IPL: ಆರ್‌ಸಿಬಿ-ಗುಜರಾತ್ ನಡುವೆ ಮೊದಲ ಕ್ವಾಲಿಫೈಯರ್
ಧರ್ಮಶಾಲಾ: ಸತತ ಎರಡನೇ ವರ್ಷವೂ ಪ್ರಶಸ್ತಿ ಒಲಿಸಿಕೊಳ್ಳುವುದರ ಜತೆಗೆ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವತ್ತ ದಿಟ್ಟ ಹೆಜ್ಜೆಯಿಟ್ಟಿರುವ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಬಲಿಷ್ಠ ಬೌಲಿಂಗ್ ವಿಭಾಗವನ್ನು ಹೊಂದಿರುವ ಗುಜರಾತ್ ಟೈಟಾನ್ಸ್ ತಂಡಗಳು ಐಪಿಎಲ್-19ರ ಮೊದಲ ಕ್ವಾಲಿಫೈಯರ್‌ನಲ್ಲಿ ಮುಖಾಮುಖಿ ಆಗಲಿವೆ. ಮಂಗಳವಾರ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್‌ಗೇರಿದರೆ, ಸೋತವರಿಗೆ ಪ್ರಶಸ್ತಿ ಸುತ್ತಿಗೇರಲು ಮತ್ತೊಂದು ಅವಕಾಶ ಸಿಗಲಿದೆ.
ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ಎರಡೂ ತಂಡಗಳು ಲೀಗ್ ಅಂಕಪಟ್ಟಿಯಲ್ಲಿ ಆಡಿದ 14ರಲ್ಲಿ ತಲಾ 18 ಅಂಕದ ಸಮಬಲ ಸಾಧಿಸಿದರೂ, ರನ್‌ರೇಟ್‌ನಲ್ಲಿ ಅಗ್ರಸ್ಥಾನ ಪಡೆದ ರಜತ್ ಪಾಟೀದಾರ್ ಬಳಗ ಕೊಂಚ ಮೇಲುಗೈ ಹೊಂದಿದೆ. ಆದರೆ, ಪ್ಲೇಆಫ್ ಹಂತದಲ್ಲಿ ಒತ್ತಡವನ್ನು ಸಮರ್ಥವಾಗಿ ನಿಭಾಯಿಸುವ ತಂಡ ಗೆಲುವಿನ ಫೇ ವರಿಟ್ ಎನಿಸಲಿದೆ.
ಕ್ವಾಲಿಫೈಯರ್-1ರಲ್ಲಿ ಸೋತ ತಂಡ ಪ್ರಶಸ್ತಿ ಸುತ್ತಿಗೇರಲು ಮತ್ತೊಂದು ಅವಕಾಶ ಪಡೆದರೂ, ಪ್ರಯಾಣ ತಾಪತ್ರಯ ನಿಭಾಯಿಸುವ ಸವಾಲು ಆಟಗಾರರ ಮುಂದಿರಲಿದೆ. ಧರ್ಮಶಾಲಾದಲ್ಲಿ ಸೋತ ತಂಡ, ಕ್ವಾಲಿಫೈಯರ್-2ರಲ್ಲಿ (ಮೇ29) ಆಡಲು ಮುಲ್ಲನ್‌ಪುರಕ್ಕೆ ತೆರಳಬೇಕಿದೆ. ಫೈನಲ್‌ಗೇರಿದರೆ, ಒಂದು ದಿನದ ಅಂತರದಲ್ಲಿ ಮುಲ್ಲನ್‌ಪುರದಿಂದ ಅಹಮದಾಬಾದ್‌ಗೆ (ಮೇ30) ಪ್ರಯಾಣ ಬೆಳೆಸಬೇಕು. ಇದು ಆಟಗಾರರಿಗೆ ದೈಹಿಕವಾಗಿ ಹೆಚ್ಚು ಒತ್ತಡ ಉಂಟುಮಾಡಲಿದೆ. ಕ್ವಾಲಿಫೈಯರ್-1ರಲ್ಲಿ ಗೆದ್ದ ತಂಡಕ್ಕೆ ಫೈನಲ್ ಪಂದ್ಯಕ್ಕೆ ಮುನ್ನ ಐದು ದಿನಗಳ ವಿಶ್ರಾಂತಿ ಸಿಗಲಿದೆ.
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್ .