- ನಿನ್ನೆ (ಏ.30) ನಡೆದ ಐಪಿಎಲ್ ಪಂದ್ಯದಲ್ಲಿ ಆರ್ಸಿಬಿ ಎದುರು ಗೆದ್ದು ಬೀಗಿದ ಗುಜರಾತ್ ಟೈಟನ್ಸ್
- ಜಿಟಿ ಪರ ಅದ್ಭುತ ಕ್ಯಾಚ್ ಮತ್ತು ವಿಕೆಟ್ ಪಡೆದ ಜೇಸನ್ ಹೋಲ್ಡರ್
- ರಜತ್ ಪಾಟೀದಾರ್ ಅವರ ಕ್ಯಾಚ್ ಕಾಂಟ್ರೋವರ್ಸಿಗೆ ಕಡೆಗೂ ತುಟಿಬಿಚ್ಚಿದ ಹೋಲ್ಡರ್
Controversial Catch: ನಿನ್ನೆ (ಏ.30) ಅಹಮದಾಬಾದ್ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಟೈಟನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ 19ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ 4 ವಿಕೆಟ್ಗಳಿಂದ ಜಿಟಿ ಅತ್ಯಂತ ಸುಲಭ ಗೆಲುವನ್ನು ದಾಖಲಿಸಿತು. ಮತ್ತೊಂದೆಡೆ, ಆರ್ಸಿಬಿ ನಾಯಕ ರಜತ್ ಪಾಟೀದಾರ್ ಅವರು ಬ್ಯಾಟಿಂಗ್ ಮಾಡುವಾಗ ಜೇಸನ್ ಹೋಲ್ಡರ್ ಹಿಡಿದ ಕ್ಯಾಚ್ವೊಂದು ಸದ್ಯ ಭಾರೀ ವಿವಾದಕ್ಕೆ ಗುರಿಯಾಗಿದೆ.
ಅರ್ಷದ್ ಖಾನ್ ಬೌಲಿಂಗ್ನಲ್ಲಿ ರಜತ್ ಪಾಟೀದಾರ್ ಕ್ರೀಸ್ನಲ್ಲಿದ್ದರು. ಈ ವೇಳೆ ಶಾರ್ಟ್ ಬಾಲ್ಗೆ ರಜತ್ ಪುಲ್ ಆಡಿದರು. ಮೇಲೋದ ಚೆಂಡಿಗೆ ಕೈಹಾಕಿದ ಜೇಸನ್ ಹೋಲ್ಡರ್, ಯಶಸ್ವಿಯಾಗಿ ಕ್ಯಾಚ್ ಹಿಡಿದರು. ಆದರೆ, ಅದು ನೆಲಕ್ಕೆ ತಾಕಿತು ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣಿಸಿದ್ದೇ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಒಂದು ಕ್ಯಾಚ್ನಲ್ಲಿ ಬಾಲ್ ನೆಲಕ್ಕೆ ಟಚ್ ಆಗಿದೆ ಎಂದು ಸ್ವತಃ ವಿರಾಟ್ ಕೊಹ್ಲಿ ಬೌಂಡರಿ ಲೈನ್ನಲ್ಲಿ ನಿಂತು ಅಂಪೈರ್ ಜೊತೆಗೆ ಜಗಳವಾಡಿದರು. ಈ ದೃಶ್ಯ ನೋಡ್ತಿದ್ದಂತೆ ಆರ್ಸಿಬಿ ಅಭಿಮಾನಿಗಳು ಸಿಟ್ಟಿಗೆದ್ದು, ಇದೆಂಥಾ ಮೋಸದಾಟ ಎಂದು ದೂರಿದರು.
ತಮ್ಮ ಬೌಲಿಂಗ್ ಮತ್ತು ಫೀಲ್ಡಿಂಗ್ ಮೂಲಕ ತಂಡಕ್ಕೆ ನಿರ್ಣಾಯಕ ಗೆಲುವು ತಂದುಕೊಟ್ಟ ಹೋಲ್ಡರ್, ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದ ಬಳಿಕ ವಿವಾದಕ್ಕೆ ಪ್ರತಿಕ್ರಿಯಿಸಿದರು. ಈ ಪಂದ್ಯವು ನನಗೆ ವೈಯಕ್ತಿಕವಾಗಿ ಸಾಕಷ್ಟು ತೃಪ್ತಿಯನ್ನು ತಂದುಕೊಟ್ಟಿದೆ ಮತ್ತು ನಾವು ತಂಡವಾಗಿ ಅದ್ಭುತ ಪ್ರದರ್ಶನ ನೀಡಿದೆವು. ರಜತ್ ಪಾಟೀದಾರ್ ಅವರು ಹೊಡೆದ ಬಾಲ್ ಅನ್ನು ಹಿಡಿಯುವ ಸಮಯದಲ್ಲಿ ಕಗಿಸೊ ರಬಾಡ ಅವರು ನನ್ನ ಪಕ್ಕದಲ್ಲೇ ಇದ್ದರು. ಅವರಿಗೆ ಡಿಕ್ಕಿ ಹೊಡೆಯದಂತೆ ಜಾಗರೂಕತೆ ವಹಿಸಿಯೇ ನಾನು ಕ್ಯಾಚ್ ಹಿಡಿದದ್ದು ಎಂದು ಹೇಳಿದರು.
ಕ್ಯಾಚ್ ಸಮಯದಲ್ಲಿ ನನ್ನ ಸಂಪೂರ್ಣ ಗಮನ ಚೆಂಡಿನ ಮೇಲಿತ್ತು. ರಬಾಡ ಕೂಡ ನನ್ನ ಹತ್ತಿರದಲ್ಲಿದ್ದರು. ನಾನು ನೆಲಕ್ಕೆ ಬೀಳದಂತೆ ನೋಡಿಕೊಂಡೆ. ಅಂತಿಮವಾಗಿ ಕ್ಯಾಚ್ ಅನ್ನು ಯಶಸ್ವಿಯಾಗಿ ಹಿಡಿದಿದ್ದಕ್ಕೆ ನನಗೆ ಸಂತೋಷವಿದೆ. ಈ ಕ್ಯಾಚ್ ನಮ್ಮ ತಂಡದ ಗೆಲುವಿಗೆ ತುಂಬಾ ಸಹಾಯ ಮಾಡಿತು ಎಂಬುದೇ ನನಗೆ ತೃಪ್ತಿಕರ ಎಂದು ಹೇಳಿದರು,(ಏಜೆನ್ಸೀಸ್).