Jonty Rhodes (ಚಿತ್ರ X) 
ಕ್ರಿಕೆಟ್

ನಾನೊಬ್ಬ ಅಪ್ಪಟ ಭಾರತೀಯ ಎಂದ ಜಾಂಟಿ ರೋಡ್ಸ್!...ವಿದೇಶದಲ್ಲಿ ಪಾನಿ ಪೂರಿ ಸವಿಯುವಾಗ ನಡೆದಿದ್ದೇನು..? Jonty Rhodes

Jonty Rhodes: ದಕ್ಷಿಣ ಆಫ್ರಿಕಾದ ಫೀಲ್ಡಿಂಗ್ ಮಾಂತ್ರಿಕ ಜಾಂಟಿ ರೋಡ್ಸ್ ಅವರಿಗೆ ಭಾರತ ಮತ್ತು ಇಲ್ಲಿನ ಆಹಾರ ಸಂಸ್ಕೃತಿಯ ಮೇಲಿರುವ ಪ್ರೀತಿ ಮತ್ತೊಮ್ಮೆ ಅನಾವರಣಗೊಂಡಿದೆ. ವಿದೇಶದಲ್ಲೂ ಭಾರತೀಯ ಸ್ಟ್ರೀಟ್ ಫುಡ್ ಸವಿಯುತ್ತಾ ಅವರು ಹೇಳಿರುವ ತಮಾಷೆಯ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

ರೊಟರ್‌ಡ್ಯಾಮ್ ರೆಸ್ಟೋರೆಂಟ್‌ನಲ್ಲಿ ಪಾನಿ ಪೂರಿ ಹವಾ

ನೆದರ್‌ಲ್ಯಾಂಡ್ಸ್‌ನ ರೊಟರ್‌ಡ್ಯಾಮ್‌ನಲ್ಲಿರುವ 'ಕೊಯಿಲಾ ಇಂಡಿಯನ್ ರೆಸ್ಟೋರೆಂಟ್' ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಜಾಂಟಿ ರೋಡ್ಸ್ ಭಾರತೀಯ ಮೂಲದ ವ್ಯಕ್ತಿಯೊಬ್ಬರ ಜೊತೆ ನಿಂತು ಪಾನಿ ಪೂರಿ ಸವಿಯುತ್ತಿರುವುದನ್ನು ನೋಡಬಹುದು. ಈ ವೇಳೆ ಪಾನಿ ಪೂರಿ ನೀಡುತ್ತಿದ್ದ ಮಹಿಳೆ ಇಷ್ಟು ಖಾರ ನಿಮಗೇನಾದರೂ ಕಷ್ಟವಾಗುತ್ತಿದಿಯೇ ಎಂದು ರೋಡ್ಸ್​ ಅವರನ್ನು ಪ್ರಶ್ನಿಸಿದ್ದಾರೆ.
ಇದಕ್ಕೆ ಆಶ್ಚರ್ಯದಿಂದಲೇ ಮರುಪ್ರಶ್ನೆ ಹಾಕಿದ ರೋಡ್ಸ್, ನೀವು ಈ ಪ್ರಶ್ನೆಯನ್ನು ನನಗೆ ಕೇಳುತ್ತಿದ್ದೀರಾ? ನಾನು ನಿಮಗಿಂತ ಹೆಚ್ಚು ಇಂಡಿಯನ್! ಎಂದು ತಮಾಷೆಯಾಗಿಯೇ ಉತ್ತರಿಸಿದ್ದಾರೆ.

ಪುಣೆ ಇಂಡಿಯಾನಾ? ಮುಂಬೈ, ಗೋವಾ ಅಸಲಿ ಇಂಡಿಯಾ!

ಆದಾಗ್ಯೂ, ಸಾಷ್ಟಾಂಗ ನಮಸ್ಕಾರ ಹಾಗೂ ಭಾರತದ ಸ್ಥಳಗಳ ಬಗ್ಗೆ ಮಾತನಾಡುತ್ತಾ ತಮ್ಮದೇ ಆದ ವಾದ ಮಂಡಿಸಿದ ರೋಡ್ಸ್​, ಪಕ್ಕದಲ್ಲಿದ್ದ ವ್ಯಕ್ತಿಯನ್ನು ರೇಟು ಮಾಡಲು ಶುರು ಮಾಡಿದರು. ಅವರು ಪುಣೆಯಲ್ಲಿ ವಾಸಿಸುತ್ತಿದ್ದಾರೆ, ಅದು ಪೂರ್ತಿ ಭಾರತವಲ್ಲ. ಆದರೆ ನಾನು ಮುಂಬೈ ಮತ್ತು ಗೋವಾದಲ್ಲಿ ಇರುತ್ತೇನೆ, ಅದೇ ನಿಜವಾದ ಭಾರತ! ಎಂದು ತಮಾಷೆಯಾಗಿ ಕಾಲೆಳೆದಿದ್ದಾರೆ. ನೆದರ್‌ಲ್ಯಾಂಡ್ಸ್‌ನಲ್ಲಿ ಕುಳಿತು ಪಾನಿ ಪೂರಿ ತಿನ್ನುತ್ತಾ ಭಾರತೀಯನಿಗೇ ಆರೆಂಜ್ ಕಾರ್ಡ್​ ತೋರಿಸಿದ ರೋಡ್ಸ್​ ಮಾತು ನೆಟ್ಟಿಗರ ಗಮನ ಸೆಳೆದಿದೆ.

ಭಾರತದ ಜೊತೆಗಿನ ವಿಶೇಷ ಬಾಂಧವ್ಯ

ಜಾಂಟಿ ರೋಡ್ಸ್ ಭಾರತದ ಮೇಲಿಟ್ಟಿರುವ ಪ್ರೀತಿ ನಿನ್ನೆಯದಲ್ಲ. ಐಪಿಎಲ್‌ನಲ್ಲಿ ಸುದೀರ್ಘ ಕಾಲ ಮುಂಬೈ ಇಂಡಿಯನ್ಸ್ ತಂಡದ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಇವರು, ಮುಂಬೈ ನಗರದ ಜೊತೆಗೆ ಆಳವಾದ ನಂಟು ಬೆಳಿಸಿಕೊಂಡಿದ್ದಾರೆ.
ಅವರ ಈ ಪ್ರೀತಿ ಕೇವಲ ಕ್ರಿಕೆಟ್‌ಗೆ ಸೀಮಿತವಾಗಿಲ್ಲ. 2015ರಲ್ಲಿ ಮುಂಬೈನಲ್ಲಿ ಜನಿಸಿದ ತಮ್ಮ ಮಗಳಿಗೆ ಇಂಡಿಯಾ ಜೀನ್ ರೋಡ್ಸ್ ಎಂದೇ ಹೆಸರಿಟ್ಟಿದ್ದಾರೆ. ತದನಂತರ 2017ರಲ್ಲಿ ಅವರ ಪುತ್ರ ನಾಥನ್ ಕೂಡ ಮುಂಬೈನಲ್ಲೇ ಜನಿಸಿದ್ದನು. ಹೀಗಾಗಿ ನಾನು ನಿಮಗಿಂತ ಹೆಚ್ಚು ಇಂಡಿಯನ್ ಎಂದು ಅವರು ಹೇಳಿರುವುದರ ಹಿಂದೆ ವರ್ಷಗಳ ಪ್ರೀತಿ ಮತ್ತು ಸುದೀರ್ಘ ಇತಿಹಾಸವಿದೆ (ಏಜೆನ್ಸೀಸ್​).