ಟೀಮ್​ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್  
ಕ್ರಿಕೆಟ್

ನಿಮ್ಮ ಕೆಲಸ ನೀವು ಮಾಡಿ... ಐಪಿಎಲ್​ ಫ್ರಾಂಚೈಸಿ ಓನರ್​ ವಿರುದ್ಧ ಗಂಭೀರ್​ ಕೆಂಡಾಮಂಡಲ! Gautam Gambhir

ಪ್ರಮುಖ ಮುಖ್ಯಾಂಶಗಳು

  • ಸುದ್ದಿಗೋಷ್ಠಿಯಲ್ಲಿ ತಮ್ಮ ದುಃಖ ಮತ್ತು ಕೋಪ ಎರಡನ್ನೂ ತೋಡಿಕೊಂಡ ಗೌತಮ್ ಗಂಭೀರ್
  • ಟೆಸ್ಟ್​ನಲ್ಲಿ ಶುಭಮಾನ್​ ಗಿಲ್​ ಆಡದಿರುವ ಬಗ್ಗೆ ಯಾರೂ ಮಾತನಾಡಲಿಲ್ಲ ಎಂದು ಗಂಭೀರ್​ ಬೇಸರ
  • ತಮ್ಮ ವಿರುದ್ಧದ ಟೀಕೆಗಳಿಗೆ ಖಡಕ್​ ತಿರುಗೇಟು ನೀಡಿದ ಟೀಮ್​ ಇಂಡಿಯಾ ಮುಖ್ಯ ಕೋಚ್​
  • ಯಾರೇ ಆಗಲಿ ಅವರು ತಮ್ಮ ವ್ಯಾಪ್ತಿಯಲ್ಲಿದ್ದರೆ ತುಂಬಾನೇ ಒಳ್ಳೆಯದು ಎಂದ ಗೌತಿ
ನವದೆಹಲಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ 2-1 ಅಂತರದಿಂದ ಗೆದ್ದಿದ್ದು ಖುಷಿಯಾದರೆ, ಅದೇ ತಂಡದ ವಿರುದ್ಧ ಏಕದಿನ ಸರಣಿಗೂ ಮುನ್ನ ನಡೆದ ಟೆಸ್ಟ್ ಸರಣಿಯಲ್ಲಿ ವೈಟ್‌ವಾಶ್ ಆಗಿ ಮುಖಭಂಗ ಅನುಭವಿಸಿದ ನೋವು ಇನ್ನೂ ಹಾಗೇ ಇದೆ. ಕಳೆದ ಕೆಲವು ವರ್ಷಗಳಿಂದ ಟೆಸ್ಟ್‌ ಸರಣಿಗಳಲ್ಲಿ ಟೀಮ್​ ಇಂಡಿಯಾ ವೈಟ್‌ವಾಶ್‌ ಆಗುತ್ತಿರುವುದರಿಂದ ಮುಖ್ಯ ಕೋಚ್ ಗೌತಮ್ ಗಂಭೀರ್ ( Gautam Gambhir ) ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.
ವೈಟ್​ ಬಾಲ್​ಗಿಂತ ರೆಡ್ ಬಾಲ್ ಕೋಚ್ ಆಗಿ ಅವರ ಸಾಮರ್ಥ್ಯವನ್ನು ಕೆಲವರು ಪ್ರಶ್ನೆ ಮಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ಮೊದಲ ಟೆಸ್ಟ್‌ ಪಂದ್ಯದಲ್ಲಿ ಗಂಭೀರ್ ಕಾರಣದಿಂದಲೇ ಟೀಮ್​ ಇಂಡಿಯಾ ಸೋಲುಂಡಿತು ಮತ್ತು ಅವರನ್ನು ಕೋಚ್​ ಹುದ್ದೆಯಿಂದ ತೆಗೆದುಹಾಕಬೇಕು ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದರು. ಇದೀಗ ಏಕದಿನ ಸರಣಿಯನ್ನು ಗೆದ್ದಿರುವುದು ಗಂಭೀರ್‌ಗೆ ಸ್ವಲ್ಪ ಸಮಾಧಾನ ತಂದಿದೆ.
ಶನಿವಾರ ವಿಶಾಖಪಟ್ಟಣದಲ್ಲಿ ನಡೆದ ಮೂರನೇ ಏಕದಿನ ಪಂದ್ಯವನ್ನು ಗೆದ್ದು, ಸರಣಿಯನ್ನು ಜಯಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೌತಮ್ ಗಂಭೀರ್, ತಮ್ಮ ದುಃಖ ಮತ್ತು ಕೋಪ ಎರಡನ್ನೂ ತೋಡಿಕೊಂಡರು. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನಿಯಮಿತ ನಾಯಕ ಶುಭಮಾನ್ ಗಿಲ್, ಎರಡೂ ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಲಿಲ್ಲ. ಈ ಪಂದ್ಯದಲ್ಲಿ ಗಾಯಗೊಂಡ ಗಿಲ್, ಕ್ರೀಡಾಂಗಣದಿಂದ ಹೊರಗುಳಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ಈ ಅಂಶದ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ಗಂಭೀರ್​ ಬೇಸರ ಹೊರ ಹಾಕಿದ್ದಾರೆ.
ಫಲಿತಾಂಶಗಳು ನಿರೀಕ್ಷೆಯಂತೆ ಬರದಿದ್ದಾಗ, ಹೊರಗೆ ಸಾಕಷ್ಟು ಚರ್ಚೆ ನಡೆಯುತ್ತದೆ ಅನ್ನೋದು ನನಗೆ ಗೊತ್ತಿದೆ. ಆದಾಗ್ಯೂ, ನನ್ನನ್ನು ಆಶ್ಚರ್ಯಗೊಳಿಸುವ ಸಂಗತಿ ಏನೆಂದರೆ, ಮೊದಲ ಟೆಸ್ಟ್‌ನಲ್ಲಿ, ಪಂದ್ಯದ ಎರಡೂ ಇನ್ನಿಂಗ್ಸ್‌ನಲ್ಲಿ ನಾಯಕ ಶುಭಮಾನ್ ಗಿಲ್ ಅವರ ಬ್ಯಾಟಿಂಗ್ ಸೇವೆಯನ್ನು ನಾವು ಕಳೆದುಕೊಂಡೆವು ಮತ್ತು ನಾವು ಸೋತಿದ್ದಕ್ಕೆ ಇದು ಕೂಡ ಕಾರಣ. ಆದರೆ, ಯಾರೊಬ್ಬರು ಕೂಡ ಈ ವಿಷಯದ ಬಗ್ಗೆ ಮಾತನಾಡಲಿಲ್ಲ, ಯಾವುದೇ ಮಾಧ್ಯಮಗಳು ಕೂಡ ಇದರ ಬಗ್ಗೆ ಬರೆಯಲಿಲ್ಲ ಎಂದು ಗಂಭೀರ್​ ಬೇಸರ ಹೊರಹಾಕಿದರು.
ಸುದ್ದಿಗೋಷ್ಠಿಗಳಲ್ಲಿ ನೆಪ ಹೇಳುವುದು ನನಗೆ ಇಷ್ಟವಿಲ್ಲ. ಆದರೆ, ಜಗತ್ತಿಗೆ ಸತ್ಯಗಳನ್ನು ಹೇಳಬೇಕಿದೆ. ನಾಯಕ ಪಂದ್ಯಕ್ಕೆ ಲಭ್ಯವಿಲ್ಲದಿದ್ದಾಗ ಈ ರೀತಿಯ ಫಲಿತಾಂಶಗಳು ಸಂಭವಿಸುತ್ತವೆ. ಏಕೆಂದರೆ, ಗಿಲ್ ಅವರು ಸೂಪರ್ ಫಾರ್ಮ್‌ನಲ್ಲಿದ್ದಾರೆ. ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಗೂ ಮುನ್ನ ಕಳೆದ ಏಳು ಟೆಸ್ಟ್‌ಗಳಲ್ಲಿ ಗಿಲ್​ ಅವರು ಸುಮಾರು ಸಾವಿರ ರನ್ ಗಳಿಸಿದ್ದರು. ಅಂತಹ ಆಟಗಾರನ ಬ್ಯಾಟಿಂಗ್ ಸೇವೆಯನ್ನು ನಾವು ಕಳೆದುಕೊಂಡಿದ್ದೇವೆ. ಯಾರೂ ಇದರ ಬಗ್ಗೆ ಮಾತನಾಡುವುದಿಲ್ಲ. ಎಲ್ಲರೂ ಪಿಚ್ ಬಗ್ಗೆಯೇ ಮಾತನಾಡುತ್ತಾರೆ. ಕ್ರಿಕೆಟ್ ಬಗ್ಗೆ ಹೆಚ್ಚು ತಿಳಿದಿಲ್ಲದವರೂ ಸಹ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಐಪಿಎಲ್ ಫ್ರಾಂಚೈಸಿಯ ಮಾಲೀಕರು ಕೋಚಿಂಗ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ವಿಭಜಿಸುವ ಬಗ್ಗೆ ಮಾತನಾಡಿದ್ದಾರೆ. ಯಾರೇ ಆಗಲಿ ಅವರು ತಮ್ಮ ವ್ಯಾಪ್ತಿಯಲ್ಲಿರುವುದು ತುಂಬಾ ಒಳ್ಳೆಯದು ಎನ್ನುವ ಮೂಲಕ ಟೀಕಾಕಾರರಿಗೆ ತಿರುಗೇಟು ನೀಡಿದರು.
ಎರಡನೇ ಟೆಸ್ಟ್ ಪಂದ್ಯವನ್ನು ಟೀಮ್ ಇಂಡಿಯಾ ಸೋತ ನಂತರ, ಡೆಲ್ಲಿ ಕ್ಯಾಪಿಟಲ್ಸ್ ಸಹ-ಮಾಲೀಕ ಪಾರ್ಥ್ ಜಿಂದಾಲ್ ಅವರು ಭಾರತದ ಕೋಚಿಂಗ್ ಸಿಬ್ಬಂದಿಯನ್ನು ಟೀಕಿಸಿದ್ದರು. ಹತ್ತಿರವೂ ಬರಲಿಲ್ಲ. ತವರಿನಲ್ಲಿ ಎಂತಹ ಹೀನಾಯ ಸೋಲು! ನಮ್ಮ ಟೆಸ್ಟ್ ತಂಡ ತವರಿನಲ್ಲಿ ಇಷ್ಟು ದುರ್ಬಲವಾಗಿರುವುದನ್ನು ನಾನು ಹಿಂದೆಂದೂ ನೋಡಿಲ್ಲ! ರೆಡ್ ಬಾಲ್ ಸ್ಪೆಷಲಿಸ್ಟ್‌ಗಳನ್ನು ಆಯ್ಕೆ ಮಾಡದಿದ್ದಾಗ ಈ ರೀತಿ ಆಗುತ್ತದೆ. ಟೆಸ್ಟ್ ಕ್ರಿಕೆಟ್‌ಗಾಗಿ ಭಾರತವು ಸ್ಪೆಷಲಿಸ್ಟ್ ರೆಡ್ ಬಾಲ್ ಕೋಚ್‌ ಬದಲಿಸುವ ಸಮಯವಿದು ಎಂದು ಟ್ವೀಟ್​ ಮಾಡುವ ಮೂಲಕ ಜಿಂದಾಲ್​ ಅವರು ಬಿಸಿಸಿಐಗೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಗಂಭೀರ್ ಅವರು ಇದೀಗ ತಿರುಗೇಟು ನೀಡಿದ್ದಾರೆ ಎನ್ನಲಾಗಿದೆ, (ಏಜೆನ್ಸೀಸ್​).