ್ಯೂ, ತಮಗೆ ವಿಕೆಟ್ ತಂದುಕೊಟ್ಟಿದ್ದು ಕೇವಲ ವೇಗವಲ್ಲ, ಬದಲಾಗಿ ತಮ್ಮ ಶಿಸ್ತುಬದ್ಧ ಬೌಲಿಂಗ್ ಎಂದು ಆರ್ಚರ್ ಸ್ಪಷ್ಟಪಡಿಸಿದ್ದಾರೆ.
ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ, ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಇಂಗ್ಲೆಂಡ್ ಪಡೆ ಅಬ್ಬರದ ಪ್ರದರ್ಶನ ನೀಡಿತು. ಆರಂಭಿಕ ಆಟಗಾರ ಫಿಲ್ ಸಾಲ್ಟ್ ಭರ್ಜರಿ ಬ್ಯಾಟಿಂಗ್ ನಡೆಸಿ ಕೇವಲ 44 ಎಸೆತಗಳಲ್ಲಿ 70 ರನ್ ಚಚ್ಚಿ ತಂಡಕ್ಕೆ ಬಲವಾದ ಅಡಿಪಾಯ ಹಾಕಿಕೊಟ್ಟರು. ಇನಿಂಗ್ಸ್ ಅಂತ್ಯದಲ್ಲಿ ಸ್ಯಾಮ್ ಕರನ್ (24 ಎಸೆತಗಳಲ್ಲಿ ಅಜೇಯ 41) ಮತ್ತು ವಿಲ್ ಜಾಕ್ಸ್ (7 ಎಸೆತಗಳಲ್ಲಿ 14) ಸ್ಫೋಟಕ ಆಟ ಪ್ರದರ್ಶಿಸಿದ್ದರಿಂದ, ಇಂಗ್ಲೆಂಡ್ ನಿಗದಿತ 20 ಓವರ್‌ಗಳಲ್ಲಿ 201 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು.
202 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತದ ಬ್ಯಾಟಿಂಗ್ ಲೈನ್-ಅಪ್ ಸಂಪೂರ್ಣವಾಗಿ ತತ್ತರಿಸಿತು. ಇಂಗ್ಲೆಂಡ್ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ಭಾರತದ ಯಾವುದೇ ಬ್ಯಾಟ್ಸ್‌ಮನ್ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಟೀಮ್ ಇಂಡಿಯಾ ಕೇವಲ 11.4 ಓವರ್‌ಗಳಲ್ಲಿ 76 ರನ್‌ಗಳಿಗೆ ಆಲೌಟ್ ಆಗುವ ಮೂಲಕ 125 ರನ್‌ಗಳ ಹೀನಾಯ ಸೋಲನ್ನು ಒಪ್ಪಿಕೊಂಡಿತು. ಭಾರತದ ಪರ ವೈಭವ್ ಸೂರ್ಯವಂಶಿ ಮತ್ತು ಇಶಾನ್ ಕಿಶನ್ ತಲಾ 13 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್ ಎನಿಸಿತು, (ಏಜೆನ್ಸೀಸ್).