ಪಂಜಾಬ್ ಕಿಂಗ್ಸ್ ತಂಡದ ಓನರ್​ ಪ್ರೀತಿ ಜಿಂಟಾ, ಇರ್ಫಾನ್​ ಪಠಾಣ್​  
ಕ್ರಿಕೆಟ್

ಮಾಲೀಕರೇ ಸರಿಯಿಲ್ಲ... ಪಂಜಾಬ್ ಕಿಂಗ್ಸ್​ ತಂಡದ ಸ್ಫೋಟಕ ವಿಷಯ ಬಯಲು ಮಾಡಿದ ಇರ್ಫಾನ್​ ಪಠಾಣ್

ಪ್ರಮುಖ ಮುಖ್ಯಾಂಶಗಳು

  • ಮಾ.19ರಿಂದ ಐಪಿಎಲ್​ 19ನೇ ಆವೃತ್ತಿ ಶುರು
  • ಪಂಜಾಬ್ ಕಿಂಗ್ಸ್ ತಂಡದ ಆಂತರಿಕ ಸಮಸ್ಯೆ ಬಿಚ್ಚಿಟ್ಟ ಇರ್ಫಾನ್ ಪಠಾಣ್
  • ಫ್ರಾಂಚೈಸಿ ಮಾಲೀಕರಲ್ಲಿಯೇ ದೊಡ್ಡ ಸಮಸ್ಯೆ ಎಂಬ ಶಾಕಿಂಗ್ ಸಂಗತಿ ರಿವೀಲ್
ನವದೆಹಲಿ: ಐಪಿಎಲ್​ 19ನೇ ಆವೃತ್ತಿಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿದ್ದು, ಉದ್ಘಾಟನಾ ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​ಸಿಬಿ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ತಂಡಗಳ ನಡುವೆ ನಡೆಯಲಿದೆ. ಈ ಪಂದ್ಯಕ್ಕಾಗಿ ಕ್ರಿಕೆಟ್​ ಪ್ರಿಯರು ತೀವ್ರ ಕುತೂಹಲದಿಂದ ಕಾಯುತ್ತಿದ್ದು, ಅದರ ಮಧ್ಯೆಯೇ, ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ನೀಡಿದ ಹೇಳಿಕೆ ಸದ್ಯ ಹಲವರನ್ನು ಅಚ್ಚರಿಗೊಳಿಸಿದೆ.
2008ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿಯಾಗಿ ತನ್ನ ಇತಿಹಾಸದುದ್ದಕ್ಕೂ ಹಲವಾರು ಸಮಸ್ಯೆಗಳನ್ನು ಎದುರಿಸಿಕೊಂಡು ಬಂದಿರುವ ಪಂಜಾಬ್ ಕಿಂಗ್ಸ್​​, ಐಪಿಎಲ್ 2025ರಲ್ಲಿ ಫೈನಲ್ ತಲುಪಿದ್ದೇ ಆದರೂ, ರಾಯಲ್ ಚಾಲೆಂಜರ್ಸ್​ ಬೆಂಗಳೂರು ಎದುರು ಸೋಲಿಗೆ ಶರಣಾಯಿತು. 18 ವರ್ಷಗಳಲ್ಲಿ ಕೇವಲ ಮೂರು ಬಾರಿ ಮಾತ್ರ ಪ್ಲೇಆಫ್‌ಗೆ ಪ್ರವೇಶಿಸುವಲ್ಲಿ ಯಶಸ್ವಿಯಾದ ಈ ತಂಡದಲ್ಲಿ ಆಂತರಿಕ ಸಮಸ್ಯೆಗಳು ದೊಡ್ಡದಾಗಿ ಕಾಡಿತು ಎಂದು ಪಠಾಣ್ ಹೇಳಿದ್ದಾರೆ. 
ಯುವರಾಜ್ ಸಿಂಗ್ ನಾಯಕತ್ವದಲ್ಲಿ ಪಂಜಾಬ್ ಫ್ರಾಂಚೈಸಿ 2008ರಲ್ಲಿ ಐಪಿಎಲ್‌ನ ಉದ್ಘಾಟನಾ ಆವೃತ್ತಿಯಲ್ಲಿ ಸೆಮಿಫೈನಲ್ ಪ್ರವೇಶಿಸಿತು. ಆ ನಂತರ, ತಂಡದಲ್ಲಿ ಪರಿಸ್ಥಿತಿ ತೀರ ಹದಗೆಡಲು ಶುರುವಾಯಿತು. 2009ರ ಐಪಿಎಲ್ ಲೀಗ್​ ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಗೊಂಡಾಗ ನಮ್ಮ ತಂಡದ ಉತ್ತಮ ಪ್ರದರ್ಶನ ನೀಡಲಿಲ್ಲ. ಮೊದಲ ವರ್ಷ (2008), ನಾವು ಸೆಮಿಫೈನಲ್​ಗೆ ಹೋದೆವು. ಹಾಗೆ ನೋಡಿದ್ರೆ, ನಾಯಕತ್ವ ಮುಂದುವರಿಯಬೇಕಿತ್ತು. ಆದರೆ, ಮೂರನೇ ವರ್ಷದ ಹೊತ್ತಿಗೆ ಕ್ಯಾಪ್ಟನ್​ ಅನ್ನೇ ಬದಲಿಸಿದರು ಎಂದರು. 
"ಇದರಲ್ಲಿ, ಕೋಚ್​ಗಳ ನಡುವೆ ದೊಡ್ಡ ಸಮಸ್ಯೆ ಇತ್ತು. ಕ್ರಿಕೆಟ್ ಹಿನ್ನೆಲೆಯಿರದ ಕೋಚ್​ಗಳು ಏನೋ ಹೇಳುತ್ತಿದ್ದರು ಮತ್ತು ಕ್ರಿಕೆಟ್ ಹಿನ್ನೆಲೆ ಇಲ್ಲದ ಮಾಲೀಕರು ಮತ್ತೇನೋ ಪ್ಲ್ಯಾನ್​ ಮಾಡುತ್ತಿದ್ದರು. ಪಂಜಾಬ್‌ ಕಿಂಗ್ಸ್​ ವಿಷಯದಲ್ಲಿ ಇದೇ ಆಗಿದ್ದು. ಆರಂಭದಲ್ಲಿ, ಮಾಲೀಕರು ಉತ್ತಮ ಎಂಬಂತೆ ಕಂಡರು. ಆದರೆ, ಅವರಲ್ಲೇ ಆಂತರಿಕವಾಗಿ ಸಾಕಷ್ಟು ಸಮಸ್ಯೆಗಳು ಕಾಡಲಾರಂಭಿಸಿತು. ಒಬ್ಬರ ಮಾತಿಗೆ ಇನ್ನೊಬ್ಬರು ಒಪ್ಪಿಕೊಳ್ಳುತ್ತಿರಲಿಲ್ಲ. ಅಲ್ಲಿ ಸಮನ್ವಯದ ಕೊರತೆ ಕಾಡುತ್ತಿತ್ತು ಎಂದಿದ್ದಾರೆ. 
"ಉದಾಹರಣೆಗೆ, ಒಬ್ಬರು, ನಾವು ರಿಸಲ್ಟ್​ ಬಯಸುವ ಕಾರಣ ಈ ಇದೇ ತಂಡವನ್ನು ಕಣಕ್ಕಿಳಿಸಬೇಕು ಎಂದರೆ, ಮತ್ತೊಬ್ಬ ಮಾಲೀಕರು, ನಾವು ಒಂದಷ್ಟು ಕಾಂಬಿನೇಷನ್​ ಇಟ್ಟುಕೊಂಡು ಆಡುವುದೇ ಉತ್ತಮ ಎನ್ನುತ್ತಿದ್ದರು. ಅದೇ ತಮ್ಮ ಲೆಕ್ಕಾಚಾರಗಳು ಮೈದಾನದಲ್ಲಿ ಕೆಲಸ ಮಾಡದಿದ್ದಾಗ, ದೊಡ್ಡ ವ್ಯತ್ಯಾಸಕ್ಕೆ ಕಾರಣವಾಗುತ್ತಿತ್ತು. ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ, ವಿಷಯಗಳು ಬಹಳಷ್ಟು ಬದಲಾಗಿವೆ ಎಂದು ತೋರುತ್ತೆ. 18 ವರ್ಷಗಳಲ್ಲಿ ಹನ್ನೆರಡು ನಾಯಕರು ಬದಲಾಗಿದ್ದಾರೆ ಎಂದು ಹೇಳಿದರು. 
ನಾಯಕತ್ವದಲ್ಲಿ ಸ್ಥಿರತೆ ಇಲ್ಲದಿದ್ದಾಗ, ಆಟಗಾರರು ಸೇಫ್ ಆಗಿರುವುದಿಲ್ಲ. ಆಟಗಾರರು ಸುರಕ್ಷಿತವಾಗಿರದಿದ್ದರೆ, ಕಷ್ಟಕರ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಿರುವುದಿಲ್ಲ. ಕೆಲವು ವರ್ಷಗಳ ಹಿಂದಿನವರೆಗೂ, ಇದು ಪಂಜಾಬ್‌ ಕಿಂಗ್ಸ್​ ಫ್ರಾಂಚೈಸಿಯ ದೊಡ್ಡ ಸಮಸ್ಯೆಯಾಗಿತ್ತು" ಎಂದು ಪಠಾಣ್ ಹೇಳಿದ್ದಾರೆ. 
ಪಂಜಾಬ್ ಕಿಂಗ್ಸ್ ತಂಡ ಬಾಲಿವುಡ್​ ನಟಿ ಪ್ರೀತಿ ಜಿಂಟಾ, ಉದ್ಯಮಿಗಳಾದ ಮೋಹಿತ್ ಬರ್ಮನ್ (ಶೇ.48ರಷ್ಟು), ನೆಸ್ ವಾಡಿಯಾ (23) ಮತ್ತು ಕರಣ್ ಪಾಲ್ (6) ಅವರ ಸಹ-ಮಾಲೀಕತ್ವವನ್ನು ಹೊಂದಿದೆ ಎಂಬುದು ಇಲ್ಲಿ ಗಮನಾರ್ಹ,(ಏಜೆನ್ಸೀಸ್).