ಹಾಕಿ ಇಂಡಿಯಾ ಅಧ್ಯಕ್ಷರಿಗೆ ತಿಳಿಸದೆ ಜೆರ್ಸಿ ಬಣ್ಣ ಬದಲಾವಣೆ!:ಸೂಕ್ತ ವಿವರಣೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ 
ಕ್ರಿಕೆಟ್

ಹಾಕಿ ಇಂಡಿಯಾ ಅಧ್ಯಕ್ಷರಿಗೆ ತಿಳಿಸದೆ ಜೆರ್ಸಿ ಬಣ್ಣ ಬದಲಾವಣೆ!:ಸೂಕ್ತ ವಿವರಣೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ

ನವದೆಹಲಿ: ಮುಂಬರುವ ಹಾಕಿ ವಿಶ್ವಕಪ್‌ನಲ್ಲಿ ಭಾಗವಹಿಸುವ ಭಾರತ ಪುರುಷ-ಮಹಿಳೆಯರ ತಂಡಗಳ ಜೆರ್ಸಿಯನ್ನು ನೀಲಿಯಿಂದ ಕೇಸರಿ ಬಣ್ಣಕ್ಕೆ ಬದಲಾಯಿಸುವ ನಿರ್ಧಾರದ ಹಿಂದಿನ ಪ್ರಕ್ರಿಯೆಯನ್ನು ಪ್ರಶ್ನಿಸಿರುವ ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟರ್ಕಿ, ಹಾಕಿ ಇಂಡಿಯಾದ ಚುನಾಯಿತ ಸದಸ್ಯರು ಹಾಗೂ ಕಾರ್ಯಕಾರಿ ಮಂಡಳಿಯ ಒಪ್ಪಿಗೆ ಪಡೆಯದೆ ಇದನ್ನು ಜಾರಿಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ. ಜತೆಗೆ ಈ ಬದಲಾವಣೆಯ ಕುರಿತು ಸೂಕ್ತ ವಿವರಣೆಯ ಉತ್ತರ ನೀಡುವಂತೆ ಸಂಬಂಧಪಟ್ಟ ಹಾಕಿ ಇಂಡಿಯಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.


ಭಾರತೀಯ ರಾಷ್ಟ್ರೀಯ ತಂಡದ ಜೆರ್ಸಿಯ ಬಣ್ಣದ ಈ ನಿರ್ಧಾರವನ್ನು ಕಾರ್ಯನಿರ್ವಾಹಕ ಮಂಡಳಿಯ ಮುಂದೆ ಚರ್ಚೆಗೆ ಇಡದೆ ಮತ್ತು ನನ್ನ ಪೂರ್ವಜ್ಞಾನವಿಲ್ಲದೆ ಜಾರಿಗೆ ತರಲಾಗಿದೆ ಎಂದು ಭಾರತ ಹಾಕಿ ತಂಡದ ಮಾಜಿ ನಾಯಕ ದಿಲೀಪ್ ಟರ್ಕಿ ಸ್ಪಷ್ಟನೆ ನೀಡಿದ್ದಾರೆ. ಜತೆಗೆ ಹಲವು ವರ್ಷಗಳಿಂದ ಸಾಂಪ್ರದಾಯಿಕ ನೀಲಿ ಬಣ್ಣದ ಜೆರ್ಸಿಯೊಂದಿಗೆ ಆಡಿದ್ದ ಭಾರತ ತಂಡದ ಪ್ರಾಯೋಜಕನಾಗಿರುವ ಒಡಿಶಾ ಸರ್ಕಾರವೂ ಬಣ್ಣ ಬದಲಾವಣೆಗೆ ಸೃಷ್ಟಿಕರಣ ಬಯಸಿದೆ ಎಂದಿದ್ದಾರೆ.
ಬಣ್ಣಕ್ಕಲ್ಲ, ನಿರ್ಧಾರದ ರೀತಿಗೆ ಆಕ್ಷೇಪ
ಕೇಸರಿ ಬಣ್ಣದ ಹೊಸ ಜೆರ್ಸಿಗೆ ಯಾವುದೇ ಆಕ್ಷೇಪಣೆ ಇಲ್ಲ. ಬದಲಾಗಿ ಅಧಿಕಾರಿಗಳು ನಿರ್ಧಾರ ತೆಗೆದುಕೊಂಡ ರೀತಿ ಸರಿಯಿಲ್ಲ. ಹಲವು ವರ್ಷಗಳಿಂದ ರಾಷ್ಟ್ರೀಯ ತಂಡದ ಸಂಕೇತ ಮತ್ತು ಪ್ರಾತಿನಿಧ್ಯವನ್ನು ಒಳಗೊಂಡ ಈ ಮಹತ್ವದ ನಿರ್ಧಾರವನ್ನು ಅನುಷ್ಠಾನಗೊಳಿಸುವ ಮೊದಲು ಚುನಾಯಿತ ನಾಯಕತ್ವ ಮತ್ತು ಕಾರ್ಯಕಾರಿ ಮಂಡಳಿಯೊಂದಿಗೆ ಚರ್ಚಿಸಬೇಕಿತ್ತು.
ಜೆರ್ಸಿ ಬಣ್ಣ ಬದಲಾವಣೆಗೆ ಸಮಿತಿಗಳು ಅಥವಾ ಇತರ ವ್ಯಕ್ತಿಗಳನ್ನು ಒಳಗೊಂಡಂತೆ ಅನುಸರಿಸಲಾದ ಪ್ರಕ್ರಿಯೆ. ಅಧ್ಯಕ್ಷರು, ಕಾರ್ಯಕಾರಿ ಮಂಡಳಿ, ಪ್ರಸ್ತುತ ಆಟಗಾರರು, ತರಬೇತುದಾರರು, ಮಾಜಿ ಅಂತಾರಾಷ್ಟ್ರೀಯ ಆಟಗಾರರು ಅಥವಾ ಇತರ ಸಂಬಂಧಿತ ಪಾಲುದಾರರೊಂದಿಗೆ ಯಾವುದೇ ಸಮಾಲೋಚನೆ ನಡೆಸಲಾಗಿದೆಯೇ ಎಂಬುದರ ಬಗ್ಗೆ ಸೃಷ್ಟಿಕರಣ ನೀಡುವಂತೆ ಹಾಕಿ ಇಂಡಿಯಾ ಕಾರ್ಯನಿರ್ವಾಹ ನಿರ್ದೇಶಕ ಕಮಾಂಡರ್ ಶ್ರೀವಾತ್ಸವಗೆ ಸೂಚನೆ ನೀಡಿದ್ದಾರೆ.