ವಿಶ್ವದ ದಿಗ್ಗಜ ಬೌಲರ್‌ಗಳು ಇದುವೆರೆಗೆ ಪರ್ಪಲ್ ಕ್ಯಾಪ್ ಪಡೆದಿಲ್ಲ
- ಮಾರ್ಚ್ 28 ರಿಂದ ಆರಂಭವಾಗಲಿರುವ ಐಪಿಎಲ್
- ವಿಶ್ವದ ದಿಗ್ಗಜ ಬೌಲರ್‌ಗಳು ಇದುವೆರೆಗೆ ಪರ್ಪಲ್ ಕ್ಯಾಪ್ ಪಡೆದಿಲ್ಲ
- ಇವರುಗಳು ಅತ್ಯಧಿಕ ವಿಕೆಟ್ ಪಡೆಯದೇ ಇರಲು ಕಾರಣವೇನು ಗೊತ್ತೆ?
IPL 2026: ಐಪಿಎಲ್ ಅಂದಮೇಲೆ ಅಲ್ಲಿ ಬೌಲರ್‌ಗಳಿಗಿಂತ ಬ್ಯಾಟರ್‌ಗಳದ್ದೇ ಅಬ್ಬರ ಜಾಸ್ತಿ. ಅಂತಹ ಅಬ್ಬರದ ನಡುವೆಯೂ ಅತಿ ಹೆಚ್ಚು ವಿಕೆಟ್ ಕಿತ್ತು ಪರ್ಪಲ್ ಕ್ಯಾಪ್ (Purple Cap) ಪಡೆಯುವುದು ಅಷ್ಟು ಸುಲಭವಲ್ಲ. ಐಪಿಎಲ್ ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಒಂದು ಶಾಕಿಂಗ್ ಸತ್ಯ ಹೊರಬರುತ್ತದೆ.
ಅದೇನೆಂದರೆ, ವಿಶ್ವದ ಶ್ರೇಷ್ಠ ಬ್ಯಾಟರ್‌ಗಳನ್ನು ನಡುಗಿಸಿದ ಐವರು ಸ್ಟಾರ್ ಬೌಲರ್‌ಗಳು ಇದುವರೆಗೂ ಒಂದೇ ಒಂದು ಬಾರಿ ಪರ್ಪಲ್ ಕ್ಯಾಪ್ ಗೆದ್ದಿಲ್ಲ! ವಿಶ್ವ ದರ್ಜೆಯ ಕ್ರಿಕೆಟ್ನಲ್ಲಿ ಶ್ರೇಷ್ಠ ಆಟಗಾರರು ಎನ್ನಿಸಿಕೊಳ್ಳುವ ಇವರು ಐಪಿಎಲ್‌ನಲ್ಲಿ,ಪರ್ಪಲ್ ಕ್ಯಾಪ್ನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿಲ್ಲದ ಬೌಲರ್ಗಳ ಪಟ್ಟಿ ಇಲ್ಲಿದೆ.
1. ಜಸ್ಪ್ರಿತ್ ಬುಮ್ರಾ (ಮುಂಬೈ ಇಂಡಿಯನ್ಸ್)
ಇದು ನಂಬಲು ಸಾಧ್ಯವಾಗದಿದ್ದರೂ ನಿಜ. ವಿಶ್ವದ ನಂಬರ್ 1 ಬೌಲರ್ ಜಸ್ಪ್ರಿತ್ ಬುಮ್ರಾ ಐಪಿಎಲ್‌ನಲ್ಲಿ ಮುಂಬೈಗೆ 5 ಟ್ರೋಫಿ ಗೆದ್ದುಕೊಟ್ಟಿದ್ದಾರೆ. ತಮ್ಮ ಮಾರಕ ಯಾರ್ಕರ್ ಮೂಲಕ ಎದುರಾಳಿಗಳ ಸ್ಟಂಪ್ ಹಾರಿಸುವ ಬುಮ್ರಾ, ಇದುವರೆಗೂ ಪರ್ಪಲ್ ಕ್ಯಾಪ್ ಗೆದ್ದಿಲ್ಲ ಎನ್ನುವುದು ಒಂದು ದೊಡ್ಡ ರಹಸ್ಯ. ಸದಾ ಸ್ಥಿರ ಪ್ರದರ್ಶನ ನೀಡುವ ಬುಮ್ರಾ ಈ ಬಾರಿಯಾದರೂ ಕ್ಯಾಪ್ ಧರಿಸುತ್ತಾರಾ? ಎನ್ನುವುದನ್ನು ಕಾದು ನೋಡಬೇಕು.
2. ಸುನಿಲ್ ನರೈನ್ (ಕೆಕೆಆರ್)
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಿಸ್ಟರಿ ಸ್ಪಿನ್ನರ್ ಸುನಿಲ್ ನರೈನ್ ಎರಡು ಬಾರಿ ಮ್ಯಾನ್ ಆಫ್ ದಿ ಟೂರ್ನಮೆಂಟ್ ಆಗಿದ್ದಾರೆ. ಆದರೆ, ಎಂದಿಗೂ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ನಂಬರ್ 1 ಆಗಿಲ್ಲ. ಇದಕ್ಕೆ ಕಾರಣ ಅವರ ಮಾರಕ ಬೌಲಿಂಗ್ ಆಗಿದೆ. ಬ್ಯಾಟರ್‌ಗಳು ನರೈನ್ ಓವರ್‌ನಲ್ಲಿ ರಿಸ್ಕ್ ತೆಗೆದುಕೊಂಡು ಆಕ್ರಣಕಾರಿಯಾಗಿ ಆಡುವ ಬದಲು ತಮ್ಮ ವಿಕೆಟ್ ಉಳಿದರೆ ಸಾಕೆಂದು ಸುಮ್ಮನೆ ನಿಂತು ಬಿಡುತ್ತಾರೆ. ಹೀಗಾಗಿ ಅವರು ಹೆಚ್ಚಿನ ವಿಕೆಟ್ನ್ನು ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ.
3. ರಶೀದ್ ಖಾನ್ (ಗುಜರಾತ್ ಟೈಟಾನ್ಸ್)
ಟಿ20 ಕ್ರಿಕೆಟ್‌ನ ಮೋಸ್ಟ್ ವಾಂಟೆಡ್ ಬೌಲರ್ ಅಂದರೆ ಅದು ಅಘ್ಫಾನಿಸ್ತಾನದ ರಶೀದ್ ಖಾನ್. ಪ್ರತಿ ಸೀಸನ್‌ನಲ್ಲಿ 15ಕ್ಕೂ ಹೆಚ್ಚು ವಿಕೆಟ್ ಪಡೆಯುವುದು ಇವರಿಗೆ ನೀರು ಕುಡಿದಷ್ಟೇ ಸುಲಭ. 2023ರಲ್ಲಿ 27 ವಿಕೆಟ್ ಪಡೆದು ಪರ್ಪಲ್ ಕ್ಯಾಪ್‌ಗೆ ತೀರಾ ಹತ್ತಿರ ಬಂದಿದ್ದರು. ಆದರೆ ಮೊಹಮ್ಮದ್ ಶಮಿ ಅವರಿಂದಾಗಿ ಆ ಅವಕಾಶ ಕೈತಪ್ಪಿ ಹೋಯಿತು.
4. ರವಿಚಂದ್ರನ್ ಅಶ್ವಿನ್ (ರಾಜಸ್ಥಾನ್ ರಾಯಲ್ಸ್)
ರವಿಚಂದ್ರನ್ ಅಶ್ವಿನ್ ಐಪಿಎಲ್ ಕಂಡ ಒಬ್ಬ ಚಾಣಾಕ್ಷ ಬೌಲರ್. ಐಪಿಎಲ್ ಇತಿಹಾಸದಲ್ಲಿ 170ಕ್ಕೂ ಹೆಚ್ಚು ವಿಕೆಟ್ ಪಡೆದಿರುವ ಅಶ್ವಿನ್, ಸಾರ್ವಕಾಲಿಕ ಶ್ರೇಷ್ಠರ ಪಟ್ಟಿಯಲ್ಲಿದ್ದಾರೆ. ಆದರೆ, ಎಂದಿಗೂ ಪರ್ಪಲ್ ಕ್ಯಾಪ್ ವಿಜೇತರಾಗಿ ಸೀಸನ್ ಮುಗಿಸಿಲ್ಲ. ರನ್ ನಿಯಂತ್ರಿಸುವ ಇವರ ತಂತ್ರಗಾರಿಕೆಯೇ ಇವರಿಗೆ ವಿಕೆಟ್ ಸಂಖ್ಯೆ ಹೆಚ್ಚಾಗದಂತೆ ಮಾಡುತ್ತಿದೆ ಎಂದು ಹೇಳಲಾಗುತ್ತದೆ.
5. ಟ್ರೆಂಟ್ ಬೌಲ್ಟ್ (ರಾಜಸ್ಥಾನ್ ರಾಯಲ್ಸ್)
ಪವರ್‌ಪ್ಲೇನ ಸುಲ್ತಾನ್ ಎಂದೇ ಖ್ಯಾತರಾಗಿರುವ ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್, ಪಂದ್ಯದ ಮೊದಲ ಓವರ್‌ನಲ್ಲೇ ವಿಕೆಟ್ ಪಡೆಯುವ ಅಭ್ಯಾಸ ಹೊಂದಿದ್ದಾರೆ. ಆರಂಭದಲ್ಲಿ ವಿಕೆಟ್ ಬೇಟೆಯಾಡಿದರೂ, ಡೆತ್ ಓವರ್‌ಗಳಲ್ಲಿ ವಿಕೆಟ್ ಪಡೆಯುವಲ್ಲಿ ಇವರು ಇತರರಿಗೆ ಹೋಲಿಸಿದರೆ ಸ್ವಲ್ಪ ಹಿಂದೆ ಉಳಿಯುತ್ತಾರೆ. ಹೀಗಾಗಿ ಪರ್ಪಲ್ ಕ್ಯಾಪ್ ಇಂದಿಗೂ ಇವರಿಂದ ದೂರವೇ ಉಳಿದಿದೆ,(ಏಜನ್ಸೀಸ್).