ಕಪಿಲ್ ದೇವ್ ಬಳಗ 1983ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಬಳಿಕ ಭಾರತೀಯ ಕ್ರಿಕೆಟ್ ಶ್ರೀಮಂತವಾಗುತ್ತ ಬಂದಿತ್ತು. 2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಶುರುವಾದ ಬಳಿಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಶ್ರೀಮಂತಿಕೆ ಯಾರೂ ನಿರೀಕ್ಷಿಸಿರದ ಮಟ್ಟಕ್ಕೆ ಬೆಳೆದಿತ್ತು. ಜತೆಗೆ ಭಾರತೀಯ ಕ್ರಿಕೆಟ್ ಶ್ರೀಮಂತಿಕೆಗೆ ವಿಶ್ವದ ಇತರ ಎಲ್ಲ ದೇಶಗಳ ಕ್ರಿಕೆಟ್ ಮಂಡಳಿಗಳು ತಲೆಬಾಗಿದ್ದವು ಮತ್ತು ಐಪಿಎಲ್ಗೆ ತನ್ನ ಆಟಗಾರರನ್ನು ಬಿಟ್ಟುಕೊಟ್ಟಿದ್ದು ಮಾತ್ರವಲ್ಲದೆ, ಆ ಸಮಯದಲ್ಲಿ ದ್ವಿಪಕ್ಷೀಯ ಸರಣಿ ನಿಗದಿಪಡಿಸುವುದನ್ನು ಸಾಧ್ಯವಾದಷ್ಟು ತಪ್ಪಿಸಿಕೊಂಡಿತು.
ವಿಶ್ವ ಕ್ರಿಕೆಟ್ನಲ್ಲಿ ಐಪಿಎಲ್ ಸೃಷ್ಟಿಸಿದ ಹವಾ ಅಷ್ಟು ಪರಿಣಾಮಕಾರಿಯಾಗಿತ್ತು. ಬಿಸಿಸಿಐ ಪಾಲಿಗೆ ‘ಚಿನ್ನದ ಮೊಟ್ಟೆ ಇಡುವ ಕೋಳಿ’ ಎನಿಸಿದ ಐಪಿಎಲ್, ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಇದೀಗ ಒಮ್ಮೆಲೆ ಐಪಿಎಲ್ ಬ್ರ್ಯಾಂಡ್ ಮೌಲ್ಯ ಕುಸಿತ ಕಂಡಿರುವ ವರದಿ ಬಂದಿರುವುದು ಕ್ರಿಕೆಟ್ ಪ್ರೇಮಿಗಳಿಗೆ ಶಾಕ್ ನೀಡಿದೆ. ವಿಶ್ವದ ಅಗ್ರ ಬ್ರ್ಯಾಂಡ್ ಮೌಲ್ಯಮಾಪನ ಸಂಸ್ಥೆಯಾಗಿರುವ ‘ಬ್ರ್ಯಾಂಡ್ ಫೈನಾನ್ಸ್’ ಅಂಕಿ-ಅಂಶಗಳ ಪ್ರಕಾರ, 2025ರಲ್ಲಿ ಐಪಿಎಲ್ ಬ್ರಾ್ಯಂಡ್ ಮೌಲ್ಯ ಶೇಕಡ 20 ಕುಸಿತ ಕಂಡಿದೆ.
2024ರಲ್ಲಿ 1.07 ಲಕ್ಷ ಕೋಟಿ ರೂ. (12 ಶತಕೋಟಿ ಡಾಲರ್) ಇದ್ದ ಐಪಿಎಲ್ ಬ್ರ್ಯಾಂಡ್ಮೌಲ್ಯ ಈಗ 86,356 ಕೋಟಿ ರೂ.ಗೆ (9.6 ಶತಕೋಟಿ ಡಾಲರ್) ಕುಸಿತ ಕಂಡಿದೆ. ಅಂದರೆ ಐಪಿಎಲ್ ಒಂದೇ ವರ್ಷದಲ್ಲಿ ಬರೋಬ್ಬರಿ 21,521 ಕೋಟಿ ರೂ. ನಷ್ಟು ಬ್ರ್ಯಾಂಡ್ ಮೌಲ್ಯ ನಷ್ಟ ಅನುಭವಿಸಿದೆ. 2025ರ ಅಕ್ಟೋಬರ್ನಲ್ಲಿ ಡಿ ಆಂಡ್ ಪಿ ಅಡ್ವೈಸರಿ ಎಂಬ ಇನ್ನೊಂದು ಪ್ರಮುಖ ಮೌಲ್ಯಮಾಪನ ಸಂಸ್ಥೆಯೂ ಬಹುತೇಕ ಇದೇ ರೀತಿಯ ವರದಿಯನ್ನು ನೀಡಿತ್ತು ಮತ್ತು ಐಪಿಎಲ್ ಬ್ರಾ್ಯಂಡ್ ಮೌಲ್ಯ ಹಾಲಿ ವರ್ಷ ಕುಸಿತ ಕಂಡಿದೆ ಎಂದಿತ್ತು. ಐಪಿಎಲ್ ಜತೆಗೆ ಟೂರ್ನಿಯಲ್ಲಿ ಆಡುವ ಎಲ್ಲ 10 ತಂಡಗಳ ಬ್ರ್ಯಾಂಡ್ ಮೌಲ್ಯವೂ ಏರಿಳಿತ ಕಂಡಿರುವುದು ಕಳವಳಕಾರಿ.
ಕ್ರಿಕೆಟ್ ಶ್ರೀಮಂತಿಕೆಗೆ ಇದು ಹಿನ್ನಡೆಯೂ ಆಗಿದೆ. ಆರಂಭಿಕ ಆವೃತ್ತಿಯಿಂದಲೂ ಐಪಿಎಲ್ ಬ್ರಾ್ಯಂಡ್ ಮೌಲ್ಯ ಪ್ರಗತಿಯನ್ನೇ ಕಾಣುತ್ತ ಬಂದಿತ್ತು. ಆದರೆ 2020ರಲ್ಲಿ ಕರೊನಾ ಸೋಂಕಿನಿಂದಾಗಿ ಹಲವಾರು ನಿರ್ಬಂಧಗಳ ನಡುವೆ, ಪ್ರೇಕ್ಷಕರೂ ಇಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳು ನಡೆದ ಕಾರಣ ಆಗ ಮೊದಲ ಬಾರಿಗೆ ಬ್ರ್ಯಾಂಡ್ ಮೌಲ್ಯ ಕುಸಿತ ಕಂಡಿತ್ತು. ಆ ನಂತರ ಇದೇ ಮೊದಲ ಬಾರಿಗೆ ಐಪಿಎಲ್ ಬ್ರ್ಯಾಂಡ್ ಮೌಲ್ಯ ಕುಸಿತದ ಬಗ್ಗೆ ವರದಿ ಬಂದಿದೆ.
ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಬ್ರ್ಯಾಂಡ್ ಮೌಲ್ಯ ಈ ಬಾರಿ ಕಳೆದ ವರ್ಷಕ್ಕಿಂತ ಶೇ. 9 ಕುಸಿತ ಕಂಡಿದೆ. ಆದರೂ ಟೂರ್ನಿಯ ಅತ್ಯಧಿಕ ಬ್ರ್ಯಾಂಡ್ ಮೌಲ್ಯ ಹೊಂದಿರುವ ತಂಡವೆಂಬ ಹೆಗ್ಗಳಿಕೆಯನ್ನು ಮರಳಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಳೆದ ಆವೃತ್ತಿಯಲ್ಲಿ ಮತ್ತೆ ಪ್ಲೇಆಫ್ ಹಂತಕ್ಕೇರಿದ್ದು, ಹಾರ್ದಿಕ್ ಪಾಂಡ್ಯ ನಾಯಕತ್ವವನ್ನು ಅಭಿಮಾನಿಗಳು ಒಪ್ಪಿಕೊಂಡಿರುವುದು ಮೌಲ್ಯ ಹೆಚ್ಚಿನ ಕುಸಿತ ಕಾಣದಂತೆ ತಡೆದಿದೆ.
ಐಪಿಎಲ್ ಟ್ರೋಫಿ ಗೆಲ್ಲುವ 18 ವರ್ಷಗಳ ಕನಸನ್ನು ಕೊನೆಗೂ ನನಸಾಗಿಸಿಕೊಂಡಿರುವ ಆರ್ಸಿಬಿ ತಂಡದ ಬ್ರ್ಯಾಂಡ್ ಮೌಲ್ಯ ಈಗ 944 ಕೋಟಿ ರೂ. ಆಗಿದೆ. ಇದು ಕಳೆದ ವರ್ಷಕ್ಕಿಂತ ಶೇ. 10 ಕುಸಿತವಾಗಿದೆ. ಆದರೂ ಐಪಿಎಲ್ ತಂಡಗಳ ಬ್ರ್ಯಾಂಡ್ಮೌಲ್ಯಗಳ ಪಟ್ಟಿಯಲ್ಲಿ ಚೆನ್ನೈ ಸೂಪರ್ಕಿಂಗ್ಸ್ ತಂಡವನ್ನು ಹಿಂದಿಕ್ಕಿ, ಮೂರರಿಂದ ಎರಡನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ. ಟೂರ್ನಿಯುದ್ದಕ್ಕೂ ಬಲಿಷ್ಠ ನಿರ್ವಹಣೆ ತೋರಿ ಪ್ರಶಸ್ತಿ ಕನಸು ನನಸಾಗಿಸಿಕೊಂಡಿದ್ದು, ತಂಡದ ಮೌಲ್ಯಕ್ಕೆ ಹೆಚ್ಚಿನ ಹೊಡೆತ ಬೀಳುವುದನ್ನು ತಪ್ಪಿಸಿದೆ.
ನಾಯಕ ಎಂಎಸ್ ಧೋನಿ ಅವರ ಆಟ ಕಳೆಗುಂದಿರುವ ನಡುವೆ, 2025ರ ಆವೃತ್ತಿಯ ಅಂಕಪಟ್ಟಿಯಲ್ಲಿ ಕೊನೇ ಸ್ಥಾನಕ್ಕೆ ಕುಸಿದಿದ್ದು 5 ಬಾರಿಯ ಚಾಂಪಿಯನ್ ಸಿಎಸ್ಕೆ ತಂಡದ ಬ್ರ್ಯಾಂಡ್ ಮೌಲ್ಯಕ್ಕೂ ಭಾರಿ ಹೊಡೆತ ನೀಡಿದೆ. ಕಳೆದ ವರ್ಷಕ್ಕಿಂತ ಶೇ. 24 ಕುಸಿತ ಕಂಡಿರುವ ಸಿಎಸ್ಕೆ ಬ್ರಾ್ಯಂಡ್ ಮೌಲ್ಯ ಈಗ 836 ಕೋಟಿ ರೂ.ಗೆ ಇಳಿದಿದೆ. ಮೈದಾನದಲ್ಲಿ ತೋರಿದ ಅಸ್ಥಿರ ನಿರ್ವಹಣೆ ತಂಡದ ಮೌಲ್ಯದ ಮೇಲೂ ನೇರ ಪರಿಣಾಮ ಬೀರಿದೆ.
2024ರ ಆವೃತ್ತಿಯ ಚಾಂಪಿಯನ್ ಕೆಕೆಆರ್ ತಂಡ 2025ರಲ್ಲಿ ಅದೇ ನಿರ್ವಹಣೆಯನ್ನು ಪುನರಾವರ್ತಿಸಲು ವಿಫಲವಾಯಿತು. ಇದು ತಂಡದ ಬ್ರ್ಯಾಂಡ್ ಮೌಲ್ಯಕ್ಕೂ ದೊಡ್ಡ ಹೊಡೆತವನ್ನೇ ನೀಡಿತು. ಶೇ. 33 ಕುಸಿತ ಕಂಡಿರುವ ಕೆಕೆಆರ್ ಬ್ರ್ಯಾಂಡ್ ಮೌಲ್ಯ ಈಗ 665 ಕೋಟಿ ರೂ.ಗೆ ಇಳಿದಿದೆ. ನಿರೀಕ್ಷಿತ ನಿರ್ವಹಣೆ ತೋರಿಸಲಾಗದೆ 2025ರ ಆವೃತ್ತಿಯ ಅಂಕಪಟ್ಟಿಯಲ್ಲಿ ಕೆಕೆಆರ್ 8ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಆದರೆ ಐಪಿಎಲ್ ತಂಡಗಳ ಬ್ರ್ಯಾಂಡ್ ಮೌಲ್ಯದಲ್ಲಿ ಕೆಕೆಆರ್ 4ನೇ ಸ್ಥಾನವನ್ನೇ ಕಾಯ್ದುಕೊಂಡಿದೆ.
ಶುಭಮಾನ್ ಗಿಲ್ ಸಾರಥ್ಯದಲ್ಲಿ 2025ರಲ್ಲಿ ಫೈನಲ್ಗೇರಲು ವಿಫಲವಾದರೂ, ಲೀಗ್ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದುಕೊಂಡಿದ್ದ ಗುಜರಾತ್ ಟೈಟಾನ್ಸ್, ಬ್ರಾ್ಯಂಡ್ ಮೌಲ್ಯ ಶೇ. 2 ಏರಿಕೆ ಕಂಡಿದೆ. ಗುಜರಾತ್ ಟೂರ್ನಿಯ 10 ತಂಡಗಳ ಪೈಕಿ ಬ್ರಾ್ಯಂಡ್ ಮೌಲ್ಯದಲ್ಲಿ ಪ್ರಗತಿ ಕಂಡ ಏಕೈಕ ತಂಡವೆನಿಸಿದೆ. ಯುವ ಆಟಗಾರರ ಮೇಲೆ ತಂಡ ಇಟ್ಟಿರುವ ಭರವಸೆ ಮತ್ತು ಅವರ ಚೇತೋಹಾರಿ ನಿರ್ವಹಣೆ ಇದಕ್ಕೆ ಕಾರಣವಾಗಿದೆ. ಗುಜರಾತ್ ಬ್ರಾ್ಯಂಡ್ ಮೌಲ್ಯ ಈಗ 629 ಕೋಟಿ ರೂ.ಗೆ ಏರಿದೆ. ಈ ಮೂಲಕ ಐಪಿಎಲ್ ತಂಡಗಳ ಬ್ರ್ಯಾಂಡ್ ಮೌಲ್ಯದ ಪಟ್ಟಿಯಲ್ಲಿ 8ರಿಂದ 5ನೇ ಸ್ಥಾನಕ್ಕೆ ಜಿಗಿತ ಕಂಡಿದೆ.
ಶ್ರೇಯಸ್ ಅಯ್ಯರ್ ಸಾರಥ್ಯದಲ್ಲಿ 11 ವರ್ಷಗಳ ಬಳಿಕ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದ ಪಂಜಾಬ್ ಕಿಂಗ್ಸ್ ತಂಡ, ಲೀಗ್ ಹಂತದ ಅಂಕಪಟ್ಟಿಯಲ್ಲೂ ಅಗ್ರಸ್ಥಾನ ಅಲಂಕರಿಸಿತ್ತು. ಇದರ ಹೊರತಾಗಿಯೂ ತಂಡದ ಬ್ರ್ಯಾಂಡ್ ಮೌಲ್ಯ ಕಳೆದ ವರ್ಷಕ್ಕಿಂತ ಶೇ. 3 ಕುಸಿತ ಕಂಡಿದೆ. ಆದರೆ 593 ಕೋಟಿ ರೂ. ಬ್ರ್ಯಾಂಡ್ಮೌಲ್ಯದೊಂದಿಗೆ ಟೂರ್ನಿಯ 10 ತಂಡಗಳ ಪಟ್ಟಿಯಲ್ಲಿ 9ರಿಂದ 6ನೇ ಸ್ಥಾನಕ್ಕೆ ಪ್ರಗತಿ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಹರಾಜಿನಲ್ಲಿ ದಾಖಲೆಯ 27 ಕೋಟಿ ರೂ.ಗೆ ಲಖನೌ ತಂಡವನ್ನು ಸೇರಿ ನಾಯಕತ್ವವನ್ನೂ ಪಡೆದ ರಿಷಭ್ ಪಂತ್, ಮೈದಾನದಲ್ಲಿ ತಂಡದಿಂದ ನಿರೀಕ್ಷಿತ ನಿರ್ವಹಣೆ ಹೊರಹೊಮ್ಮಿಸಲು ವಿಫಲರಾದರು. ಆದರೆ ಇದು ತಂಡದ ಬ್ರ್ಯಾಂಡ್ಮೌಲ್ಯದ ಮೇಲೆ ದೊಡ್ಡ ಮಟ್ಟದ ಹೊಡೆತವನ್ನು ನೀಡದಿರುವುದು ಅಚ್ಚರಿಯಾಗಿದೆ. ಶೇ. 2 ಮಾತ್ರ ಕುಸಿತ ಕಂಡಿರುವ ಲಖನೌ ಬ್ರಾ್ಯಂಡ್ ಮೌಲ್ಯ 530 ಕೋಟಿ ರೂ.ಗೆ ಇಳಿದಿದೆ. ಆದರೂ ಐಪಿಎಲ್ ತಂಡಗಳ ಬ್ರಾ್ಯಂಡ್ ಮೌಲ್ಯದ ಪಟ್ಟಿಯಲ್ಲಿ ಕೊನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಪ್ರಗತಿ ಸಾಧಿಸುವಲ್ಲಿ ಯಶಸ್ಸು ಕಂಡಿದೆ.
ಕನ್ನಡಿಗ ಕೆಎಲ್ ರಾಹುಲ್, ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಸೇರ್ಪಡೆಯೊಂದಿಗೆ ಅಕ್ಷರ್ ಪಟೇಲ್, ಕುಲದೀಪ್ ಯಾದವ್ರಂಥ ಪ್ರಮುಖ ಆಟಗಾರರನ್ನು ಒಳಗೊಂಡ ಸಮತೋಲನದ ತಂಡವನ್ನು ಹೊಂದಿದ್ದರೂ ಡೆಲ್ಲಿ ತಂಡದ ಬ್ರಾ್ಯಂಡ್ ಮೌಲ್ಯ ಕುಸಿತ ಕಂಡಿದೆ. 2025ರ ಆವೃತ್ತಿಯಲ್ಲಿ ಸ್ವಲ್ಪದರಲ್ಲಿ ಪ್ಲೇಆಫ್ ಪ್ರವೇಶ ತಪ್ಪಿಸಿಕೊಂಡಿದ್ದ ಡೆಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಇದರಿಂದ ತಂಡದ ಬ್ರ್ಯಾಂಡ್ ಮೌಲ್ಯ ಕಳೆದ ವರ್ಷಕ್ಕಿಂತ ಶೇ. 26 ಕುಸಿತ ಕಂಡಿದ್ದು, 530 ಕೋಟಿ ರೂ.ಗೆ ಇಳಿದಿದೆ. 10 ತಂಡಗಳ ಬ್ರ್ಯಾಂಡ್ ಮೌಲ್ಯದ ಪಟ್ಟಿಯಲ್ಲೂ 7ರಿಂದ 8ನೇ ಸ್ಥಾನಕ್ಕಿಳಿದಿದೆ.
ಸ್ಪೋಟಕ ಬ್ಯಾಟರ್ಗಳೊಂದಿಗೆ ಪ್ರತಿ ಪಂದ್ಯದಲ್ಲೂ 300ಕ್ಕೂ ಅಧಿಕ ಮೊತ್ತ ಪೇರಿಸುವ ಕನಸಿನೊಂದಿಗೆ ಕಣಕ್ಕಿಳಿದ ಸನ್ರೈಸರ್ಸ್ ತಂಡ ಮೈದಾನದಲ್ಲಿ ಇದನ್ನು ನನಸಾಗಿಸಿಕೊಳ್ಳುವಲ್ಲಿ ಯಶಸ್ಸು ಕಾಣಲಿಲ್ಲ. ಇದರಿಂದ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಇದು ಬ್ರ್ಯಾಂಡ್ ಮೌಲ್ಯಕ್ಕೂ ದೊಡ್ಡ ಹೊಡೆತವನ್ನು ನೀಡಿದ್ದು, ಶೇ. 34 ಕುಸಿತದೊಂದಿಗೆ ಒಟ್ಟು ಮೌಲ್ಯ 503 ಕೋಟಿ ರೂ.ಗೆ ಇಳಿದಿದೆ.
ರಾಹುಲ್ ದ್ರಾವಿಡ್ ಮಾರ್ಗದರ್ಶನ, ಸಂಜು ಸ್ಯಾಮ್ಸನ್ ನಾಯಕತ್ವ, ವೈಭವ್ ಸೂರ್ಯವಂಶಿಯಂಥ ಯುವ ಆಟಗಾರ ಸಿಕ್ಸರ್ ಆರ್ಭಟದೊಂದಿಗೆ ಮೂಡಿಸಿದ ಸಂಚಲನದ ನಡುವೆಯೂ ರಾಜಸ್ಥಾನ ರಾಯಲ್ಸ್ ತಂಡ ಬ್ರಾ್ಯಂಡ್ ಮೌಲ್ಯ ದೊಡ್ಡ ಮಟ್ಟದ ಕುಸಿತ ಕಾಣುವುದನ್ನು ತಡೆಯುವಲ್ಲಿ ಸಫಲವಾಗಲಿಲ್ಲ. ಟೂರ್ನಿಯ 10 ತಂಡಗಳ ಪೈಕಿ ಅತ್ಯಧಿಕ ಶೇ. 35 ಕುಸಿತದೊಂದಿಗೆ ಒಟ್ಟು ಮೌಲ್ಯ 476 ಕೋಟಿ ರೂ.ಗೆ ಇಳಿದಿದೆ. ಇದರಿಂದ ಬ್ರ್ಯಾಂಡ್ ಮೌಲ್ಯದ ಪಟ್ಟಿಯಲ್ಲಿ 2024ರಲ್ಲಿ 6ನೇ ಸ್ಥಾನದಲ್ಲಿದ್ದ ಆರ್ಆರ್, ಈ ಬಾರಿ ಕೊನೇ ಸ್ಥಾನಕ್ಕೆ ಕುಸಿದಿದೆ.
2025ರ ಐಪಿಎಲ್ ಟೂರ್ನಿ ಹಲವಾರು ಅಡೆತಡೆಗಳನ್ನು ಎದುರಿಸಿತು. ಪ್ರಮುಖವಾಗಿ ಭಾರತ-ಪಾಕಿಸ್ತಾನ ನಡುವಿನ ಯುದ್ಧದ ವಾತಾವರಣ ಟೂರ್ನಿಗೆ ಸಂಕಷ್ಟ ತಂದೊಡ್ಡಿತು. ಆಪರೇಶನ್ ಸಿಂಧೂರದ ಸಮಯದಲ್ಲಿ ಟೂರ್ನಿ ಅರ್ಧದಲ್ಲೇ ಸ್ಥಗಿತಗೊಂಡಿತು. ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯ, ವೈಮಾನಿಕ ದಾಳಿ ಭೀತಿಯಿಂದ ಮೊಟಕುಗೊಂಡಿತ್ತು. 10 ದಿನಗಳ ವಿರಾಮದ ನಂತರ, ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಟೂರ್ನಿ ಪುನರಾರಂಭಗೊಂಡಿತ್ತು. ಈ ಗೊಂದಲಗಳು ಟೂರ್ನಿಯ ಬ್ರ್ಯಾಂಡ್ ಮೌಲ್ಯದ ಮೇಲೂ ಪರಿಣಾಮ ಬೀರಿವೆ.
ಇನ್ನು 2025ರ ಆವೃತ್ತಿಗೆ ಮುನ್ನ ಮೆಗಾ ಹರಾಜಿನ ಬಗ್ಗೆಯೂ ಗೊಂದಲಗಳಿದ್ದವು. ಫ್ರಾಂಚೈಸಿಗಳ ವಿರೋಧದಿಂದಾಗಿ ಮೆಗಾ ಹರಾಜು ನಡೆಯುವ ಬಗ್ಗೆಯೂ ಅನುಮಾನಗಳಿದ್ದವು. ಇದು ಕೂಡ ಬ್ರ್ಯಾಂಡ್ ಮೌಲ್ಯಕ್ಕೆ ನಕಾರಾತ್ಮಕವಾಗಿ ಪರಿಣಮಿಸಿದೆ. ಆನ್ಲೈನ್ ಗೇಮಿಂಗ್ ಕಂಪನಿಗಳು ಐಪಿಎಲ್ ಟೂರ್ನಿ ಮತ್ತು ತಂಡಗಳ ಪ್ರಾಯೋಜಕತ್ವದ ಬೆನ್ನೆಲುಬಾಗಿದ್ದವು. ಐಪಿಎಲ್ ಬೆನ್ನಲ್ಲೇ ಕೇಂದ್ರ ಸರ್ಕಾರ, ಗೇಮಿಂಗ್ ನಿಷೇಧಿಸುವ ಕಾಯ್ದೆ ಜಾರಿಗೊಳಿಸಿರುವುದು ಕೂಡ ಬ್ರ್ಯಾಂಡ್ ಮೌಲ್ಯಕ್ಕೆ ಹೊಡೆತ ನೀಡಿದೆ.
ಆನ್ಲೈನ್ ಗೇಮಿಂಗ್ ನಿಷೇಧದಿಂದ ಐಪಿಎಲ್ 2 ಸಾವಿರ ಕೋಟಿ ರೂ.ವರೆಗೂ ನಷ್ಟ ಅನುಭವಿಸುವಂತಾಗಿದೆ. ಇನ್ನು ಡಿಸ್ನಿ ಸ್ಟಾರ್ ಮತ್ತು ವಯಾಕಾಮ್ 18 ವಿಲೀನಗೊಂಡಿರುವುದರಿಂದ ‘ಜಿಯೋಸ್ಟಾರ್’ ಸಂಸ್ಥೆ ಸೃಷ್ಟಿಯಾಗಿದ್ದು, ಇದು ಪ್ರಸಾರ ಹಕ್ಕು ಖರೀದಿಯ ಪೈಪೋಟಿಯನ್ನು ತಪ್ಪಿಸಿ, ಏಕಪಕ್ಷೀಯಗೊಳಿಸಿದೆ. ಇದು ಕೂಡ ಐಪಿಎಲ್ ಬ್ರಾ್ಯಂಡ್ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ.