ಐಪಿಎಲ್ ಬ್ಲ್ಯಾಕ್ ಟಿಕೆಟ್ ದಂಧೆ
- ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್ಸಿಬಿ ನಡುವಿನ ಪಂದ್ಯ ನೋಡಲು ಬಂದಿದ್ದ ಅಭಿಮಾನಿಗಳಿಗೆ ಬರೆ
- ಬರೋಬ್ಬರಿ 8ರಿಂದ 80,000 ರೂ. ವರೆಗೆ ಟಿಕೆಟ್‌ಗಳನ್ನು ಬ್ಲ್ಯಾಕ್‌ನಲ್ಲಿ ಮಾರಾಟ
ನವದೆಹಲಿ: ಐಪಿಎಲ್ ಕ್ರಿಕೆಟ್ ಪಂದ್ಯಗಳ ಟಿಕೆಟ್‌ಗಳನ್ನು ಬ್ಲ್ಯಾಕ್ ಮಾರ್ಕೆಟ್ನಲ್ಲಿ ದುಬಾರಿ ಮೊತ್ತಕ್ಕೆ ಮಾರಾಟ ಮಾಡುತ್ತಿರುವುದು ಇದೇ ಮೊದಲಲ್ಲ. ಕಳೆದ ಬಾರಿ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ ಪಂದ್ಯಕ್ಕೆ ವ್ಯಕ್ತಿಯೊಬ್ಬ ಕ್ರಿಕೆಟ್ ಅಭಿಮಾನಿಗಳಿಂದ 15ರಿಂದ 20 ಸಾವಿರ ರೂ.ವರೆಗೆ ಟಿಕೆಟ್ ಮಾರಾಟ ಮಾಡಿದ್ದ. ಈತನನ್ನು ಬಂಧಿಸಿದ ಬಳಿಕ ಮತ್ತೊಂದು ಆರ್ಸಿಬಿ ಮ್ಯಾಚ್ನಲ್ಲಿ ಬ್ಲ್ಯಾಕ್ ಟಿಕೆಟ್ ದಂಧೆ ಬಟಾಬಯಲಾಗಿದೆ.
ಈ ಪ್ರಕರಣವನ್ನು ಭೇದಿಸಿರುವ ದೆಹಲಿ ಪೊಲೀಸರು, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್ಸಿಬಿ ನಡುವಿನ ಪಂದ್ಯ ನೋಡಲು ಬಂದಿದ್ದ ಅಭಿಮಾನಿಗಳಿಗೆ ಬರೋಬ್ಬರಿ 8ರಿಂದ 80,000 ರೂ. ವರೆಗೆ ಟಿಕೆಟ್‌ಗಳನ್ನು ಬ್ಲ್ಯಾಕ್‌ನಲ್ಲಿ ಮಾರಾಟ ಮಾಡಿದ್ದಾರೆ. ಈ ಜಾಲವನ್ನು ಬಯಲು ಮಾಡಿರುವ ಖಾಕಿ, ಜಿಲ್ಲಾ ಕ್ರಿಕೆಟ್ ಸಂಸ್ಥೆಯ (DDCA) ಉನ್ನತ ಅಧಿಕಾರಿಯೊಬ್ಬರೇ ಈ ದಂಧೆ ಹಿಂದಿರುವ ಮಾಸ್ಟರ್‌ಮೈಂಡ್ ಎಂಬ ಆಘಾತಕಾರಿ ಮಾಹಿತಿಯನ್ನು ತನಿಖೆ ಮೂಲಕ ಖಚಿತಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಅಷ್ಟಕ್ಕೂ ಆಗಿದ್ದೇನು?
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್ಸಿಬಿ ನಡುವಿನ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ಅವರು ನೋಡಲು ಅಭಿಮಾನಿಗಳು ಎಂದಿನಂತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಕಿಡಿಗೇಡಿಗಳು, ಕಾಂಪ್ಲಿಮೆಂಟರಿ ಪಾಸ್‌ಗಳನ್ನು ಬ್ಲ್ಯಾಕ್‌ನಲ್ಲಿ ಸೇಲ್ ಮಾಡಿದ್ದಾರೆ. ಆರೋಪಿಗಳಾದ ಮುಕೀಮ್, ಗುಫ್ರಾನ್ ಮತ್ತು ಮೊಹಮ್ಮದ್ ಫೈಸಲ್ ಎಂಬ ಮೂವರನ್ನು ಸದ್ಯ ಪೊಲೀಸರು ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ. ವಿಚಾರಣೆಯ ವೇಳೆ ಪಂಕಜ್ ಯಾದವ್ ಎಂಬ ಪೆಟ್ರೋಲ್ ಬಂಕ್ ಉದ್ಯೋಗಿಯನ್ನೂ ವಶಕ್ಕೆ ಪಡೆಯಲಾಗಿದೆ.
80,000 ರೂ. ವರೆಗೆ ಮಾರಾಟ!
ಖಾಕಿ ಮೂಲಗಳ ಪ್ರಕಾರ, ಇದೊಂದು ವ್ಯವಸ್ಥಿತ ಜಾಲವಾಗಿದ್ದು, ಪಂದ್ಯದ ಕ್ರೇಜ್ ಹಾಗೂ ಆಟಗಾರರ ಸ್ಟಾರ್ ವ್ಯಾಲ್ಯೂ ಆಧರಿಸಿ ಟಿಕೆಟ್ ದರವನ್ನು ಡಬಲ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಆಡುವ ಪಂದ್ಯಕ್ಕೆ ಅತಿ ಹೆಚ್ಚು ಬೇಡಿಕೆ ಇದ್ದಿದ್ದರಿಂದ, ಒಂದು ಉಚಿತ ಪಾಸ್ ಅನ್ನು ಬರೋಬ್ಬರಿ 8ರಿಂದ 80,000 ರೂ.ವರೆಗೆ ಮಾರಾಟ ಮಾಡಲಾಗಿದೆ. ಪ್ರತಿ ಪಂದ್ಯದಲ್ಲೂ ಹೀಗೆ 1,000ಕ್ಕೂ ಅಧಿಕ ಟಿಕೆಟ್‌ಗಳನ್ನು ದುಬಾರಿ ಬೆಲೆಗೆ ಮಾರಿ ಅಭಿಮಾನಿಗಳಿಗೆ ಮೋಸ ಮಾಡಿದ್ದಾರೆ.
ತನಿಖೆ ಚುರುಕು
ಬಿಸಿಸಿಐ ನಿಯಮಾವಳಿಗಳ ಪ್ರಕಾರ, ಸ್ಥಳೀಯ ಫ್ರಾಂಚೈಸಿಯು ಒಟ್ಟು ಟಿಕೆಟ್‌ಗಳ ಶೇ.10ರಿಂದ 15ರಷ್ಟನ್ನು ಆತಿಥೇಯ ಸಂಸ್ಥೆಗೆ (DDCA) ಉಚಿತ ಪಾಸ್‌ಗಳಾಗಿ ನೀಡುತ್ತದೆ. ಇದೇ ಪಾಸ್‌ಗಳನ್ನು ಈಗ ದಂಧೆಕೋರರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಹಿರಿಯ ಅಧಿಕಾರಿಗಳು ಸೇರಿ ನಾಲ್ಕು ಡಿಡಿಸಿಎ ಅಧಿಕಾರಿಗಳನ್ನು ಪೊಲೀಸರು ಸುಮಾರು 5 ಗಂಟೆಗಳ ಕಾಲ ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದಾರೆ,(ಏಜೆನ್ಸೀಸ್).