ಎರಡು ಹಂತಗಳಲ್ಲಿ ಐಪಿಎಲ್ ಆಯೋಜನೆ?: ಅಧ್ಯಕ್ಷ ಅರುಣ್ ಧುಮಾಲ್ ಸುಳಿವು! 
ಕ್ರಿಕೆಟ್

ಎರಡು ಹಂತಗಳಲ್ಲಿ ಐಪಿಎಲ್ ಆಯೋಜನೆ?: ಅಧ್ಯಕ್ಷ ಅರುಣ್ ಧುಮಾಲ್ ಸುಳಿವು!

ನವದೆಹಲಿ: ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್ ಐಪಿಎಲ್ (IPL) ಟೂರ್ನಿ ಎದುರಿಸುತ್ತಿರುವ ಹವಾಮಾನ ಸಂಬಂಧಿತ ಸವಾಲಿನ ಜತೆಗೆ ಆವೃತ್ತಿಯಲ್ಲಿನ ಪಂದ್ಯಗಳ ಸಂಖ್ಯೆ ಹೆಚ್ಚಳಕ್ಕೆ ಹಲವು ಆಯ್ಕೆಗಳನ್ನು ಪರಿಶೀಲಿಸುತ್ತಿರುವ ಬಿಸಿಸಿಐ, ಭವಿಷ್ಯದಲ್ಲಿ ಐಪಿಎಲ್ ಟೂರ್ನಿಯನ್ನು ಎರಡು ಪ್ರತ್ಯೇಕ ಸಮಯದಲ್ಲಿ ಆಯೋಜಿಸಲು ಚಿಂತನೆ ನಡೆಸಿದೆ.
ಮುಂಬರುವ ವರ್ಷಗಳಲ್ಲಿ ಟೂರ್ನಿಯ ಮೊದಲ ಹಂತವನ್ನು ಫೆಬ್ರವರಿ-ಏಪ್ರಿಲ್ ಹಾಗೂ ಎರಡನೇ ಹಂತವನ್ನು ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಸುವ ಸುಳಿವನ್ನು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ (Arun Dhumal) ಸಂದರ್ಶನವೊಂದರಲ್ಲಿ ಬಿಟ್ಟುಕೊಟ್ಟಿದ್ದಾರೆ. ಪ್ರಸ್ತುತ ಐಪಿಎಲ್, ಕ್ರಿಕೆಟ್ ಕ್ಯಾಲೆಂಡರ್‌ನಲ್ಲಿ ಸುಮಾರು ಎರಡು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ. ಮುಂಬರುವ ವರ್ಷಗಳಲ್ಲಿ ಟೂರ್ನಿಯನ್ನು ಒಟ್ಟು 94 ಪಂದ್ಯಗಳಿಗೆ ಹೆಚ್ಚಿಸಿದರೆ, ಇನ್ನೂ ದೀರ್ಘವಾಗಲಿದೆ.
ಇದು ಆಟಗಾರರ ಜತೆಗೆ ಪ್ರೇಕ್ಷಕ ವರ್ಗಕ್ಕೂ ಆಯಾಸವನ್ನುಂಟು ಮಾಡುತ್ತದೆ ಎಂದಿರುವ ಅರುಣ್ ಧುಮಾಲ್, ಈ ಬಗ್ಗೆ ಬಿಸಿಸಿಐ ಇನ್ನೂ ಪರಿಸ್ಥಿತಿಯ ಅಧ್ಯಯನ ಜತೆಗೆ ಪ್ರಸಾರಕರೊಂದಿಗೆ ಸಂಭವನೀಯ ಬದಲಾವಣೆಗಳ ಕುರಿತು ಚರ್ಚಿಸುತ್ತಿದೆ ಎಂದಿದ್ದಾರೆ. ಮೇ ತಿಂಗಳಲ್ಲಿ ಸೂರ್ಯನ ತಾಪಮಾನ ಜತೆಗೆ ಹವಾಮಾನ ವೈಪರೀತ್ಯವು ಕಳವಳಕಾರಿ ಎಂದು ಒಪ್ಪಿಕೊಂಡಿರುವ ಅವರು, ಟೂರ್ನಿಯನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸುವ ಯೋಜನೆ ತಳ್ಳಿಹಾಕಿದ್ದಾರೆ.
ಮೊದಲ ಹಂತವನ್ನು ಫೆಬ್ರವರಿ-ಏಪ್ರಿಲ್ ಹಾಗೂ ದೀಪಾವಳಿಯ ಸಮಯದಲ್ಲಿ ಅಂದರೆ, ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಎರಡನೇ ಹಂತ ಆಯೋಜಿಸುವುದು ಜಾಹೀರಾತುದಾರರ ದೃಷ್ಟಿಕೋನದಿಂದಲೂ ಅತ್ಯುತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಪ್ರಮುಖ ಅಂತಾರಾಷ್ಟ್ರೀಯ ಆಟಗಾರರು ಭಾಗವಹಿಸುವುದರಿಂದ ಬಿಸಿಸಿಐನ ಯಾವುದೇ ನಿರ್ಧಾರವು ಅಂತಾರಾಷ್ಟ್ರೀಯ ಕ್ರಿಕೆಟ್ ಕ್ಯಾಲೆಂಡರ್ ಮೇಲೂ ಪರಿಣಾಮ ಬೀರಲಿದೆ.