BCCI ಗೌಪ್ಯ ವಿಚಾರ ಬಯಲು: ರಶೀದ್ಗೆ ಕಾದಿದೆಯಾ ಸಂಕಷ್ಟ? ಭಾರಿ ಚರ್ಚೆ ಹುಟ್ಟುಹಾಕಿದ ಅಫ್ಘಾನ್ ಕ್ರಿಕೆಟಿಗನ ಹೇಳಿಕೆ! Rashid Khan
- ಅಫ್ಘಾನಿಸ್ತಾನದ ಸ್ಟಾರ್ ಕ್ರಿಕೆಟಿಗ ರಶೀದ್ ಖಾನ್ ಭಾರತದ ಬಗ್ಗೆ ಹೇಳಿರುವ ವಿಚಾರವೀಗ ಭಾರಿ ಚರ್ಚೆ
- ಗೌಪ್ಯವಾಗಿ ಇಡಬೇಕಾದ ಈ ವಿಷಯವನ್ನು ಬಹಿರಂಗಪಡಿಸಿರುವ ರಶೀದ್ ವಿರುದ್ಧ ಬಿಸಿಸಿಐ ಕ್ರಮ
- ಮಂಡಳಿಯ ಖ್ಯಾತಿಗೆ ಹಾನಿಯಾಗಿದೆ ಎಂದು ಬಿಸಿಸಿಐ ಭಾವಿಸಿದರೆ, ರಶೀದ್ ಬಳಿ ವಿವರಣೆ ಪಡೆಯುವ ಸಾಧ್ಯತೆ
- ರಶೀದ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯನ್ನು ಸದ್ಯಕ್ಕೆ ತಳ್ಳಿಹಾಕುವಂತಿಲ್ಲ
Rashid Khan : ಅಫ್ಘಾನಿಸ್ತಾನದ ಸ್ಟಾರ್ ಕ್ರಿಕೆಟಿಗ ರಶೀದ್ ಖಾನ್ ಭಾರತದ ಬಗ್ಗೆ ಹೇಳಿರುವ ವಿಚಾರವೊಂದು ಭಾರಿ ಚರ್ಚೆಗೆ ಕಾರಣವಾಗಿದೆ. ಗೌಪ್ಯ ವಿಚಾರವನ್ನು ತೆರೆದಿಟ್ಟಿದ್ದಕ್ಕೆ ರಶೀದ್ ವಿರುದ್ಧ ಬಿಸಿಸಿಐ ಕ್ರಮ ಕೈಗೊಳ್ಳುತ್ತಾ? ಅಷ್ಟಕ್ಕೂ ರಶೀದ್ ಖಾನ್ ಹೇಳಿದ್ದೇನು? ಪ್ರಸ್ತುತ ಐಪಿಎಲ್ ಆಡುತ್ತಿರುವ ರಶೀದ್, ಭಾರಿ ಚರ್ಚೆಯಲ್ಲಿರೋದೇಕೆ? ಈ ಕುರಿತಾದ ಒಂದು ಇಂಟ್ರೆಸ್ಟಿಂಗ್ ಸಂಗತಿ ಇಲ್ಲಿದೆ.
ಆತ್ಮಕತೆಯಲ್ಲಿ ರಶೀದ್ ಅಚ್ಚರಿ ಹೇಳಿಕೆ!
ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಅವರು ತಮಗೆ ಭಾರತದ ಪೌರತ್ವ ಪಡೆಯುವಂತೆ ಆಫರ್ ಬಂದಿದ್ದ ವಿಚಾರವನ್ನು ತಮ್ಮ ಆತ್ಮಕಥೆ 'ರಶೀದ್ ಖಾನ್: ಫ್ರಮ್ ಸ್ಟ್ರೀಟ್ಸ್ ಟು ಸ್ಟಾರ್ಡಮ್' ನಲ್ಲಿ ಬಹಿರಂಗಪಡಿಸಿದ್ದಾರೆ. 2023ರ ಐಪಿಎಲ್ ಸಮಯದಲ್ಲಿ ಭಾರತೀಯ ಕ್ರಿಕೆಟ್ ಮಂಡಳಿಯ ಉನ್ನತ ಅಧಿಕಾರಿಯೊಬ್ಬರು ತಮಗೆ ಈ ಆಫರ್ ನೀಡಿದ್ದರು ಎಂದು ಅವರು ತಿಳಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಸರಿಯಿಲ್ಲದ ಕಾರಣ ಭಾರತದಲ್ಲೇ ನೆಲೆಸಿ, ಇಲ್ಲಿನ ಪೌರತ್ವ ಪಡೆದು ಭಾರತದ ಪರವಾಗಿ ಕ್ರಿಕೆಟ್ ಆಡುವಂತೆ ಅವರು ಸೂಚಿಸಿದ್ದರು. ಆದರೆ, ಆ ಆಫರ್ ಅನ್ನು ವಿನಯವಾಗಿ ತಿರಸ್ಕರಿಸಿದೆ. ನನ್ನ ದೇಶಕ್ಕಾಗಿ ಆಡುವುದೇ ನನಗೆ ಪರಮ ಗೌರವ. ಅಫ್ಘಾನಿಸ್ತಾನದ ಪರ ಆಡದಿದ್ದರೆ ಮತ್ಯಾವುದೇ ದೇಶದ ಪರ ಆಡುವುದಿಲ್ಲ ಎಂದು ಹೇಳಿದೆ ಎಂದು ತಮ್ಮ ಆತ್ಮಕತೆಯಲ್ಲಿ ಬರೆದುಕೊಂಡಿದ್ದಾರೆ.
ಭಾರೀ ಚರ್ಚೆ
ರಶೀದ್ ಹೇಳಿದ ಈ ವಿಚಾರವೀಗ ಅಂತಾರಾಷ್ಟ್ರೀಯ ಕ್ರಿಕೆಟ್ ವಲಯದಲ್ಲಿ ಚರ್ಚೆಯ ವಿಷಯವಾಗಿದೆ. ಗೌಪ್ಯವಾಗಿ ಇಡಬೇಕಾದ ಈ ವಿಷಯವನ್ನು ಬಹಿರಂಗಪಡಿಸಿರುವ ರಶೀದ್ ವಿರುದ್ಧ ಬಿಸಿಸಿಐ ಕ್ರಮ ಕೈಗೊಳ್ಳುತ್ತದೆಯೇ ಎಂಬ ಪ್ರಶ್ನೆಗಳು ಇದೀಗ ಎದ್ದಿವೆ. ಈ ವಿಷಯವನ್ನು ಆಳವಾಗಿ ಪರಿಶೀಲಿಸಿದಾಗ ರಶೀದ್ ವಿರುದ್ಧ ಕ್ರಮ ಕೈಗೊಳ್ಳಲು ಯಾವುದೇ ನಿರ್ದಿಷ್ಟ ನಿಬಂಧನೆಗಳಿಲ್ಲ ಎಂದು ತಿಳಿದುಬಂದಿದೆ. ಆದಾಗ್ಯೂ, ಮಂಡಳಿಯ ಖ್ಯಾತಿಗೆ ಹಾನಿಯಾಗಿದೆ ಎಂದು ಬಿಸಿಸಿಐ ಭಾವಿಸಿದರೆ, ರಶೀದ್ ಬಳಿ ವಿವರಣೆ ಪಡೆಯುವ ಸಾಧ್ಯತೆಯಿದೆ. ಅಗತ್ಯವಿದ್ದರೆ, ಅದು ಪುರಾವೆಗಳನ್ನು ಸಹ ಕೇಳಬಹುದು.
ರಶೀದ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯನ್ನು ಸದ್ಯಕ್ಕೆ ತಳ್ಳಿಹಾಕುವಂತಿಲ್ಲ. ನಿರ್ಬಂಧಗಳನ್ನು ವಿಧಿಸುವುದು ಅಥವಾ ಐಪಿಎಲ್‌ನಲ್ಲಿ ಭಾಗವಹಿಸದಂತೆ ಅವರನ್ನು ನಿಷೇಧಿಸುವಂತಹ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ಚರ್ಚೆಗಳು ಕೂಡ ಜೋರಾಗಿ ನಡೆಯುತ್ತಿವೆ. ಆದಾಗ್ಯೂ, ಅಂತಹ ಕ್ರಮಗಳಿಗೆ ಬಲವಾದ ಪುರಾವೆಗಳು ಬೇಕಾಗುತ್ತವೆ. ಸದ್ಯಕ್ಕೆ ಬಿಸಿಸಿಐ ಈ ವಿಷಯವನ್ನು ಪಕ್ಕಕ್ಕೆ ಇಟ್ಟಿದೆ ಎಂದು ತಿಳಿದುಬಂದಿದೆ. ಒಂದು ವೇಳೆ ಇದು ಪರಿಶೀಲನೆಗೆ ಒಳಪಟ್ಟರೆ, ಏನು ಬೇಕಾದರೂ ಆಗಬಹುದು.
ಇನ್ನು ಬಿಸಿಸಿಐನ ಹೆಚ್ಚಿನ ಹಿರಿಯರು ರಶೀದ್ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಹೊಂದಿರುವುದರಿಂದ, ಕ್ರಮ ತೆಗೆದುಕೊಳ್ಳುವ ಮಾತು ಸದ್ಯಕ್ಕೆ ದೂರ ಅನ್ನೋ ಅಭಿಪ್ರಾಯಗಳು ಕೂಡ ಇವೆ. ಬಹುಶಃ ಒಂದು ಎಚ್ಚರಿಕೆಗೆ ಮಾತ್ರ ಇದು ಸೀಮಿತವಾಗಬಹುದು. ಐಪಿಎಲ್ ಮುಗಿದ ನಂತರ ಬಿಸಿಸಿಐ ಈ ವಿಷಯವನ್ನು ಪರಿಶೀಲಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ನನಗೆ ಪೌರತ್ವದ ಆಫರ್ ಬಂದಿತ್ತು ಎಂಬ ರಶೀದ್ ಖಾನ್ ಹೇಳಿಕೆಗೆ ಬಿಸಿಸಿಐ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ಬಿಸಿಸಿಐ ಪ್ರತಿಕ್ರಿಯೆ ನೀಡುತ್ತಾ? ಅಥವಾ ಏನೂ ಮಾತನಾಡದೇ ಸುಮ್ಮನಾಗುತ್ತಾ? ಅಥವಾ ರಶೀದ್ ವಿರುದ್ಧ ಕ್ರಮ ಕೈಗೊಳ್ಳುತ್ತಾ ಅನ್ನೋದನ್ನು ಕಾದು ನೋಡಬೇಕಾಗಿದೆ.
ಅಂದಹಾಗೆ, ರಶೀದ್ ಖಾನ್ ಅವರು ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಪರ ಆಡುತ್ತಿದ್ದಾರೆ. ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ, ರಶೀದ್ ಪ್ರದರ್ಶನ ಈ ಬಾರಿ ನೀರಸವಾಗಿದೆ. ಇದುವರೆಗೆ ಆಡಿದ 6 ಪಂದ್ಯಗಳಲ್ಲಿ 6 ವಿಕೆಟ್‌ಗಳನ್ನು ಮಾತ್ರ ಕಬಳಿಸಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಇತ್ತೀಚಿಗೆ ನಡೆದ ಪಂದ್ಯದಲ್ಲಿ, ರಶೀದ್ ಅವರು ತಮ್ಮ 4 ಓವರ್‌ಗಳ ಕೋಟಾದಲ್ಲಿ ವಿಕೆಟ್ ಪಡೆಯಲಿಲ್ಲ. ಈ ಪಂದ್ಯದಲ್ಲಿ ಗುಜರಾತ್, ಮುಂಬೈ ವಿರುದ್ಧ ಭರ್ಜರಿ ಸೋಲನ್ನು ಅನುಭವಿಸಿತು, (ಏಜೆನ್ಸೀಸ್).