IPL 2026  
ಕ್ರಿಕೆಟ್

IPL 2026: ಪತ್ನಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಅರ್ಪಿಸಿದ ಜಡ್ಡು: 'ಶಿಕ್ಷಣ ಸಚಿವೆ'ಯ ಭವಿಷ್ಯವಾಣಿ ನಿಜವಾಯಿತು!

ನವದೆಹಲಿ: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ(IPL 2026) ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಜಯಭೇರಿ ಬಾರಿಸಿದ್ದು, ಆಲ್‌ರೌಂಡ್ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ ಪಂದ್ಯದ ಗೆಲುವಿನ ಶಿಲ್ಪಿ ಎನಿಸಿಕೊಂಡರು. ಸೋಲುಗಳಿಂದ ಕಂಗೆಟ್ಟಿದ್ದ ತಂಡಕ್ಕೆ ಆಸರೆಯಾದ ಜಡೇಜಾ, ಪಂದ್ಯದ ನಂತರ ತಮಗೆ ಒಲಿದ ‘ಪಂದ್ಯಶ್ರೇಷ್ಠ’ ಪ್ರಶಸ್ತಿಯನ್ನು ತಮ್ಮ ಪತ್ನಿ ಹಾಗೂ ಗುಜರಾತ್‌ನ ಶಿಕ್ಷಣ ಸಚಿವೆ ರಿವಾಬಾ ಜಡೇಜಾ ಅವರಿಗೆ ಅರ್ಪಿಸುವ ಮೂಲಕ ಗಮನ ಸೆಳೆದಿದ್ದಾರೆ.

ಸಂಕಷ್ಟದಲ್ಲಿ ತಂಡಕ್ಕೆ ಆಸರೆಯಾದ ಜಡ್ಡು!

ಒಂದು ಹಂತದಲ್ಲಿ 77 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ರಾಜಸ್ಥಾನ್ ರಾಯಲ್ಸ್ ತತ್ತರಿಸಿತ್ತು. ಈ ವೇಳೆ ಅಬ್ಬರಿಸಿದ ಜಡೇಜಾ ಅಜೇಯ 43 ರನ್ ಬಾರಿಸಿ ತಂಡ ಗೌರವಾರ್ಧಕ ಮೊತ್ತ ತಲುಪಲು ಕಾರಣರಾದರು. ಇಂಪ್ಯಾಕ್ಟ್ ಪ್ಲೇಯರ್ ಶುಭಂ ದುಬೆ (19 ರನ್) ಜೊತೆಗೂಡಿ 49 ರನ್‌ಗಳ ಅಮೂಲ್ಯ ಜೊತೆಯಾಟವಾಡಿದ ಜಡೇಜಾ, ತಂಡದ ಮೊತ್ತವನ್ನು 159ಕ್ಕೆ ತಲುಪಿಸಿದರು.

ಬೌಲಿಂಗ್‌ನಲ್ಲೂ ಮಿಂಚು

ಲಕ್ನೋ ತಂಡದ ಬ್ಯಾಟಿಂಗ್ ವೇಳೆ ಅಪಾಯಕಾರಿಯಾಗಿದ್ದ ನಿಕೋಲಸ್ ಪೂರನ್ ವಿಕೆಟ್ ಪಡೆಯುವ ಮೂಲಕ ಜಡೇಜಾ ಎದುರಾಳಿಗಳ ಅಬ್ಬರಕ್ಕೆ ಬ್ರೇಕ್ ಹಾಕಿದರು. ಆರ್ಕರ್, ನಾಂದ್ರೆ ಬರ್ಗರ್ ಹಾಗೂ ಬ್ರಿಜೇಶ್ ಶರ್ಮಾ ಅವರ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ನಲುಗಿದ ಲಕ್ನೋ 119 ರನ್‌ಗಳಿಗೆ ಆಲೌಟ್ ಆಗುವ ಮೂಲಕ 40 ರನ್‌ಗಳ ಸೋಲೊಪ್ಪಿಕೊಂಡಿತು.

ಪತ್ನಿಯ ಭವಿಷ್ಯವಾಣಿ

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜಡೇಜಾ, "ಈ ಪ್ರಶಸ್ತಿಯನ್ನು ನಾನು ಗುಜರಾತ್‌ನ ಶಿಕ್ಷಣ ಸಚಿವರಿಗೆ (ಪತ್ನಿ ರಿವಾಬಾ) ಅರ್ಪಿಸುತ್ತೇನೆ. ಪಂದ್ಯದ ಹಿಂದಿನ ದಿನವೇ ಅವರು, ನೀನು ನಾಳೆ ಅದ್ಭುತವಾಗಿ ಆಡುತ್ತೀಯ ಮತ್ತು ತಂಡಕ್ಕೆ ಗೆಲುವು ತಂದುಕೊಡುತ್ತೀಯ ಎಂದು ಹೇಳಿದ್ದರು. ಅವರ ಮಾತು ನಿಜವಾಗಿದೆ. ಪಿಚ್ ಬ್ಯಾಟಿಂಗ್‌ಗೆ ಕಷ್ಟವಿತ್ತು, ಹಾಗಾಗಿ ದೀರ್ಘಕಾಲ ಕ್ರೀಸ್‌ನಲ್ಲಿ ನಿಲ್ಲಲು ಬಯಸಿದ್ದೆ" ಎಂದು ಭಾವನಾತ್ಮಕವಾಗಿ ನುಡಿದರು. ಈ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ,(ಏಜೆನ್ಸೀಸ್​).