ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ 
ಕ್ರಿಕೆಟ್

ನಾವು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡ್ತೀವಿ ಆದ್ರೆ... KSCA ಮುಂದೆ ಒಂದು ಕಂಡೀಷನ್​ ಇಟ್ಟ RCB!

ಪ್ರಮುಖ ಮುಖ್ಯಾಂಶಗಳು

  • ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಅಭಿಮಾನಿಗಳಿಗೆ ಒಂದು ಗುಡ್​ ನ್ಯೂಸ್
  • ತವರಿನಲ್ಲಿ ನಮ್ಮ ಆರ್​ಸಿಬಿ ಪಂದ್ಯಗಳನ್ನು ನೋಡುವುದಕ್ಕೆ ಆಗುವುದಿಲ್ಲವೇ ಎಂಬ ಚಿಂತೆ ಬೇಡ
  • ಮತ್ತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್​ ಕಲರವ ಶುರುವಾಗಲಿದೆ
  • ಅಧಿಕೃತವಾಗಿ ಆರ್​ಸಿಬಿಯೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುವುದಾಗಿ ಹೇಳಿದೆ
ಬೆಂಗಳೂರು: ಕಳೆದ 18 ವರ್ಷಗಳಿಂದ ಈ ಸಲ ಕಪ್​ ನಮ್ದೆ ಅಂತಾ ಹೇಳಿ ಹೇಳಿ ಬೇಸರಗೊಂಡಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ( RCB ) ತಂಡದ ಅಭಿಮಾನಿಗಳಿಗೆ 2025 ಮರೆಯಲಾಗದ ವರ್ಷ. ಚೊಚ್ಚಲ ಐಪಿಎಲ್​ ಟ್ರೋಫಿ ಗೆದ್ದ ಖುಷಿ ಒಂದೆಡೆಯಾದರೆ, ಆ ಗೆಲುವಿನ ಸಂಭ್ರಮನ್ನು ಕಸಿದುಕೊಂಡ ಮಹಾ ದುರಂತ ಇನ್ನೊಂದೆಡೆ. ಕಪ್​ ಗೆದ್ದ ಖುಷಿಯಲ್ಲಿ ಸಂಭ್ರಮಾಚರಣೆ ಮಾಡುವ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದು ಕಹಿ ನೆನಪಾಗಿಯೇ ನಮ್ಮ ನಡುವೆ ಉಳಿದಿದೆ. ಈ ಒಂದು ಕಾರಣಕ್ಕೆ ಈ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್​ ಪಂದ್ಯಗಳನ್ನು ನಡೆಸದಿರಲು ಸರ್ಕಾರ ನಿರ್ಧಾರ ಮಾಡಿತು. ಇದರಿಂದ ಅಸಂಖ್ಯಾತ ಆರ್​ಸಿಬಿ ಅಭಿಮಾನಿಗಳಿಗೆ ಸಖತ್​ ಬೇಜಾರಾಗಿತ್ತು. ನೆಚ್ಚಿನ ತಂಡದ ಆಟವನ್ನು ನೇರವಾಗಿ ಕಣ್ತುಂಬಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿ ಅಭಿಮಾನಿಗಳು ಮುಳುಗಿದ್ದರು. ಆದರೆ, ಆ ಚಿಂತೆ ಇನ್ನು ಬೇಡ. ಅಧಿಕೃತವಾಗಿ ಆರ್​ಸಿಬಿಯೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುವುದಾಗಿ ಹೇಳಿದೆ. ಆದರೆ, ಒಂದಿಷ್ಟು ಷರತ್ತುಗಳನ್ನು ಸಹ ವಿಧಿಸಿದೆ. 
ಅಯ್ಯೋ ತವರಿನಲ್ಲಿ ನಮ್ಮ ಆರ್​ಸಿಬಿ ಪಂದ್ಯಗಳನ್ನು ನೋಡುವುದಕ್ಕೆ ಆಗುವುದಿಲ್ಲವೇ ಎಂಬ ಚಿಂತೆಯನ್ನು ಆರ್​ಸಿಬಿ ಫ್ರಾಂಚೈಸಿ ನೀಡಿರುವ ಗುಡ್​ ನ್ಯೂಸ್​ ಮರೆ ಮಾಡಲಿದೆ. ಅಷ್ಟಕ್ಕೂ ಆ ಗುಡ್​ ನ್ಯೂಸ್​ ಏನು ಅಂತಿರಾ? ನಾವು ಮತ್ತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುತ್ತೇವೆ ಎಂದು ಆರ್​ಸಿಬಿ ಅಧಿಕೃತವಾಗಿ ಹೇಳಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ​​(ಕೆಎಸ್‌ಸಿಎ) ಗೆ ಪತ್ರ ಬರೆದಿರುವ ಆರ್​ಸಿಬಿ ಫ್ರಾಂಚೈಸಿ, ಒಂದು ಪ್ರಸ್ತಾಪವನ್ನು ಮುಂದಿಟ್ಟಿದೆ. ಅದೇನೆಂದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಚಲನಾವಲನವನ್ನು ಮೇಲ್ವಿಚಾರಣೆ ಮಾಡಲು, ಸರತಿ ಸಾಲು ವ್ಯವಸ್ಥೆಗಳನ್ನು ನಿಯಂತ್ರಿಸಲು ಮತ್ತು ಪ್ರವೇಶ ಮತ್ತು ನಿರ್ಗಮನ ದ್ವಾರದ ರಿಯಲ್​ ಟೈಮ್​ ಟ್ರ್ಯಾಕಿಂಗ್ ಮೂಲಕ ಅನಧಿಕೃತ ಪ್ರವೇಶವನ್ನು ತಡೆಯಲು ಸುಧಾರಿತ ಕಣ್ಗಾವಲು ತಂತ್ರಜ್ಞಾನವನ್ನು ನಿಯೋಜಿಸುವ ಯೋಜನೆಯನ್ನು ಕೆಎಸ್​ಸಿಎಗೆ ಆರ್​ಸಿಬಿ ವಿವರಿಸಿದೆ. ಈ ಒಂದು ಕ್ರಮವು ಪಂದ್ಯ ನಡೆಯುವ ದಿನ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯುವ ಉದ್ದೇಶವನ್ನು ಹೊಂದಿದೆ ಎಂದು ಆರ್‌ಸಿಬಿ ಹೇಳಿದೆ. ವಿಶೇಷವಾಗಿ ಐಪಿಎಲ್ ಪಂದ್ಯಗಳು ಮತ್ತು ಇತರ ಪ್ರಮುಖ ಕಾರ್ಯಕ್ರಮಗಳ ಸಮಯದಲ್ಲಿ ಹೆಚ್ಚಿನ ಜನ ದಟ್ಟನೆ ಸೇರಿದಾಗ ಯಾವುದೇ ಅನಾಹುತ ಸಂಭವಿಸಬಾರದು ಅನ್ನೋದು ಆರ್​ಸಿಬಿಯ ಆಶಯವಾಗಿದೆ.
ಆರ್‌ಸಿಬಿ ಪ್ರಕಾರ, ಕೆಎಸ್​ಸಿಎ ಮುಂದೆ ಪ್ರಸ್ತಾಪ ಮಾಡಿರುವ AI ಸಿಸ್ಟಮ್​, ಯಾವುದೇ ಹಿಂಸೆ, ಒಳನುಸುಳುವಿಕೆ ಮತ್ತು ಅನಧಿಕೃತ ಪ್ರವೇಶದಂತಹ ಘಟನೆಗಳನ್ನು ಪತ್ತೆಹಚ್ಚಲು ರಿಯಲ್​ ಟೈಮ್​ ವಿಡಿಯೋ ವಿಶ್ಲೇಷಣೆಯನ್ನು ನೀಡುತ್ತದೆ. ಇದರಿಂದ, ಸಂಭವನೀಯ ಅಪಘಾತವನ್ನು ಪತ್ತೆಹಚ್ಚಬಹುದು. ಅಲ್ಲದೆ, ಏನಾದರೂ ಆದಲ್ಲಿ ತನಿಖೆಗೂ ಸಹಕಾರಿಯಾಗಲಿದೆ. ಪಂದ್ಯಗಳ ಸಮಯದಲ್ಲಿ ಯಾವುದಾದರೂ ಒಂದು ನಿರ್ಧಾರ ತೆಗೆದುಕೊಳ್ಳಬೇಕಾದರೆ ಈ ತಂತ್ರಜ್ಞಾನದ ವಿಶ್ಲೇಷಣೆಯು ಕೂಡ ಸಹಾಯ ಮಾಡುತ್ತದೆ. 
ಇನ್ನು ಈ ಸುಧಾರಿತ ಎಐ ಕ್ಯಾಮೆರಾ ಕಣ್ಗಾವಲು, ಕೆಎಸ್‌ಸಿಎ ಮತ್ತು ಪೊಲೀಸ್ ಅಧಿಕಾರಿಗಳಿಗೆ ಜನಸಂದಣಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು, ಪ್ರೇಕ್ಷಕರು ಶಿಸ್ತುಬದ್ಧ ಸರತಿ ಸಾಲಿನಲ್ಲಿ ನಿಲ್ಲುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಒಟ್ಟಾರೆ ಅಭಿಮಾನಿಗಳ ಸುರಕ್ಷತೆಯನ್ನು ಗಮನಾರ್ಹವಾಗಿ ಹೆಚ್ಚಿಸಲು ನೆರವು ನೀಡುತ್ತದೆ ಎಂದು ಆರ್​ಸಿಬಿ ಫ್ರಾಂಚೈಸಿ ಹೇಳಿದೆ.

ವೆಚ್ಚ ನಾವೇ ಭರಿಸುತ್ತೇವೆ

ಇನ್ನು ಈ ಯೋಜನೆಗೆ ಸುಮಾರು 4.5 ಕೋಟಿ ರೂ. ಖರ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ. ಈ ಯೋಜನೆಯ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ RCB ಹೇಳಿದೆ. ಅಲ್ಲದೆ, ಈ ಯೋಜನೆಗಾಗಿ ಭಾರತದಾದ್ಯಂತ ಹಲವಾರು ರಾಜ್ಯ ಪೊಲೀಸ್ ಪಡೆಗಳೊಂದಿಗೆ ನಿಕಟವಾಗಿ ಕೆಲಸ ಮಾಡಿರುವ ತಂತ್ರಜ್ಞಾನ ಸಂಸ್ಥೆ ಸ್ಟಾಕ್ ಜೊತೆ ಆರ್​ಸಿಬಿ ಫ್ರಾಂಚೈಸಿ ಪಾಲುದಾರಿಕೆಯನ್ನು ಹೊಂದಿದೆ. ಈ ಕಣ್ಗಾವಲು ವ್ಯವಸ್ಥೆಯು ಪೊಲೀಸ್​ ತನಿಖೆಗಳಿಗೆ ಸಹಾಯ ಮಾಡಲು ಮತ್ತು ತ್ವರಿತ, ಹೆಚ್ಚು ನಿಖರವಾದ ನಿರ್ಧಾರ ತೆಗೆದುಕೊಳ್ಳಲು ನೆರವು ನೀಡುತ್ತದೆ. ಈ ವ್ಯವಸ್ಥೆಯು ವಿಡಿಯೋ, ಆಡಿಯೋ ಮತ್ತು ಟೆಕ್ಸ್ಟ್​ ಡೇಟಾವನ್ನು ವಿಶ್ಲೇಷಿಸುತ್ತದೆ. 
ಇದರ ನಡುವೆ ಈ ಹಿಂದೆಯೇ ಸರ್ಕಾರ ಹೇಳಿದಂತಹ ಷರತ್ತುಗಳನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್​ಸಿಎ) ಅನುಷ್ಠಾನಗೊಳಿಸುತ್ತಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಿನೋವೇಶನ್ ಕೆಲಸಗಳು ನಡೆಯುತ್ತಿವೆ. ಅಗ್ನಿಶಾಮಕ ದಳದ ಷರತ್ತುಗಳಂತೆ ಪ್ರೇಕ್ಷಕರು ಪ್ರವೇಶ ನೀಡುವ ದ್ವಾರಗಳ ಅಗಲೀಕರಣ ಮಾಡಲಾಗುತ್ತಿದೆ. ಎಲ್ಲಾ ಷರತ್ತುಗಳನ್ನು ಕಾರ್ಯಗತಗೊಳಿಸಲು ಕೆಎಸ್​ಸಿಎ ಮುಂದಾಗಿದ್ದು, ರಿನೋವೇಶನ್​ ಕೆಲಸ ಮುಗಿದ ನಂತರ ಅಗ್ನಿಶಾಮಕ‌ದಳ ಹಾಗೂ ಪೊಲೀಸ್ ಇಲಾಖೆ ಮತ್ತೆ ಪರಿಶೀಲನೆ ನಡೆಸಲಿದೆ. ಈ ವೇಳೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಕಂಡುಬಂದರೆ ಚಿನ್ನಸ್ವಾಮಿಯಲ್ಲಿ ಕ್ರಿಕೆಟ್​ ಪಂದ್ಯಗಳನ್ನು ನಡೆಸಲು ಅನುಮತಿ ಸಿಗಲಿದೆ. 

ಕಾಲ್ತುಳಿತ ದುರಂತ 

ಕ್ರಿಕೆಟ್ ಮೇಲಿನ ಉತ್ಸಾಹ ಜೀವಗಳನ್ನು ಬಲಿ ತೆಗೆದುಕೊಂಡಿತು. ಹೌದು, ಜೂನ್ 4 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿತು. 18 ವರ್ಷಗಳ ಬಳಿಕ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡ ಚೊಚ್ಚಲ ಐಪಿಎಲ್ ಟ್ರೋಫಿ ಜಯಿಸಿತು. ಇದೇ ಖುಷಿಯಲ್ಲಿ ವಿಜಯೋತ್ಸವ ಆಚರಿಸಲು ಆರ್​ಸಿಬಿ ತಂಡವು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬರುವ ಮುಂಚೆಯೇ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿತು. ಕ್ರೀಡಾಂಗಣಕ್ಕೆ ಆಟಗಾರರು ಬರುತ್ತಾರೆ ಅನ್ನೋ ಸುದ್ದಿ ಕೇಳಿದ ಕ್ರೀಡಾಭಿಮಾನಿಗಳು ಒಮ್ಮೆಲ್ಲೆ ಸ್ಟೇಡಿಂಯಂನತ್ತ ನುಗ್ಗಿದ್ದರಿಂದ ಕಾಲ್ತುಳಿತ ಸಂಭವಿಸಿ 11 ಜನ ಮೃತಪಟ್ಟರು. ಅಲ್ಲದೆ, 47 ಮಂದಿ ಗಾಯಗೊಂಡರು. ಜನರು ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಉಚಿತ ಪಾಸ್‌ಗಳು ದೊರೆಯುತ್ತದೆ ಎಂಬ ವದಂತಿ ಹಾಗೂ ದೊಡ್ಡ ಜನಸಂದಣಿ ಮತ್ತು ಸರಿಯಾದ ನಿರ್ವಹಣೆಯ ಕೊರತೆಯಿಂದ ಕಾಲ್ತುಳಿತ ಸಂಭವಿಸಿತು, (ಏಜೆನ್ಸೀಸ್​).