ಡೆಲ್ಲಿ ತಂಡದ ಕ್ಷೀಣ ಆಸೆಯನ್ನು ಜೀವಂತವಿಟ್ಟ ಮಿಚೆಲ್ ಸ್ಟಾರ್ಕ್ಗೆ ನಾಯಕ ಅಕ್ಷರ್ ಪಟೇಲ್ ಮೆಚ್ಚುಗೆ
ನವದೆಹಲಿ: ರಾಜಸ್ಥಾನ ರಾಯಲ್ಸ್ ವಿರುದ್ಧ 5 ವಿಕೆಟ್ಗಳಿಂದ ಗೆಲುವು ಸಾಧಿಸಿ ಪ್ಲೇಆಫ್ಗೇರುವ ತನ್ನ ಕ್ಷೀಣ ಆಸೆಯನ್ನು ಜೀವಂತವಿಟ್ಟುಕೊಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ (Axar Patel), ಬೌಲಿಂಗ್ ವಿಭಾಗವನ್ನು, ಅದರಲ್ಲೂ ಪ್ರಮುಖವಾಗಿ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ (Mitchell Starc) ಅವರನ್ನು ಕೊಂಡಾಡಿದ್ದಾರೆ.
"ಮಧ್ಯಮ ಓವರ್ಗಳಲ್ಲಿ ನಾವು ಅತ್ಯುತ್ತಮ ದಾಳಿ ಸಂಟಿಸುವ ಮೂಲಕ ಪಂದ್ಯಕ್ಕೆ ಮರಳಿದೆವು. ಕೊನೇ 6 ಓವರ್ಗಳ ಬೌಲಿಂಗ್ ಕ್ಲಾಸ್ ಆಗಿತ್ತು. ಸ್ಟಾರ್ಕ್ "ಯುವ' ಆಟಗಾರರಂತೆ ಬೌಲಿಂಗ್ ಮಾಡುತ್ತಿದ್ದಾರೆ' ಎಂದು ಅಕ್ಷರ್ ಪಂದ್ಯದ ಬಳಿಕ ಹೇಳಿದ್ದಾರೆ.
14 ಓವರ್ಗಳಲ್ಲಿ 2 ವಿಕೆಟ್ಗೆ 160 ರನ್ ಗಳಿಸಿ ಸುಸ್ಥಿತಿಯಲ್ಲಿದ್ದ ರಾಜಸ್ಥಾನ ಬಳಿಕ, ಮಿಚೆಲ್ ಸ್ಟಾರ್ಕ್ (40ಕ್ಕೆ 4) ದಾಳಿಗೆ ಕುಸಿದು 8 ವಿಕೆಟ್ಗೆ 193 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಪ್ರತಿಯಾಗಿ ಡೆಲ್ಲಿ ಕನ್ನಡಿಗ ಕೆಎಲ್ ರಾಹುಲ್ (56) ಮತ್ತು ಅಭಿಷೇಕ್ ಪೊರೆಲ್ (51) ಅರ್ಧಶತಕದಾಟ ಮತ್ತು ಮೊದಲ ವಿಕೆಟ್ಗೆ 61 ಎಸೆತಗಳಲ್ಲಿ 105 ರನ್ ಕೂಡಿಹಾಕಿದ ಬಲದಿಂದ ದಿಟ್ಟವಾಗಿ ಚೇಸಿಂಗ್ನತ್ತ ಮುನ್ನಡೆಯಿತು. ಬಳಿಕ ಸಾಹಿಲ್ ಪರಾಖ್ (9), ಟ್ರಿಸ್ಟಾನ್ ಸ್ಟಬ್ಸ್ (4), ಡೇವಿಡ್ ಮಿಲ್ಲರ್ (9) ಬೇಗನೆ ಔಟಾದರೂ, ಅಕ್ಷರ್ ಪಟೇಲ್ (34*) ಮತ್ತು ಇಂಪ್ಯಾಕ್ಟ್ ಪ್ಲೇಯರ್ ಆಶುತೋಷ್ ಶರ್ಮ (18*) ದಿಟ್ಟ ಜತೆಯಾಟದಿಂದ ಡೆಲ್ಲಿ 19.2 ಓವರ್ಗಳಲ್ಲಿ 5 ವಿಕೆಟ್ಗೆ 197 ರನ್ ಗಳಿಸಿ ಗೆಲುವಿನ ದಡ ಸೇರಿತು.
*ಟೂರ್ನಿಯಲ್ಲಿ 500 ರನ್ ಪೂರೈಸಿದ್ದು ಖುಷಿ ನೀಡಿದೆ. ಆದರೆ, ನಾವು ಇನ್ನಷ್ಟು ಪಂದ್ಯಗಳನ್ನು ಗೆದ್ದಿದ್ದರೆ, ಇದು ಇನ್ನಷ್ಟು ವಿಶೇಷವೆನಿಸುತಿತ್ತು.
| ಕೆಎಲ್ ರಾಹುಲ್, ಡೆಲ್ಲಿ ಬ್ಯಾಟರ್
*8: ಕೆಎಲ್ ರಾಹುಲ್ ಐಪಿಎಲ್ ಆವೃತ್ತಿಯೊಂದರಲ್ಲಿ ಸತತ 3ನೇ ಬಾರಿ ಮತ್ತು ಒಟ್ಟಾರೆ 8ನೇ ಬಾರಿ 500 ಪ್ಲಸ್ ರನ್ ಗಳಿಸಿದರು.
*4: ಯಶಸ್ವಿ ಜೈಸ್ವಾಲ್ ಟಿ20 ಕ್ರಿಕೆಟ್ನಲ್ಲಿ 4 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು.
*5: ಡೆಲ್ಲಿ ತಂಡ ತವರಿನ ಅಂಗಣದಲ್ಲಿ ಸತತ 5 ಸೋಲಿನ ಬಳಿಕ ಗೆಲುವು ದಾಖಲಿಸಿತು.
*ನಮಗೆ ಸಿಕ್ಕ ಉತ್ತಮ ಆರಂಭದ ಬಳಿಕ 210ಕ್ಕೂ ಅಧಿಕ ರನ್ ಗಳಿಸಬಹುದಾಗಿತ್ತು. ನಮ್ಮ ಬೌಲಿಂಗ್ ಕೂಡ ಇನ್ನಷ್ಟು ಉತ್ತಮವಾಗಿರಬೇಕಿತ್ತು. ನಾವಿನ್ನು ಪ್ಲೇಆಫ್ಗೆ ಏರದಿದ್ದರೆ ಅದು ನಮ್ಮದೇ ತಪ್ಪು ಆಗಿರಲಿದೆ.
| ರಿಯಾನ್ ಪರಾಗ್, ಆರ್ಆರ್ ನಾಯಕ