ರಣಜಿ ಟ್ರೋಫಿ: ಮೊಟ್ಟಮೊದಲ ಬಾರಿ ಫೈನಲ್ಗೇರಿದ ಜಮ್ಮು-ಕಾಶ್ಮೀರ
ಕಲ್ಯಾಣಿ (ಪಶ್ಚಿಮ ಬಂಗಾಳ): ರಣಜಿ ಟ್ರೋಫಿ (Ranji Trophy) ದೇಶೀಯ ಕ್ರಿಕೆಟ್ ಟೂರ್ನಿಗೆ ಪದಾರ್ಪಣೆ ಮಾಡಿದ 67 ವರ್ಷಗಳ ಬಳಿಕ ಜಮ್ಮು-ಕಾಶ್ಮೀರ ತಂಡ (Jammu and Kashmir) ಮೊಟ್ಟಮೊದಲ ಬಾರಿ ಪ್ರಶಸ್ತಿ ಸುತ್ತಿಗೇರುವ ಮೂಲಕ ಹೊಸ ಇತಿಹಾಸ ಬರೆದಿದೆ. ಜಮ್ಮು-ಕಾಶ್ಮೀರ ತಂಡ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಹಾಗೂ ಎರಡು ಬಾರಿಯ ಚಾಂಪಿಯನ್ ಬಂಗಾಳ ತಂಡವನ್ನು 6 ವಿಕೆಟ್ಗಳಿಂದ ಮಣಿಸುವ ಮೂಲಕ ಈ ಸಾಧನೆ ಮಾಡಿದೆ. ಮೊದಲ ಇನಿಂಗ್ಸ್ನಲ್ಲಿ ಹಿನ್ನಡೆ ಕಂಡ ನಡುವೆಯೂ ಜಮ್ಮು-ಕಾಶ್ಮೀರ ಮೂರೂವರೆ ದಿನಗಳಲ್ಲೇ ಗೆಲುವು ಒಲಿಸಿಕೊಂಡಿರುವುದು ವಿಶೇಷ.
ಬಂಗಾಳ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ಬುಧವಾರ ಮುಕ್ತಾಯಗೊಂಡ ಪಂದ್ಯದಲ್ಲಿ 126 ರನ್ ಸವಾಲಿಗೆ ಪ್ರತಿಯಾಗಿ, ಜಮ್ಮು&ಕಾಶ್ಮೀರ ತಂಡ 2 ವಿಕೆಟ್ಗೆ 43 ರನ್ಗಳಿಂದ 4ನೇ ದಿನದಾಟ ಮುಂದುವರಿಸಿತು. ವಂಶಜ್ ಶರ್ಮ (43*) ಮತ್ತು ಅಬ್ದುಲ್ ಸಮದ್ (30*) ಮುರಿಯದ 5ನೇ ವಿಕೆಟ್ಗೆ 43 ಎಸೆತಗಳಲ್ಲೇ 55 ರನ್ ಜತೆಯಾಟವಾಡಿದ ನೆರವಿನಿಂದ ಜಮ್ಮು-ಕಾಶ್ಮೀರ ತಂಡ 34.4 ಓವರ್ಗಳಲ್ಲಿ 4 ವಿಕೆಟ್ಗೆ 126 ರನ್ ಗಳಿಸಿ, ಭೋಜನ ವಿರಾಮಕ್ಕೆ ಮೊದಲೇ ಜಯ ದಾಖಲಿಸಿತು. ಮೂವರು ಟೆಸ್ಟ್ ಅನುಭವಿ ವೇಗಿಗಳನ್ನು (ಶಮಿ, ಆಕಾಶ್ದೀಪ್, ಮುಕೇಶ್) ಒಳಗೊಂಡ ಬಂಗಾಳ ಬೌಲಿಂಗ್ ವಿಭಾಗವನ್ನು ಜಮ್ಮು-ಕಾಶ್ಮೀರ ದಿಟ್ಟವಾಗಿ ಎದುರಿಸಿ ನಿಂತಿತು.
ಪಂದ್ಯದಲ್ಲಿ 9 ವಿಕೆಟ್ ಕಬಳಿಸಿದ ವೇಗಿ ಅಕೀಬ್ ನಬಿ ಜಮ್ಮು-ಕಾಶ್ಮೀರ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಈ ಮುನ್ನ ಕ್ವಾರ್ಟರ್ಫೈನಲ್ನಲ್ಲಿ ಮಧ್ಯಪ್ರದೇಶಕ್ಕೆ ಸೋಲುಣಿಸಿರುವ ಮೂಲಕ ಜಮ್ಮು-ಕಾಶ್ಮೀರ ಮೊದಲ ಬಾರಿ ಉಪಾಂತ್ಯಕ್ಕೇರಿದ ಸಾಧನೆ ಮಾಡಿತ್ತು.
ಬಂಗಾಳ: 328 ಮತ್ತು 99, ಜಮ್ಮು-ಕಾಶ್ಮೀರ: 302 ಮತ್ತು 4 ವಿಕೆಟ್ಗೆ 126 (ಶುಭಂ 27, ವಂಶಜ್ 43*, ಸಮದ್ 30*, ಆಕಾಶ್ದೀಪ್ 46ಕ್ಕೆ 3). ಪಂದ್ಯಶ್ರೇಷ್ಠ: ಅಕೀಬ್ ನಬಿ.