ಟೀಮ್ ಇಂಡಿಯಾ ಬ್ಯಾಟ್ಸ್‌ಮನ್ ಇಶಾನ್ ಕಿಶನ್
- ಅಫ್ಘಾನಿಸ್ತಾನ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ಶತಕದಾಟ
- ತಂಡದಲ್ಲಿ ಸ್ಥಾನ ಪಡೆಯಲು ಉತ್ತಮ ಪ್ರದರ್ಶನ
- ಇಶಾನ್ ಆಕ್ರಮಣಕಾರಿ ಬ್ಯಾಟಿಂಗ್ ಬಿಸಿಸಿಐ ಆಯ್ಕೆಗಾರರಿಗೆ ತಲೆಬಿಸಿ
Ishan Kishan: ಐಪಿಎಲ್ 19ನೇ ಆವೃತ್ತಿಗೂ ಮುನ್ನ ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿದ್ದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್, ಐಪಿಎಲ್ ಮತ್ತು ಆಫ್ಗಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ತಂಡದ ಪರ ಅಮೋಗ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಅವರ ಉತ್ತಮ ಪ್ರದರ್ಶನವೇ ಇದೀಗ ಬಿಸಿಸಿಐಗೆ ದೊಡ್ಡ ತಲೆನೋವಾಗಿ ಕಾಡಲಾರಂಭಿಸಿದೆ.
ಬುಧವಾರ (ಜೂ.17) ಲಖನೌದಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ, ಕ್ಯಾಪ್ಟನ್ ಶುಭಮನ್ ಗಿಲ್ ಶತಕಕ್ಕೆ ಸಾಥ್ ನೀಡಿದ ಇಶಾನ್ ಕಿಶನ್, ಕೇವಲ 79 ಎಸೆತಗಳಲ್ಲಿ 125 ರನ್ ಬಾರಿಸಿದರು. ಇಂಜುರಿಯಿಂದ ವಿರಾಟ್ ಕೊಹ್ಲಿ ತಂಡದಿಂದ ಹೊರಗುಳಿದರು. ಅವರ ಸ್ಥಾನ ಪಡೆದ ಇಶಾನ್ ಕಿಶನ್, 50 ಓವರ್ ಪಂದ್ಯಗಳಲ್ಲಿಯೂ ಅಬ್ಬರದ ಬ್ಯಾಟಿಂಗ್ ನಡೆಸುತ್ತಿದ್ದಾರೆ.
ನಾಯಕ ಶುಭಮನ್ ಗಿಲ್ ಜೊತೆ ಸೇರಿ ಮೂರನೇ ವಿಕೆಟ್‌ಗೆ 224 ರನ್‌ಗಳ ದೊಡ್ಡ ಪಾರ್ಟ್ನರ್ಶಿಪ್ ನಿರ್ಮಿಸಿದ ಇಶಾನ್ ಕಿಶನ್, 125 ರನ್ ಬಾರಿಸಿದರು. ಆರಂಭದಲ್ಲಿ 53 ಎಸೆತಕ್ಕೆ 50 ರನ್ ಗಳಿಸಿದ್ದ ಇಶಾನ್, ಕೇವಲ 19 ಎಸೆತಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಶತಕದಾಟ ತೋರಿದರು. ಇದು ತಂಡಕ್ಕೆ ಮತ್ತು ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ನೀಡಿದರೆ, ಬಿಸಿಸಿಐ ಆಯ್ಕೆಗಾರರ ಸಮಿತಿಗೆ ದೊಡ್ಡ ತಲೆನೋವಾಗಿದೆ. ಯಾರನ್ನು ಟೀಮ್ ಇಂಡಿಯಾದ ಓಪನರ್ ಆಗಿ ಕಳುಹಿಸಬೇಕು ಎಂಬುದೇ ಸದ್ಯದ ಚಿಂತೆ.
ಏಕದಿನ ಫಾರ್ಮೆಟ್ನಲ್ಲಿ ಈಗಾಗಲೇ ಟಾಪ್ ಆರ್ಡರ್ನಲ್ಲಿ ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ಶುಭಮನ್ ಗಿಲ್, ರೋಹಿತ್ ಅವರಂತಹ ಸ್ಟಾರ್ ಅನುಭವಿ ಬ್ಯಾಟರ್ಗಳಿದ್ದಾರೆ. ಹೀಗಿರುವಾಗ, ಕಿಶನ್ ಫಾರ್ಮ್‌ಗೆ ಮರಳಿರುವುದು ಸದ್ಯ ಆಯ್ಕೆಗಾರರಿಗೆ ಯಾರನ್ನು ಆಡಿಸಬೇಕು? ಯಾರನ್ನು ಮಧ್ಯಮ ಕ್ರಮಾಂಕದಲ್ಲಿ ಫಿಕ್ಸ್ ಮಾಡಬೇಕು ಎಂಬ ತಲೆನೋವು ಶುರುವಾಗಿದೆ. ಆಫ್ಘನ್ ವಿರುದ್ಧ ಶತಕ ಬಾರಿಸುವ ಮೂಲಕ ಟಾಪ್ ಆರ್ಡರ್ ರೇಸ್ನಲ್ಲಿ ಇಶಾನ್ ಕೂಡ ಆಯ್ಕೆಗಾರರ ಗಮನ ಸೆಳೆದಿದ್ದಾರೆ,(ಏಜೆನ್ಸೀಸ್).