ಮಾಜಿ ಕ್ರಿಕಟಿಗ ಇರ್ಫಾನ್ ಪಠಾಣ್
- ಟಿ20 ವಿಶ್ವಕಪ್ನಲ್ಲಿ ಆಡುವ ಬಗ್ಗೆ ಪಿಸಿಬಿ ಹೈಡ್ರಾಮಾ
- ಭಾರತದೊಂದಿಗಿನ ಪಂದ್ಯವನ್ನು ಬಹಿಷ್ಕರಿಸುವುದಾಗಿ ಐಸಿಸಿಗೆ ಬೆದರಿಕೆ
- ಪಾಕ್ ನಾಟಕಕ್ಕೆ ಸಿಡಿದೆದ್ದ ಟೀಮ್ ಇಂಡಿಯಾ ಮಾಜಿ ಆಲ್ರೌಂಡರ್
ನವದೆಹಲಿ: ಭಾರತದಲ್ಲಿ ನಮ್ಮ ಆಟಗಾರರಿಗೆ ಸುರಕ್ಷತೆ ಇಲ್ಲ. ಹೀಗಾಗಿ, ಟಿ20 ವಿಶ್ವಕಪ್ನಲ್ಲಿ ನಮ್ಮ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದ ಬಾಂಗ್ಲಾ ಕ್ರಿಕೆಟ್ಗೆ ಕಡೆಗೂ ಆಗಿದ್ದು ಭಾರೀ ಮುಖಭಂಗವೇ. ಬಾಂಗ್ಲಾದೇಶ ತಂಡವನ್ನು ಟೂರ್ನಿಯ ಪಟ್ಟಿಯಿಂದ ಕಿತ್ತುಬಿಸಾಡಿದ ಐಸಿಸಿ, ಅವರ ಸ್ಥಾನವನ್ನು ಸ್ಕಾಟ್ಲ್ಯಾಂಡ್ಗೆ ನೀಡಿತು. ಈ ಬೆಳವಣಿಗೆಯ ಬೆನ್ನಲ್ಲೇ ತನ್ನ ಗುಳ್ಳೆನರಿ ಬುದ್ಧಿ ತೋರಿರುವ ಪಾಕಿಸ್ತಾನ, ಸದ್ಯ ಹೈಡ್ರಾಮಾವನ್ನು ಮುಂದಿನ ವಾರದವರೆಗೆ ನಡೆಸಲು ಮುಂದಾಗಿದೆ.
ವಿಶ್ವಕಪ್ನಲ್ಲಿ ನಾವು ಭಾಗಿಯಾಗುವುದಿಲ್ಲ. ಭಾರತದ ವಿರುದ್ಧ ಪಂದ್ಯವನ್ನು ಬಹಿಷ್ಕರಿಸುತ್ತೇವೆ ಎಂದೆಲ್ಲ ಐಸಿಸಿಗೆ ಬೆದರಿಕೆ ಹಾಕುತ್ತಿದೆ. ಈ ಬಗ್ಗೆ ಮಾತನಾಡಿರುವ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ, ನಾವು ನಮ್ಮ ಪ್ರಧಾನಿ ಜತೆ ಮಾತನಾಡಿ, ಆಡಬೇಕಾ, ಬೇಡವಾ ಎಂಬ ನಿರ್ಧಾರವನ್ನು ಶುಕ್ರವಾರ (ಜ.30) ಅಥವಾ ಸೋಮವಾರ (ಫೆ.2) ತಿಳಿಸುತ್ತೇವೆ ಎಂದಿದ್ದಾರೆ. ಪಾಕ್ನ ಈ ನಾಟಕಗಳಿಂದ ಕೆರಳಿರುವ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಪಿಸಿಬಿಗೆ ಛೀಮಾರಿ ಹಾಕಿದ್ದಾರೆ.
ಬಾಂಗ್ಲಾದೇಶ ಬದಲಿಗೆ ಸ್ಕಾಟ್ಲ್ಯಾಂಡ್ಗೆ ಐಸಿಸಿ ಸ್ಥಾನ ನೀಡಿದ್ದೇ ತಡ ಪಾಕಿಸ್ತಾನ ಬೆದರಿಕೆಗಳನ್ನು ಹಾಕುತ್ತಿದೆ. ಇದು ಸಂಪೂರ್ಣ ಅಸಂಬದ್ಧ! ಇದೇ ನೀವು ಮೊದಲು ಹೈಬ್ರಿಡ್ ಮಾದರಿಗೆ ಒಪ್ಪಿಕೊಂಡಿದ್ದೀರಿ. ಭಾರತದೊಂದಿಗಿನ ಪಂದ್ಯವನ್ನು ಶ್ರೀಲಂಕಾದಲ್ಲಿ ಆಡಲು ಓಕೆ ಎಂದಿದ್ದೀರಿ ಅಂದಮೇಲೆ ಈಗ್ಯಾಕೆ ಇಂತಹ ವರಸೆ? ಎಂದು ಪಠಾಣ್ ಪ್ರಶ್ನಿಸಿದ್ದಾಗಿ 'ರೆವ್‌ಸ್ಪೋರ್ಟ್ಸ್' ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ ಈ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ದೇಶದ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಭೇಟಿಯಾಗಿದ್ದು, ಟಿ20 ವಿಶ್ವಕಪ್ ಟೂರ್ನಿಯಿಂದ ಐಸಿಸಿ ಬಾಂಗ್ಲಾದೇಶವನ್ನು ಹೊರಗಿಟ್ಟ ಹಿನ್ನೆಲೆ, ತಮ್ಮ ತಂಡ ಕೂಡ ಟೂರ್ನಿಯನ್ನು ಕೈಬಿಡುವ ಬಗ್ಗೆ ಪ್ರಧಾನಿಯೊಂದಿಗೆ ಚರ್ಚಿಸಿದ್ದಾಗಿ ತಿಳಿಸಿದ್ದಾರೆ. ದೀರ್ಘಕಾಲದ ಚರ್ಚೆಯ ಬಳಿಕ ಈ ವಿಚಾರದಲ್ಲಿ ತಮ್ಮ ನಿರ್ಧಾರವನ್ನು ಜ.30 ಅಥವಾ ಫೆ.02ರಂದು ತಿಳಿಸುವುದಾಗಿ ಪಾಕ್ ತಾವು ಮಾಡುತ್ತಿರುವ ಹೈಡ್ರಾಮವನ್ನು ಮುಂದುವರಿಸಿದೆ,(ಏಜೆನ್ಸೀಸ್).