ಇಂದು ಅಬುಧಾಬಿಯಲ್ಲಿ ಐಪಿಎಲ್ ಮಿನಿ ಹರಾಜು; ಗ್ರೀನ್, ವೆಂಕಟೇಶ್, ಪಥಿರಣಗೆ ಬೇಡಿಕೆ ನಿರೀಕ್ಷೆ
ಅಬುಧಾಬಿ: ಮುಂದಿನ ವರ್ಷದ ಐಪಿಎಲ್ (IPL) 19ನೇ ಆವೃತ್ತಿಗೆ ಪೂರ್ವಭಾವಿಯಾಗಿ ಆಟಗಾರರ ಮಿನಿ ಹರಾಜು (mini-auction) ಪ್ರಕ್ರಿಯೆ ಮಂಗಳವಾರ ಅಬುಧಾಬಿಯಲ್ಲಿ ನಡೆಯಲಿದೆ. ಆಲ್ರೌಂಡರ್ಗಳಾದ ಕ್ಯಾಮರಾನ್ ಗ್ರೀನ್, ವೆಂಕಟೇಶ್ ಅಯ್ಯರ್, ಲಿಯಾಮ್ ಲಿವಿಂಗ್ಸ್ಟೋನ್, ವೇಗಿ ಮಥೀಶ ಪಥಿರಣ ಮತ್ತು ಸ್ಪಿನ್ನರ್ ರವಿ ಬಿಷ್ಣೋಯಿ ದೊಡ್ಡ ಮೊತ್ತದ ಬೇಡಿಕೆ ಪಡೆಯುವ ನಿರೀಕ್ಷೆ ಇದೆ. ವಿಶ್ವದ ಶ್ರೀಮಂತ ಟಿ20 ಲೀಗ್ನ 10 ತಂಡಗಳು ಮಿನಿ ಹರಾಜಿನಲ್ಲಿ 31 ವಿದೇಶಿಯರ ಸಹಿತ ಒಟ್ಟು 77 ಆಟಗಾರರನ್ನು ಖರೀದಿಸಲು ಅವಕಾಶವಿದೆ. 350 ಆಟಗಾರರು ಪೈಪೋಟಿಯಲ್ಲಿದ್ದು, ಈ ಪೈಕಿ 247 ಭಾರತೀಯರು ಮತ್ತು 112 ವಿದೇಶಿ ಆಟಗಾರರಾಗಿದ್ದಾರೆ.
ಮಿನಿ ಹರಾಜಿನಲ್ಲಿ ಆಟಗಾರರ ಖರೀದಿಗೆ 10 ತಂಡಗಳು ಒಟ್ಟು 237.55 ಕೋಟಿ ರೂ. ಬಜೆಟ್ ಹೊಂದಿವೆ. ಈ ಪೈಕಿ ಕೋಲ್ಕತ ನೈಟ್ರೈಡರ್ಸ್ ತಂಡ ಸರ್ವಾಧಿಕ 64.30 ಕೋಟಿ ರೂ. ಮತ್ತು ಚೆನ್ನೈ ಸೂಪರ್ಕಿಂಗ್ಸ್ 43.40 ಕೋಟಿ ರೂ. ಹೊಂದಿವೆ. ಮುಂಬೈ ಇಂಡಿಯನ್ಸ್ ಕನಿಷ್ಠ 2.75 ಕೋಟಿ ರೂ. ಮಾತ್ರ ಹೊಂದಿದೆ. ಹಾಲಿ ಚಾಂಪಿಯನ್ ಆರ್ಸಿಬಿ ತಂಡ 16.40 ಕೋಟಿ ರೂ. ಹೊಂದಿದ್ದು, ಹರಾಜಿನಲ್ಲಿ ಗರಿಷ್ಠ 8 ಆಟಗಾರರನ್ನಷ್ಟೇ (2 ವಿದೇಶಿ) ಖರೀದಿಸಲು ಅವಕಾಶವಿದೆ. ಮಿನಿ ಹರಾಜಿನಲ್ಲಿ ರೈಟ್ ಟು ಮ್ಯಾಚ್ (ಆರ್ಟಿಎಂ) ಕಾರ್ಡ್ ಬಳಸಲು ಅವಕಾಶವಿಲ್ಲ.
ಆಸ್ಟ್ರೆಲಿಯಾದ ಕ್ಯಾಮರಾನ್ ಗ್ರೀನ್ ಹರಾಜಿಗೆ ಬ್ಯಾಟರ್ ಎಂದು ತಪ್ಪಾಗಿ ಹೆಸರು ನೋಂದಾಯಿಸಿಕೊಂಡಿದ್ದರೂ, ಬೌಲಿಂಗ್ಗೂ ಫಿಟ್ ಆಗಿರುವೆ ಎಂದು ತಿಳಿಸಿರುವುದರಿಂದ "ಆಲ್ರೌಂಡರ್' ಆಗಿ ಭಾರಿ ಬಿಡ್ ಪಡೆಯುವ ನಿರೀಕ್ಷೆ ಇದೆ. ಇನ್ನು ಕಳೆದ ಹರಾಜಿನಲ್ಲಿ ದಾಖಲೆಯ 23.75 ಕೋಟಿ ರೂ.ಗೆ ಕೆಕೆಆರ್ ಪಾಲಾಗಿದ್ದ ವೆಂಕಟೇಶ್ ಅಯ್ಯರ್, ಈ ಬಾರಿ ಅಷ್ಟು ಮೊತ್ತಕ್ಕೆ ಅಲ್ಲದಿದ್ದರೂ, ಹೆಚ್ಚಿನ ಬೇಡಿಕೆಯನ್ನೇ ಪಡೆಯುವ ಸಾಧ್ಯತೆ ಇದೆ. ಮಾಲಿಂಗ ಬೌಲಿಂಗ್ ಶೈಲಿಯ ಲಂಕಾ ವೇಗಿ ಮಥೀಶ್ ಪಥಿರಣ ಸಿಎಸ್ಕೆ ತಂಡದಿಂದ ರಿಲೀಸ್ ಆಗಿರುವುದೇ ಅಚ್ಚರಿ. ಅವರನ್ನು ಖರೀದಿಸಲು ಕೂಡ ನಿಕಟ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. ದಿ ಹಂಡ್ರೆಡ್ನಲ್ಲಿ ಮಿಂಚಿರುವ ಇಂಗ್ಲೆಂಡ್ ಆಲ್ರೌಂಡರ್ ಲಿಯಾಮ್ ಲಿವಿಂಗ್ಸ್ಟೋನ್, ಟಿ20 ನಿವೃತ್ತಿ ಹಿಂಪಡೆದಿರುವ ದಣ ಆಫ್ರಿಕಾದ ವಿಕೆಟ್ ಕೀಪರ್&ಬ್ಯಾಟರ್ ಕ್ವಿಂಟನ್ ಡಿಕಾಕ್ ಕೂಡ ಹೆಚ್ಚಿನ ಬೇಡಿಕೆ ಪಡೆಯುವ ನಿರೀಕ್ಷೆ ಇದೆ.
*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.
ಹರಾಜಿನ ಮೊದಲ 5 ಸೆಟ್ಗಳು (ರೂಪಾಯಿಗಳಲ್ಲಿ)
ಸೆಟ್1 (ಬ್ಯಾಟರ್ಸ್): ಡೆವೊನ್ ಕಾನ್ವೇ, ಜೇಕ್ ಫ್ರೇಸರ್ ಮೆಕ್ಗುರ್ಕ್, ಕ್ಯಾಮರಾನ್ ಗ್ರೀನ್, ಡೇವಿಡ್ ಮಿಲ್ಲರ್ (ತಲಾ 2 ಕೋಟಿ ಮೂಲಬೆಲೆ), ಸ್ರಾರ್ಜ್ ಖಾನ್, ಪೃಥ್ವಿ ಷಾ (ತಲಾ ‘75 ಲಕ್ಷ).
ಸೆಟ್2 (ಆಲ್ರೌಂಡರ್ಸ್): ಗಸ್ ಅಟ್ಕಿನ್ಸನ್, ವಾನಿಂದು ಹಸರಂಗ, ವೆಂಕಟೇಶ್ ಅಯ್ಯರ್, ಲಿವಿಂಗ್ಸ್ಟೋನ್, ರಚಿನ್ ರವೀಂದ್ರ (ತಲಾ 2 ಕೋಟಿ), ವಿಯಾನ್ ಮಿಲ್ಡರ್ (1 ಕೋಟಿ), ದೀಪಕ್ ಹೂಡಾ (75 ಲಕ್ಷ).
ಸೆಟ್3 (ವಿಕೆಟ್ ಕೀಪರ್ಸ್): ಫಿನ್ ಅಲೆನ್, ಬೆನ್ ಡಕೆಟ್, ಜೇಮಿ ಸ್ಮಿತ್ (ತಲಾ 2 ಕೋಟಿ), ರಹಮಾನುಲ್ಲ ಗುರ್ಬಜ್ (1.5 ಕೋಟಿ), ಜಾನಿ ಬೇರ್ಸ್ಟೋ, ಕ್ವಿಂಟನ್ ಡಿಕಾಕ್ (ತಲಾ 1 ಕೋಟಿ), ಕೆಎಸ್ ಭರತ್ (75 ಲಕ್ಷ).
ಸೆಟ್4 (ವೇಗಿಗಳು): ಗೆರಾಲ್ಡ್ ಕೋಟ್ಜೀ, ಜೇಕಬ್ ಡಫಿ, ಮ್ಯಾಟ್ ಹೆನ್ರಿ, ಅನ್ರಿಚ್ ನೋರ್ಕಿಯಾ, ಮಥೀಶ ಪಥಿರಣ (ತಲಾ 2 ಕೋಟಿ), ಸ್ಪೆನ್ಸರ್ ಜಾನ್ಸನ್ (1.5 ಕೋಟಿ), ಆಕಾಶ್ದೀಪ್, ಜಲ್ಲಾಕ್ ಫಾರೂಖಿ (ತಲಾ 1 ಕೋಟಿ), ಶಿವಂ ಮಾವಿ (75 ಲಕ್ಷ).
ಸೆಟ್5 (ಸ್ಪಿನ್ನರ್ಸ್): ರವಿ ಬಿಷ್ಣೋಯಿ, ಅಕೀಲ್ ಹೊಸೈನ್, ಮುಜೀಬ್ ರೆಹಮಾನ್, ಮಹೀಶ್ ತೀಕ್ಷಣ (ತಲಾ 2 ಕೋಟಿ), ರಾಹುಲ್ ಚಹರ್ (1 ಕೋಟಿ).
ಮಹಾರಾಜ ಟ್ರೋಫಿ ಹಾಗೂ ಕೆಎಸ್ಸಿಎ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ರಾಜ್ಯದ ಉದಯೋನ್ಮುಖ ಆಟಗಾರರು ಸೇರಿ ಒಟ್ಟು 17 ಕ್ರಿಕೆಟಿಗರು ಈ ಬಾರಿಯ ಹರಾಜಿನ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಹಾಲಿ ಚಾಂಪಿಯನ್ ಆರ್ಸಿಬಿ ತಂಡ ಕೈ ಬಿಟ್ಟಿರುವ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ (75 ಲಕ್ಷ ರೂ.) ಗರಿಷ್ಠ ಮೂಲಬೆಲೆ ಹೊಂದಿರುವ ಕನ್ನಡಿಗ ಎನಿಸಿದ್ದಾರೆ. ಅಭಿನವ್ ಮನೋಹರ್, ವಿದ್ಯಾಧರ್ ಪಾಟೀಲ್, ವಿದ್ವತ್ ಕಾವೇರಪ್ಪ, ಕೆಎಲ್ ಶ್ರೀಜಿತ್, ಯಶ್ ರಾಜ್ ಪೂಂಜಾ, ಅಭಿಲಾಷ್ ಶೆಟ್ಟಿ, ಮನ್ವಂತ್ ಕುಮಾರ್, ಮನೋಜ್ ಭಾಂಡಗೆ, ಪ್ರವಿಣ್ ದುಬೆ, ಮ್ಯಾಕ್ನೀಲ್ ನೂರಾನ್ಹಾ, ಶುಭಾಂಗ್ ಹೆಗ್ಡೆ, ಶ್ರೀವತ್ಸ ಆಚಾರ್ಯ , ಹಾರ್ದಿಕ್ ರಾಜ್, ಮಾಧವ್ ಬಜಾಜ್, ತಲಾ 30 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ. ದೇಶೀಯ ಟೂರ್ನಿಯಲ್ಲಿ ಮಿಜೋರಾಂ ತಂಡ ಪ್ರತಿನಿಧಿಸುತ್ತಿರುವ ರಾಜ್ಯದ ಕೆ.ಸಿ ಕಾರ್ಯಪ್ಪ, ಜೆ. ಸುಚಿತ್ ಸಹ ಅಂತಿಮ ಪಟ್ಟಿಯಲ್ಲಿದ್ದಾರೆ. ದೇವದತ್ ಪಡಿಕ್ಕಲ್ (ಆರ್ಸಿಬಿ), ಕರುಣ್ ನಾಯರ್ (ಡೆಲ್ಲಿ), ಪ್ರಸಿದ್ಧ ಕೃಷ್ಣ (ಗುಜರಾತ್), ವೈಶಾಕ್ ವಿಜಯ್ ಕುಮಾರ್ (ಪಂಜಾಬ್) ಹಾಗೂ ಶ್ರೇಯಸ್ ಗೋಪಾಲ್ (ಸಿಎಸ್ಕೆ) ರಿಟೇನ್ ಆಗಿದ್ದಾರೆ.