ಐಪಿಎಲ್ ಆಟಗಾರರ ರಿಟೇನ್ ಪಟ್ಟಿ ಇಂದು ಪ್ರಕಟ: ವೆಂಕಟೇಶ್ ಅಯ್ಯರ್, ಮ್ಯಾಕ್ಸ್ವೆಲ್ ರಿಲೀಸ್ ನಿರೀಕ್ಷೆ
ಬೆಂಗಳೂರು: ಮುಂದಿನ ವರ್ಷದ ಐಪಿಎಲ್ 19ನೇ ಆವೃತ್ತಿಯ (IPL cricket) ಆಟಗಾರರ ಮಿನಿ ಹರಾಜು (MINI auction) ಪ್ರಕ್ರಿಯೆಗೆ ಪೂರ್ವಭಾವಿಯಾಗಿ ಎಲ್ಲ 10 ತಂಡಗಳು ಆಟಗಾರರ ರಿಟೇನ್ (retain) ಪಟ್ಟಿಯನ್ನು ಸಲ್ಲಿಸಲು ಶನಿವಾರ ಅಂತಿಮ ದಿನವಾಗಿದೆ. ಸಂಜೆ 5 ಗಂಟೆಯ ನಂತರ ಎಲ್ಲ ತಂಡಗಳ ಆಟಗಾರರ ರಿಟೇನ್ ಮತ್ತು ರಿಲೀಸ್ ಪಟ್ಟಿ ಬಿಡುಗಡೆಯಾಗಲಿದೆ. ಜತೆಗೆ ಕೆಲ ಆಟಗಾರರ ವರ್ಗಾವಣೆಯೂ ಅಧಿಕೃತವಾಗಿ ಪ್ರಕಟವಾಗುವ ನಿರೀಕ್ಷೆ ಇದೆ.ಮಿನಿ ಹರಾಜಿನ ಕಾರಣ ಈ ಬಾರಿ ಹೆಚ್ಚಿನ ಸ್ಟಾರ್ ಆಟಗಾರರು ತಂಡಗಳಿಂದ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ. ಆದರೆ ಕಳೆದ ಆವೃತ್ತಿಯಲ್ಲಿ ನಿರೀಕ್ಷೆಗೆ ತಕ್ಕ ನಿರ್ವಹಣೆ ತೋರದ ಕೆಲ ಸ್ಟಾರ್ ಮತ್ತು ಅನುಭವಿ-ಯುವ ಆಟಗಾರರು ಈ ಬಾರಿ ರಿಲೀಸ್ ಆಗುವ ನಿರೀಕ್ಷೆ ಇದೆ.
ರಿಟೇನ್ ನಿಯಮವೇನು?: ಈ ಬಾರಿ ಮೆಗಾ ಹರಾಜು ಇರಲ್ಲ. ಮಿನಿ ಹರಾಜು ಮಾತ್ರ ನಡೆಯಲಿದೆ. ಹೀಗಾಗಿ ಎಲ್ಲ 10 ತಂಡಗಳಿಗೆ ಇಂತಿಷ್ಟೇ ಆಟಗಾರರನ್ನು ರಿಟೇನ್ ಮಾಡಬೇಕು ಅಥವಾ ಇಷ್ಟು ಆಟಗಾರರನ್ನು ರಿಲೀಸ್ ಮಾಡಬೇಕೆಂಬ ಇತಿಮಿತಿಗಳಿಲ್ಲ. ಐಪಿಎಲ್ ನಿಯಮ ಪ್ರಕಾರ ತಂಡವೊಂದು ಗರಿಷ್ಠ 25 ಆಟಗಾರರನ್ನು ಹೊಂದಬಹುದು ಮತ್ತು ಇದಕ್ಕೆ ಒಟ್ಟಾರೆ ಗರಿಷ್ಠ 120 ಕೋಟಿ ರೂ. ವ್ಯಯಿಸಬಹುದಾಗಿದೆ. ಇದರಲ್ಲಿ ಆಟಗಾರರ ರಿಟೇನ್ಗೆ ವ್ಯಯಿಸುವ ಹಣವು, ಒಟ್ಟು ಮೊತ್ತದಿಂದ ಕಡಿತವಾಗಲಿದ್ದು, ಆ ಬಾಕಿ ಹಣವನ್ನು ಹರಾಜಿನಲ್ಲಿ ಆಟಗಾರರ ಖರೀದಿಗೆ ಬಳಸಿಕೊಳ್ಳಬಹುದು.
ಪ್ರಮುಖ ರಿಲೀಸ್ ಸಾಧ್ಯತೆ (ರೂಪಾಯಿಗಳಲ್ಲಿ)
ವೆಂಕಟೇಶ್ ಅಯ್ಯರ್ (ಕೆಕೆಆರ್, 23.75 ಕೋಟಿ), ದೀಪಕ್ ಚಹರ್ (ಮುಂಬೈ, 9.25 ಕೋಟಿ), ರವಿ ಬಿಷ್ಣೋಯಿ (ಲಖನೌ, 11 ಕೋಟಿ), ಡೇವಿಡ್ ಮಿಲ್ಲರ್ (ಲಖನೌ, 7.5 ಕೋಟಿ), ಅನ್ರಿಚ್ ನೋಕಿಯಾ (ಕೆಕೆಆರ್, 6.5 ಕೋಟಿ), ಲಿಯಾಮ್ ಲಿವಿಂಗ್ಸ್ಟೋನ್ (ಆರ್ಸಿಬಿ, 8.75 ಕೋಟಿ), ಗ್ಲೆನ್ ಮ್ಯಾಕ್ಸ್ವೆಲ್ (ಪಂಜಾಬ್, 4.20 ಕೋಟಿ), ವಿಲ್ ಜಾಕ್ಸ್ (ಮುಂಬೈ, 5.25 ಕೋಟಿ), ಜೇಕ್ ಫ್ರೇಸರ್ ಮೆಕ್ಗುರ್ಕ್ (ಡೆಲ್ಲಿ, 9 ಕೋಟಿ), ಕ್ವಿಂಟನ್ ಡಿಕಾಕ್ (ಕೆಕೆಆರ್, 3.6 ಕೋಟಿ), ಮಹೀಶ್ ತೀಕ್ಷಣ (ರಾಜಸ್ಥಾನ, 4.40 ಕೋಟಿ), ಡೆವೊನ್ ಕಾನ್ವೇ (ಸಿಎಸ್ಕೆ, 6.25 ಕೋಟಿ), ರಚಿನ್ ರವೀಂದ್ರ (ಸಿಎಸ್ಕೆ, 4 ಕೋಟಿ), ಕರುಣ್ ನಾಯರ್ (ಡೆಲ್ಲಿ, 50 ಲಕ್ಷ), ಮಯಾಂಕ್ ಅಗರ್ವಾಲ್ (ಆರ್ಸಿಬಿ, 1 ಕೋಟಿ).
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.
ತಂಡಗಳಿಂದ ರಿಲೀಸ್ ಆಗುವ ಮತ್ತು ಹರಾಜಿಗೆ ಹೆಸರು ನೋಂದಾಯಿಸಿಕೊಳ್ಳುವ ಹೊಸ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್ 16ಕ್ಕೆ ಅಬುಧಾಬಿಯಲ್ಲಿ ನಡೆಯಲಿದೆ. ಸತತ 3ನೇ ವರ್ಷ ವಿದೇಶಿ ನೆಲದಲ್ಲಿ ಹರಾಜು ನಡೆಯಲಿದೆ.
ಚೆನ್ನೈ ಸೂಪರ್ಕಿಂಗ್ಸ್ ತಂಡದ ರವೀಂದ್ರ ಜಡೇಜಾ ಮತ್ತು ರಾಜಸ್ಥಾನ ರಾಯಲ್ಸ್ ತಂಡದ ಸಂಜು ಸ್ಯಾಮ್ಸನ್ ಅವರ ಬಹುನಿರೀಕ್ಷಿತ ವರ್ಗಾವಣೆ ಪ್ರಕ್ರಿಯೆಯೂ ಶನಿವಾರ ಅಧಿಕೃತವಾಗಿ ಪ್ರಕಟವಾಗುವ ಸಾಧ್ಯತೆ ಇದೆ. ಜಡೇಜಾ ಜತೆಗೆ ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕರನ್ ಕೂಡ ರಾಜಸ್ಥಾನ ತಂಡಕ್ಕೆ ವರ್ಗಾವಣೆಯಾಗಲಿದ್ದಾರೆ ಎನ್ನಲಾಗಿದೆ. ಆದರೆ ರಾಜಸ್ಥಾನ ತಂಡದಲ್ಲಿ ಈಗಾಗಲೆ 8 ವಿದೇಶಿ ಆಟಗಾರರ ಕೋಟಾ ಭರ್ತಿಯಾಗಿರುವುದರಿಂದ, ಶನಿವಾರ ಕೆಲ ವಿದೇಶಿ ಆಟಗಾರರನ್ನು ರಿಲೀಸ್ ಮಾಡಿದ ಬಳಿಕವೇ ಜಡೇಜಾ, ಕರನ್ರನ್ನು ಸೇರಿಸಿಕೊಂಡ ಬಗ್ಗೆ ಪ್ರಕಟಿಸಲಿದೆ ಎನ್ನಲಾಗಿದೆ. ಇದಲ್ಲದೆ ಜಡೇಜಾ ವರ್ಗಾವಣೆಯೊಂದಿಗೆ ರಾಜಸ್ಥಾನ ತಂಡದ ನಾಯಕತ್ವವನ್ನೂ ಕೇಳಿದ್ದಾರೆ ಎಂದೂ ವರದಿಯಾಗಿದೆ. ಸ್ಯಾಮ್ಸನ್-ಜಡೇಜಾ/ಕರನ್ ವಿನಿಮಯವು ಉಭಯ ತಂಡಗಳ ತಲಾ 18 ಕೋಟಿ ರೂ. ಮೊತ್ತವನ್ನು ಒಳಗೊಂಡಿದೆ ಎನ್ನಲಾಗಿದೆ. ಜಡೇಜಾ ರಾಜಸ್ಥಾನ ಮೂಲಕವೇ ಐಪಿಎಲ್ಗೆ ಪದಾರ್ಪಣೆ ಮಾಡಿದ್ದರು ಮತ್ತು ಚೊಚ್ಚಲ ಆವೃತ್ತಿಯ ಚಾಂಪಿಯನ್ ತಂಡದ ಪ್ರಮುಖ ಭಾಗವಾಗಿದ್ದರು.
ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿರುವ ಅನುಭವಿ ವೇಗಿ ಮೊಹಮದ್ ಶಮಿ ಲಖನೌ ಸೂಪರ್ಜೈಂಟ್ಸ್ಗೆ ವರ್ಗಾವಣೆಯಾಗುವ ಸಾಧ್ಯತೆ ಇದೆ. ಕಳೆದ ವರ್ಷದ ಹರಾಜಿನಲ್ಲಿ ಸನ್ರೈಸರ್ಸ್ 10 ಕೋಟಿ ರೂ. ವ್ಯಯಿಸಿ ಶಮಿ ಅವರನ್ನು ಸೇರ್ಪಡೆಗೊಳಿಸಿತ್ತು. ಉಭಯ ತಂಡಗಳ ನಡುವೆ ಈಗಾಗಲೆ ವರ್ಗಾವಣೆ ಮಾತುಕತೆ ಮುಗಿದಿದೆ ಎಂದು ಹೇಳಲಾಗುತ್ತಿದೆ. ಜತೆಗೆ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಮುಂಬೈನಿಂದ ಲಖನೌಗೆ ಮತ್ತು ಸ್ಪಿನ್ನರ್ ಮಯಾಂಕ್ ಮಾರ್ಕಂಡೆ ಕೆಕೆಆರ್ನಿಂದ ಮುಂಬೈಗೆ ವರ್ಗಾವಣೆಯಾಗುವ ಸಾಧ್ಯತೆಗಳಿವೆ.