ರಾಜ್ಯ ಸರ್ಕಾರ ಅನುಮತಿ ನೀಡಿದ್ದರೂ ಆರ್​ಸಿಬಿ ತಂಡ ಬೆಂಗಳೂರಿನಲ್ಲಿ ಆಡುವುದು ಇನ್ನೂ ಅನಿಶ್ಚಿತ! 
ಕ್ರಿಕೆಟ್

ರಾಜ್ಯ ಸರ್ಕಾರ ಅನುಮತಿ ನೀಡಿದ್ದರೂ ಆರ್​ಸಿಬಿ ತಂಡ ಬೆಂಗಳೂರಿನಲ್ಲಿ ಆಡುವುದು ಇನ್ನೂ ಅನಿಶ್ಚಿತ!

ಬೆಂಗಳೂರು: ಹಾಲಿ ಚಾಂಪಿಯನ್​ ಆರ್​ಸಿಬಿ (RCB) ತಂಡ ಮುಂಬರುವ ಐಪಿಎಲ್​ (IPL) 19ನೇ ಆವೃತ್ತಿಯಲ್ಲಿ ತನ್ನ ತವರಿನ ಪಂದ್ಯಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲು ರಾಜ್ಯ ಸರ್ಕಾರ ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲಿ ಷರತ್ತು ಬದ್ಧ ಒಪ್ಪಿಗೆ ನೀಡಿತ್ತು. ಆದರೂ ಆರ್​ಸಿಬಿ ಫ್ರಾಂಚೈಸಿ ಬೆಂಗಳೂರಿನಲ್ಲಿ ತನ್ನ ಪಂದ್ಯಗಳನ್ನು ಆಡಲು ಇನ್ನೂ ಹಿಂದೇಟು ಹಾಕುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಸ್ಥೆ (ಕೆಎಸ್​ಸಿಎ) ನ್ಯಾ.ಡಿ. ಕುನ್ಹಾ ವರದಿಯ ಅನುಷ್ಠಾನಕ್ಕಾಗಿ ಈಗಾಗಲೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಮಗಾರಿಯನ್ನು ನಡೆಸುತ್ತಿದ್ದು, ಮಾರ್ಚ್​ 15ರೊಳಗೆ ಎಲ್ಲ ಕೆಲಸವನ್ನು ಮುಗಿಸುವ ವಿಶ್ವಾಸವನ್ನೂ ಹೊಂದಿದೆ. ಐಪಿಎಲ್​ ಪಂದ್ಯಗಳಿಗೆ ರಾಜ್ಯ ಸರ್ಕಾರದಿಂದ ಅನುಮತಿ ಕೊಡಿಸುವುದರೊಂದಿಗೆ ಕೆಎಸ್​ಸಿಎ ಜವಾಬ್ದಾರಿ ಮುಗಿದಿದೆ. ಇನ್ನು ಪಂದ್ಯ ಆಡುವ ತೀರ್ಮಾನ ತೆಗೆದುಕೊಳ್ಳಬೇಕಾಗಿರುವುದು ಆರ್​ಸಿಬಿ ಫ್ರಾಂಚೈಸಿ ಆಗಿದೆ. ಆದರೆ ಷರತ್ತುಬದ್ಧ ಒಪ್ಪಿಗೆ ನೀಡಿರುವುದಕ್ಕೆ ಆರ್​ಸಿಬಿ ಅಸಮಾಧಾನ ಹೊಂದಿದೆ. ಅದು ಬೇಷರತ್​ ಒಪ್ಪಿಗೆಯ ನಿರೀಕ್ಷೆಯಲ್ಲಿತ್ತು ಎನ್ನಲಾಗಿದೆ.

ಇದರಿಂದಾಗಿ ಆರ್​ಸಿಬಿ ಫ್ರಾಂಚೈಸಿ, ಛತ್ತೀಸ್​ಗಢದ ರಾಯ್ಪುರದಲ್ಲಿ ತನ್ನ ತವರಿನ ಪಂದ್ಯಗಳನ್ನು ಆಡುವ ಬಗ್ಗೆ ಒಲವು ಹೊಂದಿದೆ ಎನ್ನಲಾಗಿದೆ. ಐಪಿಎಲ್​ ಮಾರ್ಚ್​ 26ಕ್ಕೆ ಶುರುವಾಗಬೇಕಿದೆ. ಆದರೆ ಬಿಸಿಸಿಐ ಇನ್ನೂ ಪಂಚರಾಜ್ಯಗಳ ಚುನಾವಣಾ ದಿನಾಂಕಕ್ಕೆ ಕಾಯುತ್ತಿರುವುದರಿಂದ ಐಪಿಎಲ್​ ವೇಳಾಪಟ್ಟಿ ಬಿಡುಗಡೆಯನ್ನು ವಿಳಂಬಗೊಳಿಸುತ್ತಿದೆ.