ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಗೆ ರಿಷಭ್ ಪಂತ್ ಬದಲು ಇಶಾನ್ ಕಿಶನ್?
ನವದೆಹಲಿ: ದೇಶೀಯ ಕ್ರಿಕೆಟ್ನಲ್ಲಿ ರನ್ಮಳೆ ಹರಿಸುವ ಮೂಲಕ ರಾಷ್ಟ್ರೀಯ ಟಿ20 ತಂಡಕ್ಕೆ ಮರಳಿರುವ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ (Ishan kishan) ಮುಂಬರುವ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಭಾರತ ತಂಡದಲ್ಲಿ (Team India) ಸ್ಥಾನ ಸಂಪಾದಿಸುವ ಸಾಧ್ಯತೆಗಳಿವೆ. ರಿಷಭ್ ಪಂತ್ (rishabh pant) ಬದಲಿಗೆ ಕಿಶನ್ಗೆ ಅವಕಾಶ ಒಲಿಯುವ ನಿರೀಕ್ಷೆ ಇದೆ.
ಭಾರತ ಏಕದಿನ ತಂಡದಲ್ಲಿ ಸದ್ಯ ಕನ್ನಡಿಗ ಕೆಎಲ್ ರಾಹುಲ್ ಮೊದಲ ಆದ್ಯತೆಯ ವಿಕೆಟ್ ಕೀಪರ್ ಆಗಿದ್ದಾರೆ. ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಪಂತ್ ಭಾರತ ತಂಡದಲ್ಲಿದ್ದರೂ ಆಡುವ ಅವಕಾಶ ಪಡೆದಿರಲಿಲ್ಲ. ಅವರು 2024ರ ಆಗಸ್ಟ್ 7ರಂದು ಶ್ರೀಲಂಕಾ ವಿರುದ್ಧ ಕೊನೆಯದಾಗಿ ಭಾರತ ಪರ ಏಕದಿನ ಪಂದ್ಯವೊಂದನ್ನು ಆಡಿದ್ದರು.
ಇನ್ನು ಕಿಶನ್ 2023ರ ತವರಿನ ವಿಶ್ವಕಪ್ನಲ್ಲಿ ಕೊನೆಯದಾಗಿ ಅಫ್ಘಾನಿಸ್ತಾನ ವಿರುದ್ಧ ಏಕದಿನ ಪಂದ್ಯವೊಂದನ್ನು ಆಡಿದ್ದರು. ಗಿಲ್ ಅನಾರೋಗ್ಯದಿಂದಾಗಿ ವಿಶ್ವಕಪ್ನ ಮೊದಲೆರಡು ಪಂದ್ಯ ತಪ್ಪಿಸಿಕೊಂಡಾಗ ಕಿಶನ್ ಆರಂಭಿಕರಾಗಿ ಆಡುವ ಅವಕಾಶ ಪಡೆದಿದ್ದರು. ಇತ್ತೀಚೆಗೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಯಲ್ಲಿ ಜಾರ್ಖಂಡ್ ಪರ ಮಿಂಚಿದ ಬಳಿಕ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲೂ ಕಿಶನ್ ಭರ್ಜರಿ ಫಾರ್ಮ್ ಮುಂದುವರಿಸಿದ್ದಾರೆ.
ಟಿ20 ವಿಶ್ವಕಪ್ಗೆ ಪೂರ್ವಭಾವಿಯಾಗಿ ಆಯ್ಕೆಗಾರರು ಕಿಶನ್ಗೆ ವಿಶ್ರಾಂತಿ ನೀಡಲು ಬಯಸಿದರೆ, ಮೀಸಲು ವಿಕೆಟ್ ಕೀಪರ್ ಸ್ಥಾನಕ್ಕೆ ಜಿತೇಶ್ ಶರ್ಮ ಆಯ್ಕೆಯಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಜಿತೇಶ್ ಇತ್ತೀಚೆಗೆ ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಸ್ಥಾನ ವಂಚಿತರಾಗಿದ್ದರು. ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿ ಜನವರಿ 11ರಿಂದ ನಡೆಯಲಿದ್ದು, ಜನವರಿ 3 ಅಥವಾ 4ಕ್ಕೆ ಭಾರತ ತಂಡ ಪ್ರಕಟಗೊಳ್ಳುವ ನಿರೀಕ್ಷೆ ಇದೆ.
ಈಗಾಗಲೆ ಟಿ20 ವಿಶ್ವಕಪ್ಗೂ ಕಡೆಗಣಿಸಲ್ಪಟ್ಟಿರುವ ರಿಷಭ್ ಪಂತ್, ಏಕದಿನ ತಂಡದಿಂದಲೂ ಹೊರಬಿದ್ದರೆ ಟೆಸ್ಟ್ ಕ್ರಿಕೆಟ್ ಸೀಮಿತವಾಗಲಿದ್ದಾರೆ. ಟೆಸ್ಟ್ ತಂಡದಲ್ಲಿ ಅವರು ಉಪನಾಯಕರಾಗಿರುವುದರಿಂದ ಸ್ಥಾನ ಭದ್ರವೆನಿಸಿದೆ.
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಉಪನಾಯಕ ಶ್ರೇಯಸ್ ಅಯ್ಯರ್ ಫಿಟ್ ಆಗುವ ನಿರೀಕ್ಷೆ ಹರಡಿದೆ. ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ (ಸಿಒಇ) ಶ್ರೇಯಸ್ ಈಗಾಗಲೆ ಅಭ್ಯಾಸ ಆರಂಭಿಸಿದ್ದು, ಡಿಸೆಂಬರ್ 30ರವರೆಗೂ ಅಲ್ಲಿ ಇರಲಿದ್ದಾರೆ. ನಂತರ ಜನವರಿ 2ರಂದು ಜೈಪುರಕ್ಕೆ ತೆರಳಿ ಜನವರಿ 3 ಮತ್ತು 6ರಂದು ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ಪರ 2 ಪಂದ್ಯ ಆಡುವ ನಿರೀಕ್ಷೆ ಇದೆ. ಶ್ರೇಯಸ್ ಫಿಟ್ನೆಸ್ ಬಗ್ಗೆ ಇದುವರೆಗೆ ಸಕಾರಾತ್ಮಕ ವರದಿಗಳು ಬಂದಿದ್ದು, ಸಿಒಇನಿಂದ ಹಸಿರು ನಿಶಾನೆ ಸಿಕ್ಕರೆ ಮರಳಿ ಕಣಕ್ಕಿಳಿಯಲಿದ್ದಾರೆ. ಸದ್ಯ ನೆಟ್ಸ್ನಲ್ಲಿ ಯಾವುದೇ ತೊಂದರೆ ಇಲ್ಲದೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ ಎಂದು ಮುಂಬೈ ಕ್ರಿಕೆಟ್ ಸಂಸ್ಥೆ ಮೂಲಗಳು ತಿಳಿಸಿವೆ. ಶ್ರೇಯಸ್ ಏಕದಿನ ತಂಡಕ್ಕೆ ಮರಳದಿದ್ದರೆ ಋತುರಾಜ್ ಗಾಯಕ್ವಾಡ್ ಕಿವೀಸ್ ವಿರುದ್ಧ ಸರಣಿಗೂ ಸ್ಥಾನ ಉಳಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.