ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಇಶಾನ್ ಕಿಶನ್ (ಚಿತ್ರ Instagram)
- ಯುಜ್ವೇಂದ್ರ ಚಾಹಲ್ ಬ್ಯಾಟ್ಸ್ ಮನ್ ಪಾಲಿಗೆ ಸಿಂಹಸ್ವಪ್ನವಿದ್ದಂತೆ; ಇಶಾನ್ ಕಿಶನ್
- ಇತ್ತ ವೇಗಿ ಜಸ್ಪ್ರಿತ್ ಬುಮ್ರಾರನ್ನು ಎದುರಿಸುವುದೇ ಸವಾಲಿನ ಕೆಲಸ
- ಜಸ್ಪ್ರಿತ್ ಬುಮ್ರಾ ನೆಟ್ಸ್‌ನಲ್ಲಿ ಕೇವಲ ಅಭ್ಯಾಸಕ್ಕಾಗಿ ಬೌಲಿಂಗ್ ಮಾಡುವುದಿಲ್ಲ
- ಎದುರಾಳಿ ಯಾರೇ ಆಗಿರಲಿ, ಬುಮ್ರಾ ಬ್ಯಾಟರ್‌ಗಳ ಮೇಲೆ ಸ್ವಲ್ಪವೂ ಕರುಣೆ ತೋರಿಸುವುದಿಲ್ಲ
Ishan Kishan: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಇಶಾನ್ ಕಿಶನ್ ಅವರು ನೆಟ್ಸ್‌ನಲ್ಲಿ ತಾವು ಎದುರಿಸುವ ಅತಿದೊಡ್ಡ ಸವಾಲುಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅವರ ಪ್ರಕಾರ, ಯುಜ್ವೇಂದ್ರ ಚಾಹಲ್ ಬ್ಯಾಟ್ಸ್ ಮನ್ ಪಾಲಿಗೆ ಸಿಂಹಸ್ವಪ್ನವಾದರೆ, ಇತ್ತ ವೇಗಿ ಜಸ್ಪ್ರಿತ್ ಬುಮ್ರಾರನ್ನು ಎದುರಿಸುವುದೇ ಸವಾಲಿನ ಕೆಲಸ ಎಂದು ಹೇಳಿದ್ದಾರೆ.
ಇತ್ತೀಚಿನ ಸಂದರ್ಶವೊಂದರಲ್ಲಿ ಮಾತನಾಡಿದ ಇಶಾನ್, ಅನುಭವಿ ವೇಗಿ ಜಸ್ಪ್ರಿತ್ ಬುಮ್ರಾ ನೆಟ್ಸ್‌ನಲ್ಲಿ ಕೇವಲ ಅಭ್ಯಾಸಕ್ಕಾಗಿ ಬೌಲಿಂಗ್ ಮಾಡುವುದಿಲ್ಲ. ಪರಿಸ್ಥಿತಿಗಳು ಹೇಗೇ ಇರಲಿ ಅಥವಾ ಎದುರಾಳಿ ಯಾರೇ ಆಗಿರಲಿ, ಬುಮ್ರಾ ಬ್ಯಾಟರ್‌ಗಳ ಮೇಲೆ ಸ್ವಲ್ಪವೂ ಕರುಣೆ ತೋರಿಸುವುದಿಲ್ಲ. ಅದೇ ರೀತಿ ಚೆಂಡನ್ನು ಬ್ಯಾಟ್ನ ಮಧ್ಯುಭಾಗದಿಂದ ಹೊಡೆದರೆ, ಬೌಂಡರಿ ಬಾರಿಸದೇ ಸುಮ್ಮನೆ ಕೂರುವುದಿಲ್ಲ ಎಂದು ನೆನಪಿಸಿಕೊಂಡರು.
ಸ್ಪಿನ್ನರ್‌ಗಳಲ್ಲಿ, ಯುಜ್ವೇಂದ್ರ ಚಾಹಲ್ (ಯುಜಿ ಭಾಯ್) ಅವರ ಎಸೆತಗಳನ್ನು ಎದುರಿಸುವುದು ಸ್ವಲ್ಪ ಕಷ್ಟ ಎಂದು ಭಾವಿಸುತ್ತೇನೆ. ಯಾಕೆಂದರೆ, ನನ್ನ ಬ್ಯಾಟಿಂಗ್ ಶೈಲಿಯನ್ನು ಅವರು ಅರ್ಥಮಾಡಿಕೊಂಡಿದ್ದಾರೆ. ಇನ್ನೂ ವೇಗದ ಬೌಲಿಂಗ್ ವಿಚಾರಕ್ಕೆ ಬಂದರೆ, ಬುಮ್ರಾ ಭಾಯ್ಗಿಂತ ಯಾರೂ ಉತ್ತಮರಲ್ಲ ಎಂದು ಭಾವಿಸುತ್ತೇನೆ ಎಂದರು.
ಇಶಾನ್ ಮುಂದುವರಿದಂತೆ, ಜಸ್ಪ್ರಿತ್ ಬುಮ್ರಾ ಅವರ ಬೌಲಿಂಗ್ ಕುರಿತು ಒಂದು ರೋಚಕ ಸಂಗತಿಯನ್ನು ಹಂಚಿಕೊಂಡಿದ್ದಾರೆ. ನಾನು ಎಲ್ಲೆಡೆ ಈ ಮಾತನ್ನು ಹೇಳುತ್ತೇನೆ ಬಹುಶಃ ಬುಮ್ರಾ ಈ ಮಾತಿನಿಂದ ಅಸಾಮಾಧಾನಗೊಳ್ಳಬಹುದು. ನಾವು ಅಭ್ಯಾಸ ಮಾಡುವಾಗ, ವಿಭಿನ್ನ ರೀತಿಯ ವಿಕೆಟ್‌ಗಳು ಸಿಗುತ್ತವೆ. ಕೆಲವು ಹಸಿರು ಹುಲ್ಲಿನಿಂದ ಕೂಡಿರುತ್ತವೆ, ಇನ್ನು ಕೆಲವು ಒಣಗಿರುತ್ತವೆ. ಸಾಮಾನ್ಯವಾಗಿ ಹುಲ್ಲಿನಿಂದ ಕೂಡಿದ ಪಿಚ್ ಬೌಲರ್‌ಗಳಿಗೆ ಸಹಕಾರಿಯಾಗಿರುವುದರಿಂದ, ಬೌಲರ್‌ಗಳು ಬ್ಯಾಟರ್‌ಗಳ ಮೇಲೆ ಸ್ವಲ್ಪ ಮೃದುವಾಗಿ ವರ್ತಿಸುತ್ತಾರೆ. ಆದರೆ ಬುಮ್ರಾ ವಿಷಯದಲ್ಲಿ ಇದು ಉಲ್ಟಾ! ಎಂದು ಅಭಿಪ್ರಾಯ ಸೂಚಿಸಿದ್ದಾರೆ.
ಏತನ್ಮಧ್ಯೆ, ಟೀಮ್ ಇಂಡಿಯಾದ ಸ್ಪೋಟಕ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟಿ20ಐ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಅದ್ಭುತವಾಗಿ ಮರಳಿದ್ದಾರೆ. ನಾಲ್ಕು ಪಂದ್ಯಗಳಲ್ಲಿ, ಅವರು ತಿರುವನಂತಪುರದಲ್ಲಿ ನಡೆದ ಐದನೇ ಮತ್ತು ಅಂತಿಮ ಟಿ20ಐನಲ್ಲಿ ಶತಕ ಸೇರಿದಂತೆ 53.75 ಸರಾಸರಿಯಲ್ಲಿ 215 ರನ್ ಗಳಿಸಿದ್ದಾರೆ.
ಮುಂಬರುವ ಟಿ20 ವಿಶ್ವಕಪ್‌ಗಾಗಿ ಭಾರತದ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯಲು ಕಿಶನ್ ಬಲವಾದ ವಾದ ಮಂಡಿಸಿದ್ದಾರೆ. ಆದಾಗ್ಯೂ, ಸತತ ಸ್ಥಿರ ಪ್ರದರ್ಶನ ನೀಡುತ್ತಿರುವ ಕಿಶನ್ ಅವರನ್ನು ಕಡೆಗಣಿಸುವುದು ಆಯ್ಕೆಗಾರರಿಗೆ ಕಷ್ಟವಾಗಲಿದೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕೆಲ್ ಕ್ಲಿಂಗರ್ ಹೇಳಿದ್ದಾರೆ (ಏಜೆನ್ಸೀಸ್).