ಟೀಮ್ ಇಂಡಿಯಾ ಆಟಗಾರರಿಗೆ ಜೆರ್ಸಿ ಸಮಸ್ಯೆ: ಸ್ಪಷ್ಟನೆ ನೀಡಿದ JSW ಇನ್‌ಸ್ಪೈರ್ ಸಂಸ್ಥೆ
ನವದೆಹಲಿ: ಜಪಾನ್‌ನ ಐಚಿ-ನಗೋಯಾದಲ್ಲಿ ಏಷ್ಯಾಡ್ ಸ್ಪರ್ಧಿಗಳು ವಾಸ್ತವ್ಯದ ಅವ್ಯವಸ್ಥೆ ಎದುರಿಸುತ್ತಿರುವ ನಡುವೆ ಟೀಮ್ ಇಂಡಿಯಾ ಆಟಗಾರರು ಸರಿಯಾದ ಅಳತೆಯ ಜೆರ್ಸಿಗೆ ಪರದಾಡಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುವ ಭಾರತ ತಂಡ ತನ್ನ ಸಾಂಪ್ರದಾಯಿಕ ನೀಲಿ ಬಣ್ಣದ ಜೆರ್ಸಿ ಬದಲಿಗೆ ಭಾರತೀಯ ಒಲಿಂಪಿಕ್ ಸಂಸ್ಥೆಯ (ಐಒಎ) ನೀಡುವ ಉಡುಪುಗಳನ್ನು ಧರಿಸಿ ಕಣಕ್ಕಿಳಿಯಬೇಕಿದೆ. ಭಾನುವಾರ ಮುಂಜಾನೆ ನವದೆಹಲಿಯಿಂದ ತೆರಳಲು ಸಜ್ಜಾಗಿದ್ದ ಭಾರತ ತಂಡದ ಆಟಗಾರರಿಗೆ ನೀಡಿರುವ ಕಿಟ್‌ನಲ್ಲಿನ ಜೆರ್ಸಿಗಳಲ್ಲಿ ಅಳತೆಯ ವ್ಯತ್ಯಾಸ ಕಾಣಿಸಿದೆ. ಬಹುತೇಕ ಆಟಗಾರರ ಧರಿಸುವ ಜೆರ್ಸಿಗಳನ್ನು ಮರುಹೊಂದಿಸಲಾಗಿದೆ.
ಏಷ್ಯಾಡ್‌ನಲ್ಲಿ ಕಣಕ್ಕಿಳಿಯಲಿರುವ ಎಲ್ಲ ಕ್ರೀಡಾಪಟುಗಳಿಗೆ JSW ಇನ್‌ಸ್ಪೈರ್ ಕಿಟ್ ಪೂರೈಸಲಿದೆ. ನಗೋಯಾದಲ್ಲಿ ಭಾರತೀಯ ಸ್ಪರ್ಧಿಗಳಿಗೆ ವಸತಿ ವ್ಯವಸ್ಥೆಯ ಸಮಸ್ಯೆ ಎದುರಾಗಿರುವುದರಿಂದ ಭಾರತ ಪುರುಷರ ತಂಡಕ್ಕೆ ಸ್ವಂತ ಖರ್ಚಿನಲ್ಲಿಯೇ ಬಿಸಿಸಿಐ ಹೋಟೆಲ್ ರೂಮ್ ವ್ಯವಸ್ಥೆ ಮಾಡಿದೆ. ಆದರೆ, ಆಟಗಾರರ ಅಭ್ಯಾಸಕ್ಕೆ ಸರಿಯಾದ ಸ್ಥಳಾವಕಾಶದ ಬಗ್ಗೆ ಪ್ರಶ್ನೆ ಉದ್ಭವಿಸಿದೆ. ಭಾರತೀಯ ಒಲಿಂಪಿಕ್ ಸಂಸ್ಥೆಯ ವಸತಿ ವ್ಯವಸ್ಥೆಯಲ್ಲಿ ಹರ್ಮಾನ್‌ಪ್ರೀತ್ ಕೌರ್ ಪಡೆ ವಾಸ್ತವ್ಯಹೂಡಿದೆ.
ಸಮವಸ್ತ್ರಗಳು ಸರಿಯಾಗಿವೆ ಮತ್ತು ಯಾವುದೇ ಸಮಸ್ಯೆಗಳಿಲ್ಲ: JSW ಸ್ಪಷ್ಟನೆ
"ಭಾರತೀಯ ಕ್ರೀಡಾಪಟುಗಳ ತಂಡಕ್ಕೆ ಸಮಯಕ್ಕೆ ಸರಿಯಾಗಿ ಉದ್ಘಾಟನಾ ಸಮಾರಂಭದ ಸಮವಸ್ತ್ರ (ಸೆರೆಮೊನಿಯಲ್ ಕಿಟ್) ಸಿಗದಿರುವ ವಿಷಯಕ್ಕೆ ಸಂಬಂಧಿಸಿದಂತೆ, ಮಾಧ್ಯಮಗಳ ಕೆಲವು ವಿಭಾಗಗಳು JSW ಸ್ಪೋರ್ಟ್ಸ್ ಕಾರಣ ಎಂದು ಆರೋಪಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಉದ್ಘಾಟನಾ ಸಮಾರಂಭದ ಸಮವಸ್ತ್ರದ ಉತ್ಪಾದನೆ ಮತ್ತು ಹಸ್ತಾಂತರದ ಜವಾಬ್ದಾರಿ JSW ಇನ್‌ಸ್ಪೈರ್ ಸಂಸ್ಥೆಯದ್ದಾಗಿರಲಿಲ್ಲ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ.
ನಾವು ಆಟಗಾರರಿಗೆ ಅಗತ್ಯವಿರುವ ಪ್ರದರ್ಶನ ಸಮವಸ್ತ್ರಗಳನ್ನು (ಪರ್ಫಾರ್ಮೆನ್ಸ್ ಕಿಟ್) ಆಯಾ ಕ್ರೀಡಾ ಒಕ್ಕೂಟಗಳಿಗೆ ಹಂತ-ಹಂತವಾಗಿ ಒದಗಿಸಿದ್ದೇವೆ. ನಿರ್ದಿಷ್ಟವಾಗಿ ಹೇಳುವುದಾದರೆ, ಪುರುಷರ ಮತ್ತು ಮಹಿಳಾ ಕ್ರಿಕೆಟ್ ತಂಡಗಳೆರಡರ ಸಮವಸ್ತ್ರಗಳನ್ನು ಆಯಾ ಮ್ಯಾನೇಜರ್‌ಗಳಿಗೆ ಸಾಕಷ್ಟು ಮುಂಚಿತವಾಗಿಯೇ ಹಸ್ತಾಂತರಿಸಲಾಗಿದೆ. ಸಮವಸ್ತ್ರಗಳು ಸರಿಯಾಗಿವೆ ಮತ್ತು ಯಾವುದೇ ಸಮಸ್ಯೆಗಳಿಲ್ಲ ಎಂದು ಅವರು ದೃಢಪಡಿಸಿದ್ದಾರೆ. ಪುರುಷರ ತಂಡವು ಸೆಪ್ಟೆಂಬರ್ 26 ರಂದು ಟೋಕಿಯೋದಿಂದ ನಗೋಯಾಗೆ ಪ್ರಯಾಣಿಸುವಾಗ JSW ಇನ್‌ಸ್ಪೈರ್ ಧರಿಸಲಿದೆ. ಏಷ್ಯನ್ ಗೇಮ್ಸ್‌ನ ಮಾನದಂಡಗಳು ಮತ್ತು ಮೌಲ್ಯಗಳನ್ನು ಎತ್ತಿಹಿಡಿಯಲು JSW ಇನ್‌ಸ್ಪೈರ್ ಬದ್ಧವಾಗಿದೆ.