ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ
- ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು ಭರ್ಜರಿಯಾಗಿ ಆರಂಭಿಸಿದ ಭಾರತ
- ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ಹರಿಣ ಪಡೆಯನ್ನು 101 ರನ್‌ಗಳಿಂದ ಸೋಲಿಸಿದ ಟೀಮ್ ಇಂಡಿಯಾ
- ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾರಿಂದ ಅಪರೂಪದ ಸಾಧನೆ
- ಮೂರು ಸ್ವರೂಪಗಳಲ್ಲಿ 100 ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ
ಭುವನೇಶ್ವರ: ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು ಭಾರತ ಭರ್ಜರಿಯಾಗಿ ಆರಂಭಿಸಿದೆ. ಮಂಗಳವಾರ ( ಡಿ.09) ಒಡಿಶಾದ ಕಟಕ್‌ನಲ್ಲಿರುವ ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ಭಾರತ, ಪ್ರವಾಸಿ ಹರಿಣ ಪಡೆಯನ್ನು 101 ರನ್‌ಗಳಿಂದ ಸೋಲಿಸಿತು. ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ( Jasprit Bumrah ) ಅವರು ಈ ಪಂದ್ಯದಲ್ಲಿ ಅಪರೂಪದ ಸಾಧನೆ ಮಾಡಿದರು. ಮೂರು ಸ್ವರೂಪಗಳಲ್ಲಿ 100 ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಬುಮ್ರಾ ಇತಿಹಾಸ ಸೃಷ್ಟಿಸಿದರು.
ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಯುವ ಬ್ಯಾಟ್ಸ್‌ಮನ್ ಡೆವಾಲ್ಡ್ ಬ್ರೆವಿಸ್ ಅವರನ್ನು ಔಟ್ ಮಾಡುವ ಮೂಲಕ ಜಸ್ಪ್ರೀತ್ ಬುಮ್ರಾ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ತಮ್ಮ 100ನೇ ವಿಕೆಟ್ ಪಡೆದರು. ಇನ್ನಿಂಗ್ಸ್‌ನ 11ನೇ ಓವರ್‌ನಲ್ಲಿ ಬುಮ್ರಾ ಅವರು ಈ ಸಾಧನೆ ಮಾಡಿದರು. ಈ ಓವರ್‌ನ ಎರಡನೇ ಎಸೆತವನ್ನು ಡೆವಾಲ್ಡ್ ಬ್ರೆವಿಸ್ ಅವರು ಬಲವಾಗಿ ಬಾರಿಸಿದಾಗ ಚೆಂಡು ಬ್ಯಾಟ್ನ ಮೇಲಿನ ಅಂಚಿಗೆ ಬಡಿದು ಗಾಳಿಯಲ್ಲಿ ಮೇಲಕ್ಕೆ ಹಾರಿತು. ಈ ವೇಳೆ ಸೂರ್ಯಕುಮಾರ್ ಯಾದವ್ ಅವರು ಕವರ್ಸ್‌ನಲ್ಲಿ ಸುಲಭವಾಗಿ ಕ್ಯಾಚ್ ಹಿಡಿದರು.
ಆದರೆ, ಬುಮ್ರಾ ಎಸೆದ ಈ ಚೆಂಡಿನ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟಿಕೊಳ್ಳುತ್ತಿವೆ. ಏಕೆಂದರೆ, ಕೆಲವರು ಇದು ಫ್ರಂಟ್ ಫೂಟ್ ನೋ ಬಾಲ್ ಎಂದು ಹೇಳುತ್ತಿದ್ದಾರೆ. ಪ್ರಸ್ತುತ, ಈ ವಿಷಯ ಸಾಮಾಜಿಕ ತಾಣದಲ್ಲಿ ಚರ್ಚೆಯ ವಿಷಯವಾಗಿದೆ.
ವಾಸ್ತವವಾಗಿ, ಪಂದ್ಯದ ಸಮಯದಲ್ಲೇ ಇದರ ಬಗ್ಗೆ ತಿಳಿದುಕೊಳ್ಳಲು ಫೀಲ್ಡ್ ಅಂಪೈರ್‌ಗಳು ಥರ್ಡ್ ಅಂಪೈರ್ ಅವರನ್ನು ಸಂಪರ್ಕಿಸಿದರು. ಈ ವೇಳೆ ಎರಡ್ಮೂರು ಬಾರಿ ಪರಿಶೀಲನೆ ನಡೆಸಿದ ಥರ್ಡ್ ಅಂಪೈರ್, ಬುಮ್ರಾ ಅವರ ಶೂನ ಒಂದು ಭಾಗ ಕ್ರೀಸ್‌ನ ಹಿಂದೆಯೇ ಇದೆ ಎಂದು ಭಾವಿಸಿ ಅದನ್ನು ನೋ ಬಾಲ್ ಅಲ್ಲ ಗುಡ್ ಬಾಲ್ ಘೋಷಣೆ ಮಾಡಿದರು.
ಕ್ಯಾಮೆರಾದ ಆಯಾಮ ಇಲ್ಲಿ ಸ್ಪಷ್ಟವಾಗಿಲ್ಲ. ಆದ್ದರಿಂದ, ಅಂಪೈರ್ ಅನುಮಾನದ ಲಾಭದ ಅಡಿಯಲ್ಲೇ ಬೌಲರ್ ಪರವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಕಾಮಂಟೇಟರ್ ಮುರಳಿ ಕಾರ್ತಿಕ್ ಅವರು ನಿನ್ನೆ ಪಂದ್ಯದ ಸಮಯದಲ್ಲೇ ಹೇಳಿದರು. ಆದಾಗ್ಯೂ, ಮತ್ತೊಬ್ಬ ಕಾಮಂಟೇಟರ್ ಇದನ್ನು ವಿರೋಧಿಸಿದರು. ನಾನ್ ಸ್ಟ್ರೈಕಿಂಗ್ ಎಂಡ್‌ನಲ್ಲಿ ಕ್ಯಾಮೆರಾ ಮೂಲಕ ಅದು ನೋ ಬಾಲ್ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ ಎಂದರು.
ಆದರೆ, ಸಾಮಾಜಿಕ ಜಾಲತಾಣದಲ್ಲಿ ಈ ಎಸೆತದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಆಯಾ ದೇಶದ ಕ್ರೀಡಾಭಿಮಾನಿಗಳು ಪರ-ವಿರೋಧ ಚರ್ಚೆಯಲ್ಲಿ ತೊಡಗಿದ್ದಾರೆ. ಇದು ನೋ ಬಾಲ್ ಎಂದು ಆಫ್ರಿಕಅ ಅಭಿಮಾನಿಗಳು ಹೇಳಿದರೆ, ಇಲ್ಲ ಇದು ಒಳ್ಳೆಯ ಎಸೆತವೆಂದು ಟೀಮ್ ಇಂಡಿಯಾ ಅಭಿಮಾನಿಗಳು ವಾದಿಸುತ್ತಿದ್ದಾರೆ. ಈ ಎಸೆತದ ಬಗ್ಗೆ ನಿಮಗೆ ಏನು ಅನಿಸಿತು ಅನ್ನೋದನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ.
ಇನ್ನೂ ಈ ಪಂದ್ಯದಲ್ಲಿ ಬ್ರೆವಿಸ್ 14 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 22 ರನ್ ಗಳಿಸಿದರು. ಆದರೆ, ಆಕ್ರಮಣಕಾರಿಯಾಗಿ ಆಡಲು ಹೋಗಿ ಔಟಾದರು. ಇದು ದಕ್ಷಿಣ ಆಫ್ರಿಕಾಕ್ಕೆ ಸೋಲನ್ನು ಖಚಿತಪಡಿಸಿತು. ಈ ಮಧ್ಯೆ, ಬುಮ್ರಾ ಅವರು 11ನೇ ಓವರ್‌ನಲ್ಲಿ ಕೇಶವ್ ಮಹಾರಾಜ್ ಅವರನ್ನು ಔಟ್ ಮಾಡುವ ಮೂಲಕ ಈ ಪಂದ್ಯದಲ್ಲಿ ಎರಡನೇ ವಿಕೆಟ್ ಪಡೆದರು, (ಏಜೆನ್ಸೀಸ್).