ಮೊಮ್ಮಗನ ಲವ್ ರಹಸ್ಯ ಬಿಚ್ಚಿಟ್ಟ ತಾತನ ವಿರುದ್ಧ ಇಶಾನ್ ಕಿಶನ್ ತಾಯಿ ಗರಂ ( Ishan Kishan )
- ಜಾಲತಾಣದಲ್ಲಿ ಹರಿದಾಡುತ್ತಿದೆ ಟೀಮ್ ಇಂಡಿಯಾ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ಇಶಾನ್ ಕಿಶಾನ್ ಡೇಟಿಂಗ್ ಸುದ್ದಿ
- ಮಾಡೆಲ್ ಅದಿತಿ ಹುಂಡಿಯಾ ಜತೆಗಿನ ಸಂಬಂಧದ ಬಗ್ಗೆ ಇಶಾನ್ ಅವರ ಅಜ್ಜ ನೀಡಿದ ಹೇಳಿಕೆ ವೈರಲ್
- ಇಶಾನ್ ಮತ್ತು ಅದಿತಿ ಮದುವೆ ಆಗಲಿದ್ದಾರೆ ಎಂಬ ವದಂತಿ ಕೂಡ ಈಗಾಗಲೇ ಹುಟ್ಟಿಕೊಂಡಿದೆ
Ishan Kishan : ಟೀಮ್ ಇಂಡಿಯಾ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ಇಶಾನ್ ಕಿಶನ್, ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಲೀಗ್ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್ ಆಡಿದರು. ಎಡಗೈ ಬ್ಯಾಟರ್ ಇಶಾನ್, ಕೇವಲ 40 ಎಸೆತಗಳಲ್ಲಿ 77 ರನ್ ಗಳಿಸುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಹೀಗಾಗಿ, ಕ್ರೀಡಾ ಜಗತ್ತು ಇಶಾನ್ ಮೇಲೆ ಪ್ರಶಂಸೆಯ ಸುರಿಮಳೆಗೈಯುತ್ತಿದೆ.
ಇಶಾನ್ ಅವರ ಅಮೋಘ ಪ್ರದರ್ಶನಕ್ಕೆ ಅವರ ಕುಟುಂಬ ಸದಸ್ಯರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಇಶಾನ್ ಅವರು ಪ್ರಸ್ತುತ ಕ್ರಿಕೆಟ್ ಮೇಲೆ ತಮ್ಮ ಸಂಪೂರ್ಣ ಗಮನ ಹರಿಸಿದ್ದರು ಕೂಡ ಮಾಡೆಲ್ ಅದಿತಿ ಹುಂಡಿಯಾ ಜತೆಗಿನ ಸಂಬಂಧದ ಬಗ್ಗೆ ಇಶಾನ್ ಅವರ ಅಜ್ಜ ಮಾಡಿರುವ ಕಾಮೆಂಟ್‌ಗಳು ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿವೆ. ಇಶಾನ್ ಮತ್ತು ಅದಿತಿ ಮದುವೆ ಆಗಲಿದ್ದಾರೆ ಎಂಬ ವದಂತಿ ಕೂಡ ಈಗಾಗಲೇ ಹುಟ್ಟಿಕೊಂಡಿದೆ.
ಇಶಾನ್ ಅವರ ಅಜ್ಜ ಮಾಡಿದ ಕಾಮೆಂಟ್ಗಳಿಗೆ, ತಾಯಿ ಸುಚಿತ್ರಾ ದೇವಿ ಪ್ರತಿಕ್ರಿಯಿಸಿದ್ದು, ಇವೆಲ್ಲವೂ ಕೇವಲ ವದಂತಿಗಳಷ್ಟೇ ಎಂದಿದ್ದಾರೆ. ಇಶಾನ್ ತನ್ನ ಆಟದ ಮೇಲೆ ಸಂಪೂರ್ಣವಾಗಿ ಗಮನಹರಿಸುವ ಸಮಯ ಬಂದಿದೆ ಎಂದಿದ್ದಾರೆ.
ಇದು ಮದುವೆಯ ಬಗ್ಗೆ ಮಾತನಾಡುವ ಸಮಯವಲ್ಲ. ಆತನಿಗೆ ಕ್ರಿಕೆಟ್ ಆಡುವ ಸಮಯ ಬಂದಿದೆ. ಆತನ ಮದುವೆಯ ಬಗ್ಗೆ ಮಾತನಾಡುವಷ್ಟು ವಯಸ್ಸು ಆತನಿಗೆ ಆಗಿಲ್ಲ. ಅವರ ಅಜ್ಜನಿಗೆ ವಯಸ್ಸಾಗಿದೆ. ವೃದ್ಧರು ಯಾವಾಗಲೂ ಸ್ವಲ್ಪ ಉತ್ಸುಕರಾಗಿರುತ್ತಾರೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಏನಾದರೂ ಬರುತ್ತಲೇ ಇರುತ್ತದೆ. ಅದನ್ನು ನೋಡಿ, ಇಶಾನ್ ಅವರ ಅಜ್ಜ ಏನೇನೋ ಮಾತನಾಡುತ್ತಿದ್ದಾರೆ. ಆದರೆ, ಇದೆಲ್ಲ ಸತ್ಯವಲ್ಲ ಎಂದು ಐಎಎನ್‌ಎಸ್ ಸುದ್ದಿ ಸಂಸ್ಥೆಗೆ ಸುಚಿತ್ರಾ ಪ್ರತಿಕ್ರಿಯೆ ನೀಡಿದ್ದಾರೆ.
ಇಶಾನ್ ಕಿಶನ್ ಅವರ ಅಜ್ಜ ಅನುರಾಗ್ ಪಾಂಡೆ ಅವರು ತಮ್ಮ ಮೊಮ್ಮಗ, ಮಾಡೆಲ್ ಅದಿತಿ ಹುಂಡಿಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾನೆ ಎಂದು ದೃಢಪಡಿಸಿದರು ಮತ್ತು ಅವರಿಬ್ಬರು ಮದುವೆಯಾಗಲು ಬಯಸಿದರೆ ನನಗೇನೂ ಸಮಸ್ಯೆ ಇಲ್ಲ ಎಂದರು. ಅಲ್ಲದೆ, ಇಶಾನ್ ಯಾರನ್ನು ಮದುವೆಯಾಗಲು ಬಯಸುತ್ತಾರೋ ಅದನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಅದಿತಿ ಅವನ ಸ್ನೇಹಿತೆ. ಅವಳು ಒಬ್ಬ ಮಾಡೆಲ್. ನಿಮ್ಮ ಮಕ್ಕಳು ಸಂತೋಷಪಡುವ ಯಾವುದನ್ನಾದರೂ ನೀವು ಸ್ವೀಕರಿಸಬೇಕು ಎಂದು ಅನುರಾಗ್ ಪಾಂಡೆ ಅವರು ANIಗೆ ತಿಳಿಸಿದರು.
ಅಂದಹಾಗೆ, ಅದಿತಿ ಹುಂಡಿಯಾ ಜೈಪುರ ಮೂಲದ ಓರ್ವ ಪ್ರಸಿದ್ಧ ಭಾರತೀಯ ಮಾಡೆಲ್ ಮತ್ತು ಫ್ಯಾಷನ್ ಇನ್‌ಫ್ಲುಯೆನ್ಸರ್ ಆಗಿದ್ದಾರೆ. ಅದಿತಿ ಅವರು 2017ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಫೈನಲಿಸ್ಟ್ ಆಗಿದ್ದರು ಮತ್ತು 2018ರಲ್ಲಿ ಮಿಸ್ ದಿವಾ ಸುಪ್ರಾನ್ಯಾಷನಲ್ ಪ್ರಶಸ್ತಿ ಗೆದ್ದಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಸುಮಾರು 2.8 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಅದಿತಿ, ತಮ್ಮದೇ ಆದ ಫ್ಯಾಷನ್ ಲೇಬಲ್ 'ಲೇಬಲ್ ಅದಿತಿ ಹುಂಡಿಯಾ' ನಡೆಸುತ್ತಿದ್ದಾರೆ ಹಾಗೂ ಟೀಮ್ ಇಂಡಿಯಾ ಕ್ರಿಕೆಟಿಗ ಇಶಾನ್ ಕಿಶನ್ ಅವರ ಗರ್ಲ್‌ಫ್ರೆಂಡ್ ಎಂಬುದು ಇತ್ತೀಚೆಗೆ ಅವರ ತಾತ ಅಧಿಕೃತವಾಗಿ ಖಚಿತಪಡಿಸಿದ್ದಾರೆ, (ಏಜೆನ್ಸೀಸ್).