- ಮುಂದಿನ ವರ್ಷದಿಂದ ಐಪಿಎಲ್ ಆವೃತ್ತಿ ಮಾರ್ಚ್ನಿಂದಲೇ ಆರಂಭ
- ಪಂದ್ಯಗಳ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ?
ನವದೆಹಲಿ: ಮೇ ತಿಂಗಳ ಕೊನೆಯಲ್ಲಿ ಆರ್ಸಿಬಿ ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿಯುವ ಮೂಲಕ ಐಪಿಎಲ್ 19ನೇ ಆವೃತ್ತಿ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿತು. ರಾಯಲ್ ಚಾಲೆಂಚರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್ ಸೇರಿ ಹಲವು ಬಲಿಷ್ಠ ತಂಡಗಳ ಜಬರ್ದಸ್ತ್ ಆಟವನ್ನು ಕಣ್ತುಂಬಿಕೊಳ್ಳಲು ಭಾರಿ ಉತ್ಸಾಹದಲ್ಲಿ ಕಾಯುವ ಟಿ20 ಕ್ರಿಕೆಟ್ ಪ್ರೇಮಿಗಳಿಗೆ ಇದೀಗ ಬಿಸಿಸಿಐ ಹೊಸ ನಿರ್ಧಾರ ಕುತೂಹಲ ಮೂಡಿಸಿದೆ.
ಐಪಿಎಲ್ ಹಬ್ಬಕ್ಕಾಗಿ ಪ್ರತಿ ವರ್ಷ ಮಾರ್ಚ್ ಕೊನೆಯ ವಾರದವರೆಗೂ ಕಾಯುತ್ತಿದ್ದ ಕ್ರಿಕೆಟ್ ಪ್ರಿಯರು, ಮುಂದಿನ ವರ್ಷ ಅಂದರೆ, 2027ರಿಂದ ಐಪಿಎಲ್ ಅನ್ನು ಮಾರ್ಚ್ನ ಆರಂಭದಲ್ಲೇ ಕಾಣುವ ಸಾಧ್ಯತೆಗಳಿವೆ. ಖುದ್ದಾಗಿ ಬಿಸಿಸಿಐ ಅಧಿಕಾರಿಗಳು ಪಂದ್ಯಗಳ ವೇಳಾಪಟ್ಟಿಯ ದಿನಾಂಕವನ್ನು ಬದಲಿಸಲು ಸಭೆ ನಡೆಸಿದ್ದು, ಮಾ.19ರಿಂದ ಆವೃತ್ತಿ ಆರಂಭಿಸಿ, ಮೇ.15ರೊಳಗೆ ಮುಗಿಸುವ ಬಗ್ಗೆ ಚರ್ಚಿಸಿದೆ.
ಈ ದಿಢೀರ್ ಬದಲಾವಣೆ ಏಕೆ?
ಮೇ ತಿಂಗಳ ದ್ವಿತೀಯಾರ್ಧದಲ್ಲಿ ದೇಶವ್ಯಾಪಿ ಹವಾಮಾನ ವೈಪರೀತ್ಯ ಉಂಟಾಗುತ್ತದೆ. ಹೀಗಾಗಿ, ಹಲವೆಡೆ ಮಳೆಯಿಂದ ಪಂದ್ಯಗಳು ರದ್ದು ಮತ್ತು ಮುಂದಿನ ದಿನಗಳಿಗೆ ಹೋಗುತ್ತದೆ. ಇದು ದಿನಗಳು ಮುಂದೂಡುವುದರಿಂದ ನಿಗದಿತ ಸಮಯಕ್ಕೆ ಮುಕ್ತಾಯವಾಗುವುದಿಲ್ಲ. ಈ ನಿಟ್ಟಿನಲ್ಲಿ, ಬದಲಾವಣೆ ಮುಖ್ಯ ಎಂದು ಬಿಸಿಸಿಐ ನಿರ್ಧರಿಸಿದೆ
ಈ ಕುರಿತು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾತನಾಡಿ, ಮೇ ತಿಂಗಳ ಕೊನೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಿರುತ್ತದೆ. ಇದು ಮೈದಾನದಲ್ಲಿ ಆಡುವ ಆಟಗಾರರಿಗಷ್ಟೇ ಅಲ್ಲ, ಸ್ಟೇಡಿಯಂನಲ್ಲಿ ಕುಳಿತು ಪಂದ್ಯ ವೀಕ್ಷಿಸುವ ಅಭಿಮಾನಿಗಳಿಗೂ ತುಂಬ ಕಷ್ಟವೇ. ಜೊತೆಗೆ ಮೇ ತಿಂಗಳ ಕೊನೆಯ ವಾರದಲ್ಲಿ ದೇಶದ ಹಲವು ಭಾಗಗಳಲ್ಲಿ ಮುಂಗಾರು ಮುನ್ಸೂಚನೆ ಹಾಗೂ ಪ್ರೀ-ಮಾನ್ಸೂನ್ ಮಳೆ ಆರಂಭವಾಗುವುದರಿಂದ ಪಂದ್ಯಗಳಿಗೆ ಅಡ್ಡಿಯಾಗುವ ಆತಂಕವೂ ಇದೆ ಎಂದರು.
ಪಂದ್ಯಗಳ ಸಂಖ್ಯೆಯಲ್ಲಿ ಹೆಚ್ಚಳವಿಲ್ಲ!
ಐಪಿಎಲ್ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಪಂದ್ಯಗಳ ಸಂಖ್ಯೆಯನ್ನು 74ರಿಂದ 94ಕ್ಕೆ ಏರಿಸಲಾಗುತ್ತದೆ ಎಂಬ ವದಂತಿಗಳು ಹರಿದಾಡಿವೆ. ಇದಕ್ಕೆ ಸ್ಪಷ್ಟನೆ ನೀಡಿದ ಸೈಕಿಯಾ, ಅಂತಾರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿ (FTP) ಈಗಲೇ ತುಂಬಿರುವುದರಿಂದ, ಸದ್ಯ ಭವಿಷ್ಯದಲ್ಲಿ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸುವ ಯಾವುದೇ ಪ್ಲ್ಯಾನ್ ಇಲ್ಲ ಎಂದು ಹೇಳಿದರು,(ಏಜೆನ್ಸೀಸ್).