ಒಂದೆಡೆ ಕೆಲ್ಸಕ್ಕಾಗಿ ಹುಡುಕಾಟ ಇನ್ನೊಂದೆಡೆ ವಿಕೆಟ್ ಬೇಟೆ... ಭಾರತಕ್ಕೆ ಶಾಕ್ ಕೊಟ್ಟ ರಾಜಸ್ಥಾನದ ಜೈ ಮುಂದ್ರ ಕತೆಯೇ ರೋಚಕ! Jai Moondra
- ಮೈದಾನದಲ್ಲಿ ಟೀಮ್ ಇಂಡಿಯಾ ಬೇಟೆಯಾಡಿದ ರಾಜಸ್ಥಾನದ ಜೈ ಮುಂದ್ರ
- ಓದಲು ಹೋಗಿ ಐರ್ಲೆಂಡ್ ಕ್ರಿಕೆಟ್ ಹಣೆಬರಹ ಬದಲಿಸಿದ ಭಾರತೀಯ
- ಟೀಮ್ ಇಂಡಿಯಾ ವಿರುದ್ಧ ಇತಿಹಾಸ ಬರೆದ ಜೈ ಮುಂದ್ರ ರೋಚಕ ಕಥೆ
Jai Moondra : ಜೂನ್ 28ರ ಭಾನುವಾರವೂ ಐರ್ಲೆಂಡ್ ಪಾಲಿಗೆ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ದಿನವಾಗಿ ಹೊರಹೊಮ್ಮಿದೆ. ಬೆಲ್‌ಫಾಸ್ಟ್‌ನಲ್ಲಿ ನಡೆದ ಟಿ20 ಸರಣಿಯ ಎರಡೂ ಪಂದ್ಯಗಳಲ್ಲಿ ಕ್ರಿಕೆಟ್ ಶಿಶು ಎಂದೇ ಪರಿಗಣಿಸಲ್ಪಟ್ಟಿರುವ ಐರ್ಲೆಂಡ್ ತಂಡವು, ವಿಶ್ವ ಚಾಂಪಿಯನ್ ಟೀಮ್ ಇಂಡಿಯಾಗೆ ಭಾರಿ ಆಘಾತ ನೀಡಿ 2-0 ಅಂತರದಿಂದ ಸರಣಿಯನ್ನು ಮುಡಿಗೇರಿಸಿಕೊಂಡಿದೆ. ಇಡೀ ಸರಣಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಭಾರತೀಯ ಬ್ಯಾಟರ್‌ಗಳನ್ನು ಕಟ್ಟಿಹಾಕಿದ ಐರ್ಲೆಂಡ್‌ನ ಎಡಗೈ ವೇಗದ ಬೌಲರ್ ಜೈ ಮುಂದ್ರ, ಪಂದ್ಯ ವಿಜೇತ ಪ್ರದರ್ಶನಕ್ಕಾಗಿ 'ಸರಣಿ ಶ್ರೇಷ್ಠ' ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಟೀಮ್ ಇಂಡಿಯಾವನ್ನು ಕಾಡಿದ ಜೈ ಮುಂದ್ರ ಮೂಲತಃ ಭಾರತೀಯ. ರಾಜಸ್ಥಾನದ ಟೋಂಕ್ ಮೂಲದ 29 ವರ್ಷದ ಜೈ ಮುಂದ್ರ, ಉನ್ನತ ವ್ಯಾಸಂಗ ಮತ್ತು ಉತ್ತಮ ವೃತ್ತಿಜೀವನದ ಅವಕಾಶಗಳಿಗಾಗಿ 2021ರಲ್ಲಿ ಐರ್ಲೆಂಡ್‌ಗೆ ತೆರಳಿದ್ದರು. ಅಲ್ಲಿಗೆ ಹೋದ ಕೇವಲ ಐದೇ ವರ್ಷಗಳಲ್ಲಿ, ಭಾರತ ತಂಡದ ವಿರುದ್ಧ ಐರ್ಲೆಂಡ್ ದಾಖಲಿಸಿದ ಅತ್ಯಂತ ಐತಿಹಾಸಿಕ ಹಾಗೂ ಅತಿ ದೊಡ್ಡ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಐರಿಶ್ ಕ್ರಿಕೆಟ್ ಇತಿಹಾಸದ ಸುವರ್ಣ ಪುಟಗಳಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ.
ಈ ಟಿ20 ಸರಣಿಯ ಎರಡು ಪಂದ್ಯಗಳಲ್ಲಿ ಅದ್ಭುತ ವೇಗ ಹಾಗೂ ನಿಖರತೆಯ ಬೌಲಿಂಗ್ ಪ್ರದರ್ಶಿಸಿದ ಎಡಗೈ ವೇಗಿ ಜೈ ಮುಂದ್ರ, ಒಟ್ಟು 5 ಪ್ರಮುಖ ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರು. ಅದರಲ್ಲೂ ಭಾರತದ ಸ್ಟಾರ್ ಬ್ಯಾಟರ್‌ಗಳಾದ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರಿಗೆ ಮುಂದ್ರ ದೊಡ್ಡ ಆಘಾತ ನೀಡಿದರು. ಸರಣಿಯ ಎರಡೂ ಪಂದ್ಯಗಳಲ್ಲಿ ತಾವು ಎಸೆದ ಅತ್ಯಂತ ಮೊದಲ ಎಸೆತದಲ್ಲೇ ಸಂಜು ಸ್ಯಾಮ್ಸನ್ ಅವರನ್ನು ಔಟ್ ಮಾಡಿದ ಮುಂದ್ರ, ಎರಡನೇ ಪಂದ್ಯದಲ್ಲಿ ಮತ್ತೊಬ್ಬ ಓಪನರ್ ಅಭಿಷೇಕ್ ಶರ್ಮಾ ಅವರಿಗೂ ಸಹ ತಮ್ಮ ಮೊದಲ ಎಸೆತದಲ್ಲೇ ಪೆವಿಲಿಯನ್ ಹಾದಿ ತೋರಿಸಿ ಅಬ್ಬರಿಸಿದರು.
ಕ್ರಿಕೆಟ್ ಮೈದಾನದಲ್ಲಿ ಭಾರತ ತಂಡವನ್ನೇ ಬೆಚ್ಚಿಬೀಳಿಸಿದ ಜೈ ಮುಂದ್ರ ಅವರ ವೈಯಕ್ತಿಕ ಜೀವನದ ಜರ್ನಿ ಕೂಡ ಅಷ್ಟೇ ರೋಚಕವಾಗಿದೆ. ಮೈದಾನದಲ್ಲಿ ವಿಶ್ವ ಚಾಂಪಿಯನ್ನರನ್ನೇ ಮಣಿಸಿ ಹೀರೋ ಆಗಿ ಹೊರಹೊಮ್ಮಿರುವ ಈ ಆಟಗಾರ, ನಿಜ ಜೀವನದಲ್ಲಿ ಮಾತ್ರ ಐರ್ಲೆಂಡ್‌ನ ಐಟಿ ವಲಯದಲ್ಲಿ ಒಂದು ಪೂರ್ಣಾವಧಿಯ ಕೆಲಸಕ್ಕಾಗಿ ಇಂದಿಗೂ ಹುಡುಕಾಟ ನಡೆಸುತ್ತಿದ್ದಾರೆ.
ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಜೈ ಮುಂದ್ರ ಸದ್ಯ 'ಓಪನ್ ಟು ವರ್ಕ್' ಎಂದು ಲೇಬಲ್ ಹಾಕಿಕೊಂಡಿದ್ದಾರೆ. 2022 ರಲ್ಲಿ ಐರ್ಲೆಂಡ್‌ನಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಅವರು, ನಂತರ 'ಇಂಟೆಲ್' ಕಂಪನಿಯಲ್ಲಿ ಪ್ರಾಜೆಕ್ಟ್ ಡೆವಲಪ್‌ಮೆಂಟ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ, ಜೂನ್ 2025ರಲ್ಲಿ ಆ ಕೆಲಸ ಬಿಟ್ಟಿದ್ದ ಮುಂದ್ರ, ಕಳೆದ ಒಂದು ವರ್ಷದಿಂದ ಹೊಸ ಉದ್ಯೋಗದ ಹುಡುಕಾಟದಲ್ಲಿದ್ದಾರೆ.
ಕ್ರಿಕೆಟ್ ವೃತ್ತಿಜೀವನದ ಜತೆಗೆ ಐರ್ಲೆಂಡ್ ಅಥವಾ ಯುರೋಪ್‌ನಾದ್ಯಂತ ಉದ್ಯೋಗದ ಅವಕಾಶಗಳನ್ನು ಹುಡುಕುತ್ತಿರುವ ಜೈ ಮುಂದ್ರ ಅವರ ಈ ಸಾಧನೆ, ಈಗ ಎಲ್ಲರಿಗೂ ಸ್ಪೂರ್ತಿಯಾಗಿದೆ, (ಏಜೆನ್ಸೀಸ್).