ಜೆಮಿಮಾ ರೊಡ್ರಿಗಸ್- ಸ್ಮೃತಿ ಮಂಧಾನ
- ಸ್ಮೃತಿ ಮಂಧಾನ ಅವರ ವಿವಾಹವನ್ನು ಮುಂದೂಡಲಾಯಿತು
- ತಂದೆ ಮತ್ತು ಭಾವಿ ಪತಿಯ ಅನಾರೋಗ್ಯ ಸಮಸ್ಯೆಯೇ ಇದಕ್ಕೆ ಕಾರಣ
- ಬಿಗ್ ಬ್ಯಾಷ್ ಲೀಗ್ನಿಂದ (WBBL) ಜೆಮಿಮಾ ರೊಡ್ರಿಗಸ್ ಹೊರಗೆ
ಮುಂಬೈ: ಭಾರತೀಯ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಜೆಮಿಮಾ ರೊಡ್ರಿಗಸ್ ಇದೀಗ ಪ್ರಮುಖ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಇತ್ತೀಚೆಗೆ ಅವರ ಗೆಳತಿ, ಮಹಿಳಾ ತಂಡದ ಮಾಜಿ ಕ್ಯಾಪ್ಟನ್ ಸ್ಮೃತಿ ಮಂಧಾನ ಅವರ ವಿವಾಹವನ್ನು ಮುಂದೂಡಲಾಯಿತು. ಇದಕ್ಕೆ ಕಾರಣ, ಅವರ ತಂದೆ ಮತ್ತು ಭಾವಿ ಪತಿಯ ಅನಾರೋಗ್ಯ ಸಮಸ್ಯೆ.
ಮೊದಲು ಸ್ಮೃತಿ ತಂದೆ ಅನಾರೋಗ್ಯದ ಹಿನ್ನೆಲೆ ದಿಢೀರ್ ಆಸ್ಪತ್ರೆ ಸೇರಿದರು. ಹೀಗಾಗಿ, ಭಾನುವಾರ ನಡೆಯಬೇಕಿದ್ದ ಮದುವೆ ಸಂಭ್ರಮವನ್ನು ಮುಂದೂಡಲಾಯಿತು. ಪ್ರಸ್ತುತ, ಅವರ ತಂದೆ ಚೇತರಿಸಿಕೊಳ್ಳುತ್ತಿದ್ದಾರೆ. ಇದೇ ಸಮಯದಲ್ಲಿ, ಸ್ಮೃತಿ ಅವರ ಭಾವಿ ಪತಿ ವಿಚಾರದಲ್ಲಿ ಒಂದಷ್ಟು ನೆಗೆಟಿವ್ ಸುದ್ದಿಗಳು ಹರಿದಾಡುತ್ತಿವೆ. ಇದು ತೀವ್ರ ಗೊಂದಲಕ್ಕೆ ಕಾರಣವಾಗಿದೆ. ಈ ಎಲ್ಲ ವಿಷಯಗಳಿಂದ ಸದ್ಯ ಅತೀವ ದುಃಖಕ್ಕೆ ಒಳಗಾಗಿರುವ ಗೆಳತಿಗೆ ಜೆಮಿಮಾ ಹೆಗಲು ಕೊಡಲು ಮುಂದಾಗಿದ್ದಾರೆ.
ಆಸೀಸ್ನಲ್ಲಿ ನಡೆಯಲಿರುವ ಬಿಗ್ ಬ್ಯಾಷ್ ಲೀಗ್ನಿಂದ (WBBL) ಜೆಮಿಮಾ ರೊಡ್ರಿಗಸ್ ಹೊರಗುಳಿದಿದ್ದಾರೆ. ಮಹಿಳಾ ಬಿಗ್ ಬ್ಯಾಷ್ ಲೀಗ್‌ನ 11ನೇ ಸೀಸನ್ ನವೆಂಬರ್ 9ರಂದು ಪ್ರಾರಂಭವಾಯಿತು. ಇದರಲ್ಲಿ ಜೆಮಿಮಾ ಬ್ರಿಸ್ಬೇನ್ ಹೀಟ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಆದಾಗ್ಯೂ, ಸ್ಮೃತಿ ಮಂಧಾನ ಅವರ ವಿವಾಹದ ಕಾರಣ ಜೆಮಿಮಾ 10 ದಿನಗಳ ಹಿಂದೆಯೇ ಭಾರತಕ್ಕೆ ಮರಳಿದರು.
ಇಂತಹ ಕಷ್ಟದ ಸಮಯದಲ್ಲಿ ಸ್ಮೃತಿ ಮಂಧಾನ ಹಾಗೂ ಅವರ ಕುಟುಂಬದ ಜತೆಗಿರಲು ಜೆಮಿಮಾ ಲೀಗ್ನಿಂದ ಹೊರನಡೆದಿದ್ದಾರೆ. ಜೆಮಿಮಾ ನಿಲುವಿನ ಬಗ್ಗೆ ಬ್ರಿಸ್ಬೇನ್ ಹೀಟ್ ಸಿಇಒ ಟೆರ್ರಿ ಸ್ವೆನ್ಸನ್ ಪ್ರತಿಕ್ರಿಯಿಸಿ: "ಪ್ರಸ್ತುತ ಪರಿಸ್ಥಿತಿಯಲ್ಲಿ ಸ್ಮೃತಿಗೆ ಬೆಂಬಲ ನೀಡುವ ಜೆಮಿಮಾ ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ಅವರು ತಂಡಕ್ಕೆ ಮರಳಲು ಸಾಧ್ಯವಾಗದಿದ್ದಕ್ಕೆ ನಿರಾಶೆಯಿದೆ" ಎಂದರು,(ಏಜೆನ್ಸೀಸ್).